ಮತ್ತೊಂದು ಬೃಹತ್ ಸಮಾವೇಶಕ್ಕೆ ಸಜ್ಜಾದ ಪಂಚಮಸಾಲಿ ಸಮುದಾಯ

Update: 2021-02-25 17:01 GMT

ಬೆಂಗಳೂರು, ಫೆ.25: ಲಿಂಗಾಯತ ಪಂಚಮಸಾಲಿ ಸಮುದಾಯಕ್ಕೆ ಹಿಂದುಳಿದ ವರ್ಗಗಳ ಪ್ರವರ್ಗ `2ಎ' ಅಡಿಯಲ್ಲಿ ಮೀಸಲಾತಿ ಕಲ್ಪಿಸಬೇಕೆಂದು ಆಗ್ರಹಿಸಿ ಕೂಡಲ ಸಂಗಮ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಶ್ರೀಗಳ ನೇತತ್ವದಲ್ಲಿ ಗುರುವಾರ ನಗರದ ಖಾಸಗಿ ಹೋಟೆಲ್‍ನಲ್ಲಿ ಮಹತ್ವದ ದುಂಡು ಮೇಜಿನ ಸಭೆ ನಡೆದಿದ್ದು, ಮತ್ತೊಂದು ಬೃಹತ್ ಸಮಾವೇಶ ನಡೆಸಲು ಸಮುದಾಯದ ಮುಖಂಡರು ತೀರ್ಮಾನ ಕೈಗೊಂಡಿದ್ದಾರೆ ಎನ್ನಲಾಗಿದೆ.

ಮಾ.4ರವರೆಗೆ ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಸತ್ಯಾಗ್ರಹ ನಡೆಸುವುದು. ಮಾ.5ರಿಂದ ಆಮರಣಾಂತ ಉಪವಾಸ ಸತ್ಯಾಗ್ರಹ ಕೈಗೊಳ್ಳಲು ಜಯಮೃತ್ಯುಂಜಯ ಶ್ರೀಗಳು ನಿರ್ಧರಿಸಿದ್ದಾರೆ ಎನ್ನಲಾಗಿದೆ.

ದುಂಡು ಮೇಜಿನ ಸಭೆಯಲ್ಲಿ ಶಾಸಕರಾದ ಸಿದ್ದು ಸವದಿ, ಅರವಿಂದ ಬೆಲ್ಲದ್, ಮಾಜಿ ಶಾಸಕರಾದ ಎಸ್.ಎಸ್.ಮಲ್ಲಿಕಾರ್ಜುನ್, ವಿಜಯಾನಂದ ಕಾಸಪ್ಪನವರ್, ವೀಣಾ ಕಾಸಪ್ಪನವರು ಸೇರಿ ಸಮುದಾಯದ ರಾಜ್ಯ, ಜಿಲ್ಲಾ, ತಾಲೂಕು ಮುಖಂಡರು ಭಾಗಿಯಾಗಿದ್ದರು.      

'ಸಮುದಾಯದಲ್ಲಿ ಒಡಕು ಬೇಡ'
‘ಪರಸ್ಪರ ಆರೋಪ-ಪ್ರತ್ಯಾರೋಪಗಳನ್ನು ಬಿಟ್ಟು ಸಮುದಾಯದ ಹಿತಕ್ಕಾಗಿ ಎಲ್ಲರೂ ಒಗ್ಗಟ್ಟಿನಿಂದ ಲಿಂಗಾಯಿತ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರಿಸಲು ಪಕ್ಷಾತೀತವಾಗಿ ಹೋರಾಟ ನಡೆಸೋಣ.’
-ಬಸವರಾಜ್ ದಿಂಡೂರ್, ರಾಜ್ಯ ವೀರಶೈವ ಪಂಚಮಸಾಲಿ ಸಂಘದ ನಿಕಟಪೂರ್ವ ಅಧ್ಯಕ್ಷ

ಧರಣಿ ಕಡೆಗೆ ಮುಖ ಮಾಡದ ಯತ್ನಾಳ್
ಪಂಚಮಸಾಲಿ ಸಮುದಾಯದ ಮೀಸಲಾತಿ ಹೋರಾಟದ ಸಮಾವೇಶದಲ್ಲಿ ರಾಜ್ಯ ಸರಕಾರ ಸಮುದಾಯವನ್ನು ಪ್ರವರ್ಗ 2ಎಗೆ ಸೇರಿಸಬೇಕೆಂದು ಒತ್ತಾಯಿಸಿದ್ದ ಶಾಸಕ ಬಸವರಾಜ ಪಾಟೀಲ ಯತ್ನಾಳ್ ಅವರು ಫ್ರೀಡಂ ಪಾರ್ಕ್‍ನಲ್ಲಿ ಧರಣಿ ಪ್ರಾರಂಭವಾಗಿ ಕೆಲ ದಿನಗಳು ಕಳೆದಿದ್ದರೂ ಧರಣಿಯಲ್ಲಿ ಇಲ್ಲಿಯವರೆಗೂ ಭಾಗವಹಿಸಿಲ್ಲದಿರುವುದು ಸಮುದಾಯದ ಮುಖಂಡರಲ್ಲಿ ಅನುಮಾನ ಮೂಡುವಂತೆ ಮಾಡಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ತಮ್ಮ 80ನೆ ವರ್ಷದ ಹುಟ್ಟುಹಬ್ಬದ ಕೊಡುಗೆಯಾಗಿ ಮೀಸಲಾತಿಯನ್ನು ಘೋಷಿಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿ ಧರಣಿ ಸಾಗಿದೆ.
-ಬಸವ ಜಯಮೃತ್ಯುಂಜಯ ಶ್ರೀಗಳು, ಕೂಡಲ ಸಂಗಮ ಪಂಚಮಸಾಲಿ ಪೀಠ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News