ಚಿಕ್ಕಮಗಳೂರು: ನಗರದಲ್ಲಿ ಮೂರು ತಿಂಗಳೊಳಗೆ 1.50 ಕೋ. ರೂ. ವೆಚ್ಚದಲ್ಲಿ ಫುಡ್‍ಕೋರ್ಟ್ ನಿರ್ಮಾಣ
ಚಿಕ್ಕಮಗಳೂರು,ಫೆ.25: ಬೀದಿಬದಿ ವ್ಯಾಪಾರಿಗಳಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ನಗರದ ಬೇಲೂರು ರಸ್ತೆಯಲ್ಲಿ 1.50 ಕೋಟಿ ರೂ. ವೆಚ್ಚದಲ್ಲಿ ಮುಂದಿನ 3 ತಿಂಗಳೊಳಗಾಗಿ ಸುಸಜ್ಜಿತವಾದ ಫುಡ್‍ಕೋರ್ಟ್ ನಿರ್ಮಾಣವಾಗಲಿದೆ ಎಂದು ನಗರಸಭೆ ಪೌರಾಯುಕ್ತ ಬಸವರಾಜ್ ಹೇಳಿದರು.
ಅವರು ಗುರುವಾರ ನಗರಸಭೆ ಕಚೇರಿಯಲ್ಲಿ ಆಯೋಜಿಸಿದ್ದ ಪಟ್ಟಣ ವ್ಯಾಪಾರ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಗರದಲ್ಲಿ ಬೀದಿಬದಿಯ ವ್ಯಾಪಾರಿಗಳು ನೆಮ್ಮದಿ ಬದುಕು ಸಾಗಿಸುವ ನಿಟ್ಟಿನಲ್ಲಿ ಆತ್ಮ ನಿರ್ಭರ ಮತ್ತು ಬೀದಿಬದಿ ವ್ಯಾಪಾರಸ್ಥರ ಪುನರ್ವಸತಿ ಯೋಜನೆ ಅಡಿಯಲ್ಲಿ ಫಲಾನುಭವಿಗೆ ತಲಾ 10 ಸಾವಿರದಂತೆ ಜಿಲ್ಲೆಯಲ್ಲಿ ಒಟ್ಟು 625 ಫಲಾನುಭವಿಗಳಿಗೆ ಒಟ್ಟು 62.50 ಲಕ್ಷ ರೂ. ಸಾಲ ವಿತರಣೆ ಮಾಡಲಾಗಿದೆ. ಫಲಾನುಭವಿಗಳು ನಿಗಧಿತ ಕಾಲಮಿತಿಯಲ್ಲಿ ಸಾಲ ಮರುಪಾವತಿ ಮಾಡಿದಲ್ಲಿ 1 ರಿಂದ 5 ಲಕ್ಷ ರೂ. ಸಾಲ ಪಡೆದುಕೊಳ್ಳಬಹುದಾಗಿದೆ ಎಂದು ತಿಳಿಸಿದರು.
ಬೀದಿಬದಿಯ ವ್ಯಾಪಾರಿಗಳ ಒಳಿತಿಗಾಗಿ 10 ಸದಸ್ಯರೊಳಗೊಂಡ ಬೀದಿಬದಿ ವ್ಯಾಪಾರಿಗಳ ಒಕ್ಕೂಟ ರಚಿಸಲಾಗಿದೆ. ಅದರಲ್ಲಿ ಪೊಲೀಸ್ ಇಲಾಖೆ, ಕಾರ್ಮಿಕ, ಕಂದಾಯ ಪರಿವೀಕ್ಷಕರು, ಕೌಶಲ್ಯಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ಸೇರಿದಂತೆ ವಿವಿಧ ಇಲಾಖೆಗಳ 10 ಸದಸ್ಯರು ಇದ್ದಾರೆ. ನಗರಸಭೆ ಪೌರಾಯುಕ್ತರು ಅಧ್ಯಕ್ಷರಾಗಿರಲಿದ್ದಾರೆ. ಬೀದಿಬದಿ ವ್ಯಾಪಾರಿಗಳಿಗೆ ನಗರಸಭೆ ನಿಗದಿ ಪಡಿಸಿದ ಸ್ಥಳದಲ್ಲಿಯೇ ವ್ಯಾಪಾರ ಕೈಗೊಳ್ಳಬೇಕು. ನಗರದ ಮುಖ್ಯರಸ್ತೆಗಳಲ್ಲಿ ವ್ಯಾಪಾರ ಮಾಡದಂತೆ ಸೂಚನೆ ನೀಡಿದ್ದರೂ ಇದನ್ನು ಉಲ್ಲಂಘಿಸಿ ವ್ಯಾಪಾರ ಮಾಡುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಇಂತಹವರ ವಿರುದ್ಧ ಮುಂದಿನ ದಿನಗಳಲ್ಲಿ ನಿರ್ಧಾಕ್ಷಿಣ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
ನಗರದ ಬೇಲೂರು ರಸ್ತೆಯಲ್ಲಿ ದೇಶಕ್ಕೆ ಮಾದರಿಯಾಗುವಂತೆ ಅಂದಾಜು 1.50 ಕೋಟಿ ರೂ. ವೆಚ್ಚದಲ್ಲಿ ಸುಸಜ್ಜಿತವಾದ ಫುಡ್‍ಕೋರ್ಟ್ ಆರಂಭವಾಗಲಿದೆ. ಸದ್ಯ ಇದರ ಟೆಂಡರ್ ಪ್ರಕ್ರಿಯೆಗಳು ನಡೆಯುತ್ತಿವೆ. ಮುಂದಿನ 3 ತಿಂಗಳೊಳಗಾಗಿ ಕಾಮಗಾರಿ ಪೂರ್ಣಗೊಳ್ಳುವ ಬಗ್ಗೆ ಭರವಸೆ ನೀಡಿದ ಅವರು, ನಗರದಲ್ಲಿ ಪಾನಿಪೂರಿ ಸೇರಿದಂತೆ ಇನ್ನಿತರ ಬೀದಿಬದಿ ವ್ಯಾಪಾರಿಗಳು ನೈರ್ಮಲ್ಯ ಕಾಪಾಡಲು ಆದ್ಯತೆ ನೀಡಬೇಕು. ಈ ಮೂಲಕ ಪ್ರವಾಸಿತಾಣವಾಗಿರುವ ಕಾಫಿನಾಡಿ ಸೌಂದರ್ಯ ಕಾಪಾಡಬೇಕೆಂದರು.
ಈ ಸಂದರ್ಭದಲ್ಲಿ ನಗರಸಭೆಯ ಕಮ್ಯೂನಿಟಿ ಅಧಿಕಾರಿಗಳಾದ ಸತ್ಯನಾರಾಯಣ್, ಚಂದ್ರಶೇಖರ್, ಜಿಲ್ಲಾ ಕೌಶಲ್ಯಾಭಿವೃದ್ಧಿ ವ್ಯವಸ್ಥಾಪಕ ಶಿವಲಿಂಗಯ್ಯ, ಹರ್ಷ, ಸಹಾಯಕ ಕಾರ್ಯಪಾಲಕ ಅಭಿಯಂತರ ಮಧು, ರಶ್ಮಿ, ಪರಿಸರ ಅಭಿಯಂತರರು, ಆರೋಗ್ಯ ಪರಿವೀಕ್ಷಕರು, ಬೀದಿ ಬದಿ ವ್ಯಾಪಾರಿ ಒಕ್ಕೂಟದ ಸದಸ್ಯರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.