ಶಿವಮೊಗ್ಗ: ಉತ್ತರ ಪ್ರದೇಶ ಸರಕಾರ ವಿರುದ್ಧ ಪಿಎಫ್ಐ ಪ್ರತಿಭಟನೆ

Update: 2021-02-25 17:06 GMT

ಶಿವಮೊಗ್ಗ: ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ(ಪಿಎಫ್ಐ) ಸಂಘಟನೆ ಗುರಿಯಾಗಿಸಿಕೊಂಡು ಉತ್ತರ ಪ್ರದೇಶ ಸರ್ಕಾರ ದಮನಕಾರಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ನಗರದ ಮಹಾವೀರ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಯಿತು.

ಸಂಘಟನೆಯ ನಾಗರಿಕರನ್ನು ಹಿಂಸಾಚಾರದ ಮಾಸ್ಟರ್ ಮೈಂಡ್‌ಗಳಂತೆ ಚಿತ್ರಿಸಿ ಉತ್ತರ ಪ್ರದೇಶ ಪೊಲೀಸರಿಂದ ಸಂಘಟನೆಯ ಕಾರ್ಯಕರ್ತರನ್ನು ಅಪಹರಣ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಆದಿತ್ಯನಾಥ್ ನೇತೃತ್ವದ ಉತ್ತರ ಪ್ರದೇಶ ಸರ್ಕಾರ್ ಜಂಗಲ್‌ರಾಜ್ ಆಗಿ ಪರಿವರ್ತನೆಯಾಗುತ್ತಿದೆ. ಸಂವಿಧಾನ, ಕಾನೂನು ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ. ಸಿಎಎ ವಿರೋಧಿ ಹೋರಾಟದ ಸಂದರ್ಭದಲ್ಲಿ ಉತ್ತರ ಪ್ರದೇಶ ಪೊಲೀಸರು ಹಿಂಸಾಚಾರ ನಡೆಸಿದ್ದರು. ಇದರ ಬಗ್ಗೆ ಅಲಹಾಬಾದ್ ಹೈಕೋರ್ಟ್‌ನಲ್ಲಿ ಸಂಘಟನೆ ಪಿಐಎಲ್ ದಾಖಲಿಸಿದೆ ಎಂದು ತಿಳಿಸಿದರು.

ಉತ್ತರ ಪ್ರದೇಶ ಸರ್ಕಾರಕ್ಕೆ ಅಲಹಾಬಾದ್ ಹೈಕೋರ್ಟ್ ನೋಟೀಸ್ ಜಾರಿ ಮಾಡಿದ ನಂತರ ಸಂಘಟನೆಯ ಕಾರ್ಯಕರ್ತರು ಮತ್ತು ಅವರ ಕುಟುಂಬದವರಿಗೆ ಕಿರುಕುಳ ನೀಡಲು ಆರಂಭಿಸಿದರು. ಹತ್ರಾಸ್‌ನಲ್ಲಿ ಮೇಲ್ವರ್ಗದವರಿಂದ ನಡೆದ ಅತ್ಯಾಚಾರ ಮತ್ತು ಹತ್ಯೆ ಘಟನೆಯಲ್ಲಿಯೂ ಉತ್ತರ ಪ್ರದೇಶ ಸರ್ಕಾರ ಪಾಪ್ಯುಲರ್ ಫ್ರಂಟ್ ಸಂಘಟನೆ ಬಲಿಪಶು ಮಾಡಿ ವೈಫಲ್ಯ ಮರೆಮಾಚಲು ಯತ್ನಿಸಿತ್ತು ಎಂದು ಹೇಳಿದರು.

ಕೇರಳ ಮೂಲದ ಸಂಘಟನೆಯ ಇಬ್ಬರು ರೈಲಿನಲ್ಲಿ ಯುಪಿ ಮಾರ್ಗವಾಗಿ ಪ್ರಯಾಣಿಸುವಾಗ ಫೆ.11 ರಂದು ಬಂಧಿಸಿದ್ದರು. ಫೆ.14 ರಂದು ದೂರು ನೀಡಿದ ನಂತರ ಪೊಲೀಸರು ಬಯೋತ್ಪಾದನಾ ದಾಳಿಗೆ ಯೋಜನೆ ಆರೋಪ ಹೊರಿಸಿ ಅವರನ್ನು ಬಂಧಿಸಿ ಕಪೋಲಕಲ್ಪಿತ ಕತೆ ಕಟ್ಟಿದ್ದಾರೆ ಎಂದು ದೂರಿದರು.
ಪ್ರತಿಭಟನೆಯಲ್ಲಿ ಸೈಯದ್ ರಿಜ್ವಾನ್, ಸಲೀಂ, ಮುಜೀಬ್ ಮೊದಲಾದವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News