ಬಿಜೆಪಿಗೆ 'ಗೋವಾದಲ್ಲಿ ಗೋ ಖಾತಾ'-'ಕರ್ನಾಟಕದಲ್ಲಿ ಗೋ ಮಾತಾ': ಕಾಂಗ್ರೆಸ್ ಟೀಕೆ

Update: 2021-02-25 15:36 GMT

ಬೆಂಗಳೂರು, ಫೆ.25: ದೇಶದ ವೈವಿಧ್ಯತೆಗಳ ಬಗ್ಗೆ ಅರಿವಿಲ್ಲದ ಇತ್ತೀಚಿಗೆ ಜನ್ಮತಳೆದ ಎಳೆ ಕೂಸು ರಾಜ್ಯ ಬಿಜೆಪಿ. ವಿವಿಧತೆಯಲ್ಲಿ ಏಕತೆ ಈ ದೇಶದ ಜೀವಸತ್ವ. ಭಾರತದ ಸಂಸ್ಕೃತಿ, ಭಾಷೆ, ಆಹಾರ, ರಾಜಕೀಯ ಎಲ್ಲವೂ ಆಯಾ ಪ್ರದೇಶಗಳಲ್ಲಿ ಭಿನ್ನವಾಗಿರುತ್ತವೆ. ‘ಗೋವಾದಲ್ಲಿ ಗೋ ಖಾತಾ’ ‘ಕರ್ನಾಟಕದಲ್ಲಿ ಗೋಮಾತಾ’ ನಿಮ್ಮದೇ ರಾಜಕೀಯ ನಿಲುವು ಭಿನ್ನವಿದೆಯಲ್ಲ ಏಕೆ? ಎಂದು ರಾಜ್ಯ ಕಾಂಗ್ರೆಸ್ ಟ್ವೀಟರ್‍ನಲ್ಲಿ ಪ್ರಶ್ನಿಸಿದೆ.

ಕೇಂದ್ರ ಸರಕಾರ ಹಾಗೂ ರಾಜ್ಯ ಬಿಜೆಪಿ ಸರಕಾರದ ನಿಲುವುಗಳ ವಿರುದ್ಧ ಸರಣಿ ಟ್ವೀಟ್‍ಗಳನ್ನು ಮಾಡಿರುವ ಕಾಂಗ್ರೆಸ್, ಒಂದೇ ತಿಂಗಳಲ್ಲಿ ಮೂರು ಬಾರಿ ಎಲ್‍ಪಿಜಿ ಗ್ಯಾಸ್ ದರ ಏರಿಕೆ. (25 ರೂ., 50 ರೂ., 25 ರೂ.) ಪ್ರಸ್ತುತ ಸಿಲಿಂಡರ್ ಒಂದರ ಬೆಲೆ 800 ರೂ. ರಾಜ್ಯ ಬಿಜೆಪಿ ನಿಮಗೇನೋ ಸಗಣಿ, ಗಂಜಲವಿದೆ. ಜನಸಾಮಾನ್ಯರು ಹೊಟ್ಟೆಗೇನು ತಿನ್ನಬೇಕು ಹೇಳಿ? ‘ಬಿಜೆಪಿ ಸಹವಾಸ, ಮೂರು ಹೊತ್ತೂ ಉಪವಾಸ’ ಎಂದು ಟೀಕಿಸಿದೆ.

ಜನಸಾಮಾನ್ಯರ ಬದುಕನ್ನು ‘ಬ್ರೇಕ್’ ಮಾಡುವ ಇಂದಿನ ‘ಬ್ರೇಕಿಂಗ್ ನ್ಯೂಸ್’. ಲೋಕಲ್ ಪ್ಯಾಸೆಂಜರ್ ರೈಲ್ವೆ ದರ ಏರಿಕೆ. ಬಿಎಂಟಿಸಿ ಬಸ್ ದರ ಏರಿಕೆಗೆ ಪ್ರಸ್ತಾವನೆ. ಎಲ್‍ಪಿಜಿ ಸಿಲಿಂಡರ್ 25ರೂ ಏರಿಕೆ. ಇಂದಿನ ಪೆಟ್ರೋಲ್ ದರ 93.98 ರೂಪಾಯಿ. ಈಗಾಗಲೇ ಕಂಗೆಟ್ಟಿರುವ ಜನತೆಯ ಮನದಾಳದ ಮಾತು. ‘ಬಿಜೆಪಿ ಸಹವಾಸ ಮೂರು ಹೊತ್ತೂ ಉಪವಾಸ’ ಎಂದು ಕಾಂಗ್ರೆಸ್ ದೂರಿದೆ.

