ಶಿವಮೊಗ್ಗ: ಸೇನಾ ನೇಮಕಾತಿ ಪ್ರಕ್ರಿಯೆಗೆ ದೈಹಿಕ ಮತ್ತು ಲಿಖಿತ ಪರೀಕ್ಷಾ ತರಬೇತಿ ಶಿಬಿರ

Update: 2021-02-25 17:14 GMT

ಶಿವಮೊಗ್ಗ: ದೇಶ ಸೇವೆಯು ಜೀವನದ ಅತ್ಯಂತ ಶ್ರೇಷ್ಠ ಕಾರ್ಯವಾಗಿದ್ದು, ಯುವಜನತೆ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುವ ಬಗ್ಗೆ ದೃಢಸಂಕಲ್ಪ ಹೊಂದಬೇಕು ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ ಡಾ. ಎನ್.ಕೆ.ಶಿವಣ್ಣ ಹೇಳಿದರು.

ನಗರದ ಕುವೆಂಪು ರಂಗಮಂದಿರದಲ್ಲಿ ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಶಿವಮೊಗ್ಗ, ಮಲ್ನಾಡ್ ಸೋಲ್ಜರ್ ‌ಕೋಚಿಂಗ್ ಸೆಂಟರ್ ‌ಆನಂದಪುರ, ಸಮನ್ವಯಟ್ರಸ್ಟ್ ಶಿವಮೊಗ್ಗ ಹಾಗೂ ಎಟಿಎನ್‌ಸಿಸಿ ಸೇವಾ ಮನಸ್ ಸಂಸ್ಥೆ ವತಿಯಿಂದ ಗುರುವಾರ ಆಯೋಜಿಸಿದ್ದ “ಸೇನಾ ನೇಮಕಾತಿಗೆ 15 ದಿನಗಳ ಪೂರ್ವಭಾವಿ ತರಬೇತಿ ಶಿಬಿರ" ಉದ್ಘಾಟಿಸಿ ಮಾತನಾಡಿದರು.

ಸೈನ್ಯಕ್ಕೆ ಸೇರಲು ಆಸಕ್ತಿ ಇರುವಯುವಜನರು ಮಾಜಿ ಸೈನಿಕರಿಂದ ಸೂಕ್ತ ರೀತಿಯಲ್ಲಿ ಮಾರ್ಗದರ್ಶನ ಪಡೆದು ತರಬೇತಿ ಹೊಂದಬೇಕು. ಭಾರತೀಯ ಸೇನೆಗೆ ಸೇರುವ ಮೂಲಕ ಭಾರತರಾಷ್ಟ್ರದ ಅಭಿವೃದ್ಧಿ, ಪ್ರಗತಿ ಹಾಗೂ ಸುರಕ್ಷತೆಗೆ ಕೊಡುಗೆ ನೀಡಬೇಕು ಎಂದು ತಿಳಿಸಿದರು.

ಮೊಬೈಲ್, ತಂತ್ರಜ್ಞಾನದಿಂದ ಒಳ್ಳೆಯ ಹಾಗೂ ಕೆಟ್ಟ ಉಪಯೋಗಗಳಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಬಹುತೇಕ ಯುವಜನತೆ ಮೊಬೈಲ್ ಗೀಳಿನಲ್ಲಿ ಜೀವನವನ್ನು ಸಂಕಷ್ಟಕ್ಕೆ ಸಿಲುಕಿಸಿಕೊಳ್ಳುತ್ತಿದ್ದಾರೆ. ಯುವಜನತೆ ಕೆಟ್ಟ ಹವ್ಯಾಸಗಳಿಂದ ದೂರ ಉಳಿದು ಒಳ್ಳೆಯ ಚಿಂತನೆಗಳನ್ನು ಬೆಳೆಸಿಕೊಳ್ಳಬೇಕು. ರಾಷ್ಟ್ರ ಸೇವೆಯಲ್ಲಿ ಭಾಗಿಯಾಗುವ ಸಂಕಲ್ಪ ತೊಡಬೇಕು ಎಂದು ಹೇಳಿದರು.

