ಬಡಜನರ ಕಷ್ಟಕ್ಕೆ ಸಂಘಟನೆ ಸ್ಪಂದಿಸಲಿ: ಶಾಸಕ ಅಖಂಡ ಶ್ರೀನಿವಾಸಮೂರ್ತಿ
ಬೆಂಗಳೂರು, ಫೆ. 25: ‘ಸಮಾಜದಲ್ಲಿ ಶೋಷಣೆಗೆ ಗುರಿಯಾಗಿರುವ ಬಡಜನರ ಸಂಕಷ್ಟಕ್ಕೆ ಕರ್ನಾಟಕ ಬಹುಜನ ಫೆಡರೇಷನ್(ಕೆಬಿಎಫ್) ಸ್ಪಂದಿಸುವ ಮೂಲಕ ಅವರ ಬದುಕು ಹಸನಾಗಿಸಲು ಸದಾ ಶ್ರಮಿಸುವಂತಾಗಲಿ' ಎಂದು ಪುಲಕೇಶಿನಗರ ವಿಧಾನಸಭಾ ಕ್ಷೇತ್ರ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ ಶುಭ ಹಾರೈಸಿದ್ದಾರೆ.
ಗುರುವಾರ ನಗರ ಯುಟಿಲಿಟಿ ಬಿಲ್ಡಿಂಗ್‍ನಲ್ಲಿರುವ ಮೇಯೋಹಾಲ್ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಕರ್ನಾಟಕ ಬಹುಜನ ಫೆಡರೇಷನ್(ಕೆಬಿಎಫ್) ಉದ್ಘಾಟಿಸಿ ಮಾತನಾಡಿದ ಅವರು, ‘ಹಲವು ವರ್ಷಗಳಿಂದ ನನ್ನ ಕ್ಷೇತ್ರದಲ್ಲಿನ ಯುವಕರ ಗುಂಪು ಬಡಜನರ ಸೇವೆಯಲ್ಲಿ ತೊಡಗಿರುವುದು ನಿಜಕ್ಕೂ ಹೆಮ್ಮೆಯ ಸಂಗತಿ' ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
‘ನನ್ನ ಕ್ಷೇತ್ರ ಮತ್ತು ಬೆಂಗಳೂರು ನಗರದಲ್ಲಿ ವಾಸ ಮಾಡುತ್ತಿರುವ ಬಡಜನರು, ಪೌರಕಾರ್ಮಿಕರು ಸೇರಿದಂತೆ ಸಮಾಜದಲ್ಲಿನ ಶೋಷಿತ ವರ್ಗದ ಜನರಿಗೆ ಸರಕಾರದ ಸೌಲಭ್ಯಗಳನ್ನು ಕಲ್ಪಿಸಲು ಈ ಸಂಘಟನೆ ಮುಖಂಡರು ಕಾರ್ಯನಿರ್ವಹಿಸಲಿ. ಆ ನಿಟ್ಟಿನಲ್ಲಿ ನಾನೂ ಸದಾ ಬೆಂಬಲ ಹಾಗೂ ಸಹಕಾರ ನೀಡುತ್ತೇನೆ' ಎಂದು ಅಖಂಡ ಶ್ರೀನಿವಾಸಮೂರ್ತಿ ಇದೇ ವೇಳೆ ಭರವಸೆ ನೀಡಿದರು.
ಕಾರ್ಯಕ್ರಮದಲ್ಲಿ ನಟ ರಜನಿಕಾಂತ್ ಸಹೋದರ ಸತ್ಯನಾರಾಯಣ ಗಾಯಕವಾಡ ಅವರು ಸಂಘಟನೆಗೆ 1ಲಕ್ಷ ರೂ.ದೇಣಿಗೆ ನೀಡಿ ಶುಭ ಕೋರಿದರು. ಈ ವೇಳೆ ದಸಂಸ ಅಧ್ಯಕ್ಷ ಲಯನ್ ಬಾಲಕೃಷ್ಣ, ಅಶೋಕನಗರ ಇನ್‍ಸ್ಪೆಕ್ಟರ್ ಅಶ್ವಿನಿ, ಪತ್ರಕರ್ತ ರಮೇಶ್ ಹೀರೇಜಂಬೂರು, ಕೆಬಿಎಫ್ ಅಧ್ಯಕ್ಷ ಜಿ.ಎಸ್. ಶಂಕರ್, ಪದಾಧಿಕಾರಿಗಳಾದ ವೆಂಕಟ್, ಹೇಮಂತ್ ಕುಮಾರ್, ರಮಣಯ್ಯ, ವೆಂಕಟೇಶ್, ವೇಣು, ಪಳನಿಯಮ್ಮ ಸೇರಿ ಹಲವು ಗಣ್ಯರು ಭಾಗವಹಿಸಿದ್ದರು.