ಸಾಧನೆಗಳಿಲ್ಲದಿದ್ದರೂ ಯೋಜನೆಗಳ ಹೆಸರು ಬದಲಿಸಿ ಇತಿಹಾಸ ಪುಸ್ತಕದಲ್ಲಿ ಸೇರುವ ಯತ್ನ ಬಿಜೆಪಿ ಮತ್ತು ನರೇಂದ್ರ ಮೋದಿ ಅವರದ್ದು. ಪುಕ್ಕ ಕೆದರಿಕೊಂಡರೆ ಕಾಗೆ ನವಿಲಾಗುವುದಿಲ್ಲ. ಹೆಸರು ಬದಲಿಸಿದರೆ ತುಕ್ಕಿನ ಮನುಷ್ಯ ಉಕ್ಕಿನ ಮನುಷ್ಯನಾಗುವುದಿಲ್ಲ. ಸರ್ದಾರ್ ಪಟೇಲ್ ಸ್ಟೇಡಿಯಂ ಹೆಸರಿದ್ದಿದ್ದು ಮರೆತಿದ್ದರೆ ನೋಡಿಕೊಳ್ಳಿ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ತಿಳಿಸಿದೆ.

ನರೇಂದ್ರ ಮೋದಿ ಮತ್ತು ಬಿಜೆಪಿ ಪಕ್ಷಕ್ಕೆ ಸರ್ದಾರ್ ಪಟೇಲರ ಬಗ್ಗೆ ಇದ್ದದ್ದು ನಕಲಿ ಪ್ರೇಮ ಎನ್ನುವುದು ಸಾಬೀತಾಗಿದೆ. ದೇಶ ಕಟ್ಟುವಲ್ಲಿ ತಮ್ಮವರ ಪಾತ್ರವಿಲ್ಲದ ಕಾರಣ ನೆಹರುರವರ ಖ್ಯಾತಿ ಕುಗ್ಗಿಸಲು ಪಟೇಲರ ಹೆಸರನ್ನು "ಆಪರೇಷನ್ ಕಮಲ" ಮಾಡಿದ್ದರು. ಹೆಸರು ಬದಲಿಸಿದಾಕ್ಷಣ ತುಕ್ಕಿನ ಮನುಷ್ಯ, ಉಕ್ಕಿನ ಮನುಷ್ಯನಾಗಲಾರ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.

ಕೇಶುಭಾಯ್ ಪಟೇಲ್‍ರನ್ನು ಮುಗಿಸಿದ್ದಾಯ್ತು. ಅಡ್ವಾಣಿಯವರನ್ನ ಮೂಲೆಗೆ ಕೂರಿಸಿದ್ದಾಯಿತು. ವಾಜಪೇಯಿ ಅವರ ಫೋಟೋ ಕೂಡ ಇಡದೆ ಬದಿಗೆ ಸರಿಸಿದ್ದಾಯ್ತು. ಈಗ ಸ್ಟೇಡಿಯಂಗೆ "ಉಕ್ಕಿನ ಮನುಷ್ಯ" ಹೆಸರನ್ನೇ ಬದಲಿಸಿ "ತುಕ್ಕಿನ ಮನುಷ್ಯ" ತನ್ನ ಹೆಸರಿಟ್ಟಿದ್ದಾರೆ. ರಾಜ್ಯ ಬಿಜೆಪಿ ತಾನು ಪಟೇಲರಿಗಿಂತ ಮಹಾನ್ ಎಂದುಕೊಂಡಿದ್ದಾರಾ ನರೇಂದ್ರ ಮೋದಿ ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ದೇಶ ಮೋದಿಯ ಸ್ಟೇಡಿಯಂ. ಈ ಎಂಡ್‍ನಲ್ಲಿ ಅಂಬಾನಿ, ಆ ಎಂಡ್‍ನಲ್ಲಿ ಅದಾನಿ. ಸೆಂಟ್ರಲ್ಲಿ ಬಿಜೆಪಿ/ಇಂಡಿಯಾ ಮ್ಯಾಚು. ಬೆಲೆ ಏರಿಕೆ ಬ್ಯಾಟಿಂಗ್, ಫ್ಯಾಶಿಸಂ ಕೀಪಿಂಗ್, ದ್ವೇಷದ ಬೌಲಿಂಗ್, ಕೋಮುವಾದದ ಫೀಲ್ಡಿಂಗ್, ಸುಳ್ಳುಗಳ ಸ್ಪಿನ್‍ಗಳು, ಪೆಟ್ರೋಲ್ ಸೆಂಚುರಿ, ಆರ್ಥಿಕತೆ ಡಕ್ ಔಟ್, ಡೆಮಾಕ್ರಸಿ ಬೋಲ್ಡ್ ಔಟ್, ಸೌಹಾರ್ದತೆ ಕ್ಯಾಚ್ ಔಟ್, ಜನರ ಬದುಕು ಸ್ಟಂಪ್ ಔಟ್ ಎಂದು ಕಾಂಗ್ರೆಸ್ ದೂರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News