ಮಾಜಿ ಸೈನಿಕರ ಸಮಸ್ಯೆಗಳನ್ನು ನಿವಾರಿಸುವ ಬಗ್ಗೆ ಜನಪ್ರತಿನಿಧಿಗಳು ಸರಿಯಾದ ರೀತಿ ಸ್ಪಂದಿಸುತ್ತಿಲ್ಲ. ರಾಜ್ಯಮಟ್ಟದಲ್ಲಿ ಮಾಜಿ ಸೈನಿಕರ ಪರಧ್ವನಿ ಎತ್ತಲು ಸಂಘಟನೆ ಅತ್ಯಂತ ಅವಶ್ಯಕವಾಗಿದ್ದು, ರಾಜ್ಯ ಮಟ್ಟದಲ್ಲಿ ಮಾಜಿ ಸೈನಿಕರ ಸಂಘಟಿಸುವ ಕಾರ್ಯ ನಡೆಸಲಾಗುತ್ತಿದೆ ಎಂದರು.

ಜಿಲ್ಲಾ ಸೈನಿಕ ಮತ್ತು ಪುರ್ನವಸತಿ ಇಲಾಖೆ ಉಪ ನಿರ್ದೇಶಕಡಾ. ಸಿ.ಎ.ಹಿರೇಮಠ ಮಾತನಾಡಿ, ದೇಶದ ಇತರೆ ರಾಜ್ಯ ಹಾಗೂ ಜಿಲ್ಲೆಗಳಿಗೆ ಹೋಲಿಸಿದಲ್ಲಿ ಮಲೆನಾಡಿನಲ್ಲಿ ಸೈನಿಕರ ಸಂಖ್ಯೆ ಕಡಿಮೆ ಇದ್ದು, ಭಾರತೀಯ ಸೇನೆಯಲ್ಲಿ ಮಲೆನಾಡಿನ ಯುವ ಜನತೆ ಸಂಖ್ಯೆ ಹೆಚ್ಚಿಸುವ ನಿಟ್ಟಿನಲ್ಲಿ ಆಯೋಜಿಸಿರುವ ತರಬೇತಿ ಶಿಬಿರ ಶ್ಲಾಘನೀಯ ಎಂದು ಹೇಳಿದರು.

ಉತ್ತರ ಭಾರತದಲ್ಲಿ ಭಾರತೀಯ ಸೇನೆಗೆ ಕೆಲಸಕ್ಕೆ ಸೇರುವುದು ಎಂದರೆ ಜೀವನದ ಅತ್ಯಂತ ಶ್ರೇಷ್ಠ ಹಾಗೂ ಗೌರವದ ಸಂಗತಿ. ಭಾರತೀಯ ಸೇನೆಯ ಸೇವೆಯಲ್ಲಿ ಭಾಗಿಯಾಗುವುದು ಹಾಗೂ ದೇಶ ಸೇವೆಯ ಮಹತ್ವವನ್ನುಯುವ ಜನತೆ ಅರಿವು ಮೂಡಿಸಿಕೊಳ್ಳಬೇಕು ಎಂದು ತಿಳಿಸಿದರು.

ಮಲ್ನಾಡ್ ಸೋಲ್ಜರ್ ಕೋಚಿಂಗ್ ಸೆಂಟರ್‌ನ ಕಿಶೋರ್ ಭೈರಾಪುರ ಮಾತನಾಡಿ, ಮಾಹಿತಿ ಕೊರತೆ ಹಾಗೂ ಸೂಕ್ತ ಮಾರ್ಗದರ್ಶನ ಸಿಗದ ಕಾರಣ ಯುವಜನತೆ ಸೈನ್ಯಕ್ಕೆ ಸೇರಲು ಸಾಧ್ಯವಾಗುತ್ತಿಲ್ಲ. ಭಾರತೀಯ ಸೇನೆಗೆ ಸೇರಲು ಇಚ್ಚಿಸುವ ಯುವಜನರಿಗೆ ಸೂಕ್ತ ಮಾರ್ಗದರ್ಶನ ನೀಡುವ ಜತೆಯಲ್ಲಿ ಸೇನೆಗೆ ಸೇರುವ ತನಕ ಅಗತ್ಯ ತರಬೇತಿ ನೀಡಲಿದ್ದೇವೆ ಎಂದು ಹೇಳಿದರು.

