ತುಮಕೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್

Update: 2021-02-25 17:58 GMT

ಬೆಂಗಳೂರು, ಫೆ.25: ತುಮಕೂರು ನಗರ ಪಾಲಿಕೆ ಮೇಯರ್ ಚುನಾವಣೆಗೆ ಗ್ರೀನ್ ಸಿಗ್ನಲ್ ನೀಡಿರುವ ಹೈಕೋರ್ಟ್, ಚುನಾವಣಾ ಫಲಿತಾಂಶ ಮೀಸಲು ಅಧಿಸೂಚನೆ ಪ್ರಶ್ನಿಸಿರುವ ರಿಟ್ ಅರ್ಜಿಯ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಹೇಳಿದೆ.

ತುಮಕೂರು ಪಾಲಿಕೆ ಮೇಯರ್ ಸ್ಥಾನವನ್ನು ಪರಿಶಿಷ್ಟ ಪಂಗಡ(ಎಸ್‍ಟಿ)ಕ್ಕೆ ಮೀಸಲು ನೀಡಿ ರಾಜ್ಯ ಸರಕಾರ ಹೊರಡಿಸಿರುವ ಅಧಿಸೂಚನೆ ರದ್ದು ಕೋರಿ ಪಾಲಿಕೆ ಸದಸ್ಯರಾದ ಲಕ್ಷ್ಮೀ ನರಸಿಂಹರಾಜು ಸೇರಿ ಇತರೆ 17 ಮಂದಿ ಸದಸ್ಯರು ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಪೀಠ, ಈ ಆದೇಶ ನೀಡಿದೆ.

ಈಗಾಗಲೇ ಚುನಾವಣಾ ವೇಳಾಪಟ್ಟಿ ಪ್ರಕಟವಾಗಿದೆ. ಅದರಂತೆ ಫೆ.26ರಂದು ಚುನಾವಣೆ ನಡೆಯಲಿದೆ. ಈ ಹಂತದಲ್ಲಿ ನ್ಯಾಯಾಲಯ ಅರ್ಜಿ ಪರಿಗಣಿಸಿ ಚುನಾವಣೆಗೆ ತಡೆಯಾಜ್ಞೆ ನೀಡಲು ಸಾಧ್ಯವಿಲ್ಲ. ಪೂರ್ವ ನಿಗದಿಯಂತೆ ಚುನಾವಣೆ ನಡೆಸಬಹುದಾಗಿದೆ. ಆದರೆ ಚುನಾವಣೆಯ ಫಲಿತಾಂಶವು ಅರ್ಜಿ ಸಂಬಂಧ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಸ್ಪಷ್ಟಪಡಿಸಿ, ವಿಚಾರಣೆಯನ್ನು ಮುಂದೂಡಿದೆ.

ಪ್ರಕರಣವೇನು: ಎಸ್‍ಟಿಗೆ ಪದೇ ಪದೆ ಮೀಸಲು ನೀಡುವುದಕ್ಕೆ ಕಾನೂನಿನಲ್ಲಿ ಅವಕಾಶವಿಲ್ಲ. ಕೇವಲ ರಾಜಕೀಯ ಉದ್ದೇಶದಿಂದ ಎಸ್‍ಟಿಗೆ ಮೀಸಲು ನೀಡಲಾಗಿದೆ. ಆದ್ದರಿಂದ ಸರಕಾರದ ಮೀಸಲು ಅಧಿಸೂಚನೆ ಮತ್ತು ಚುನಾವಣಾ ವೇಳಾಪಟ್ಟಿ ರದ್ದುಪಡಿಸಬೇಕು. ಅರ್ಜಿ ಇತ್ಯರ್ಥವಾಗುವವರೆಗೆ ಅಧಿಸೂಚನೆಗೆ ತಡೆಯಾಜ್ಞೆ ನೀಡಬೇಕೆಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News