ಮಾಜಿ ಸೈನಿಕರಾದ ಸುಭಾಷ್‌ಚಂದ್ರ ತೇಜಸ್ವಿ ಹಾಗೂ ಕಿಶೋರ್ ಬೈರಾಪುರ ನೇತೃತ್ವದಲ್ಲಿ ಸೇನಾ ನೇಮಕಾತಿಗೆ 15 ದಿನಗಳ ಪೂರ್ವಭಾವಿ ತರಬೇತಿ ಶಿಬಿರ ನಡೆಯಲಿದೆ. ಮುಂದಿನ ತಿಂಗಳು ಉಡುಪಿಯಲ್ಲಿ ನಡೆಯಲಿರುವ ಸೇನಾ ನೇಮಕಾತಿರ್‍ಯಾಲಿ ಹಿನ್ನೆಲೆಯಲ್ಲಿ ಶಿಬಿರ ಹಮ್ಮಿಕೊಳ್ಳಲಾಗಿದೆ.

ನಂದಿನಿ ಸಾಗರ ಕಾರ್ಯಕ್ರಮ ನಿರೂಪಿಸಿದರು.

ಹಾರ್‍ನಹಳ್ಳಿ ಚೌಕಿಮಠದ ಶ್ರೀ ನೀಲಕಂಠ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಜಿಲ್ಲಾಕೌಶಲ್ಯಅಭಿವೃದ್ಧಿ ಇಲಾಖೆ ವ್ಯವಸ್ಥಾಪಕ ಸಮನ್ವಯ ಕಾಶಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದಜಿಲ್ಲಾಧ್ಯಕ್ಷ ಹನುಮಂತಪ್ಪ, ಶಿವಮೊಗ್ಗ ಜಿಲ್ಲಾ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಕೃಷ್ಣಾರೆಡ್ಡಿ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಶಿವಮೊಗ್ಗದ ಉಪಾಧ್ಯಕ್ಷ ಎಚ್.ಕೆ.ಚೂಡಪ್ಪ, ನಿರ್ದೇಶಕ ಪ್ರಕಾಶ್‌ಗೌಡ, ವಾಸಪ್ಪ, ರಂಗರಾಜು ಬಾಳೆಗುಂಡಿ, ಪ್ರತಿನಿಧಿ ಸೇವಾ ಮನಸ್‌ನಆದಿತ್ಯ, ತರಬೇತಿ ಶಿಬಿರದ ಸಹ ಸಂಯೋಜಕ ಬಾಬು ಶಾಬಾಜ್, ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.

ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ ಮಾಜಿ ಸೈನಿಕರನ್ನು ಸಂಘಟಿಸಿ ರಾಜ್ಯ ಮಟ್ಟದ ಸಮಾವೇಶ ಆಯೋಜಿಸುವ ಉದ್ದೇಶ ಹೊಂದಲಾಗಿದೆ. ಅಲ್ಲದೇ ಪ್ರತಿ ಜಿಲ್ಲೆಗಳಲ್ಲಿ ಸೇನಾ ನೇಮಕಾತಿ ತರಬೇತಿ ಶಿಬಿರಗಳನ್ನು ಹಮ್ಮಿಕೊಳ್ಳಲು ಸಹ ಯೋಜನೆ ರೂಪಿಸಲಾಗುವುದು.
-ಡಾ. ಎನ್.ಕೆ.ಶಿವಣ್ಣ, ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘದ ರಾಜ್ಯಾಧ್ಯಕ್ಷ
**ಕೋಟ್**

ಸೈನ್ಯದಲ್ಲಿ ಸೇವೆ ಸಲ್ಲಿಸುವ ಆಸಕ್ತ ಯುವಜನರಿಗೆ 2019ರಲ್ಲಿ ತರಬೇತಿ ನೀಡಿದ್ದು, ಮಲೆನಾಡಿನಲ್ಲಿ ತರಬೇತಿ ಪಡೆದ 26 ಜನರು ಭಾರತೀಯ ಸೇನೆಗೆ ನೇಮಕಾತಿ ಆಗಿದ್ದಾರೆ. ಕಳೆದ ವರ್ಷ ಲಾಕ್‌ಡೌನ್‌ ಕಾರಣ ತರಬೇತಿ ನಡೆಸಲು ಸಾಧ್ಯವಾಗಲಿಲ್ಲ. ಈ ವರ್ಷದಲ್ಲಿ ತರಬೇತಿ ಪಡೆಯುವ ಯುವಜನರಲ್ಲಿ ಕನಿಷ್ಠ 100 ಯುವಜನತೆಯನ್ನು ಸೇನೆಗೆ ಸೇರಿಸುವ ಗುರಿ ಇದೆ.
-ಕಿಶೋರ್ ಭೈರಾಪುರ, ಮಲ್ನಾಡ್ ಸೋಲ್ಜರ್‌ ಕೋಚಿಂಗ್ ಸೆಂಟರ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News