ಕಲಬುರಗಿ: ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಧರಣಿಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಸಿಬ್ಬಂದಿ

Update: 2021-02-26 09:57 GMT

ಕಲಬುರಗಿ, ಫೆ.26: ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ವತಿಯಿಂದ ಇಂದು ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಯಿತು. ಈ ವೇಳೆ ವ್ಯಕ್ತಿಯೋರ್ವ ಆತ್ಮಹತ್ಯೆಗೆ ಯತ್ನಿಸಿದ ಘಟನೆಯೂ ನಡೆಯಿತು.

ಸಾಲಬಾಧೆಯಿಂದ ಗುರುವಾರ ಆತ್ಮಹತ್ಯೆ ಮಾಡಿಕೊಂಡ ವಿಶ್ವಗಂಗಾ ಶಿಕ್ಷಣ ಸಂಸ್ಥೆಯ ಶಂಕರ ಬಿರಾದಾರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಅವರ ಭಾವಚಿತ್ರ ಮತ್ತು ಸಂಸ್ಥೆಯ ಬ್ಯಾನರ್ ಹಿಡಿದು ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.

ಖಾಸಗಿ ಶಾಲಾ ವಾಹನದ ಕಂತು ಮತ್ತು ಇತರ ಕಂತುಗಳನ್ನು ಬ್ಯಾಂಕಿಗೆ ಕಟ್ಟಲಾಗುತ್ತಿಲ್ಲ. ಕಾರಣ ಮುಂದಿನ ಶೈಕ್ಷಣಿಕ ವರ್ಷ ಆರಂಭದವರೆಗೆ ಕಂತು ಕಟ್ಟಲು ಕಾಲಾವಕಾಶ ನೀಡುವಂತೆ ಸರ್ಕಾರ ಮಧ್ಯಸ್ತಿಕೆ ವಹಿಸಬೇಕು ಎಂದು ಆಗ್ರಹಿಸಿದರು.

ಶಿಕ್ಷಣ ಇಲಾಖೆ ಶೀಘ್ರವಾಗಿ ಶಾಲೆಗಳ ನವೀಕರಣಕ್ಕೆ ವಿಧಿಸಿದ ನಿಯಮಾವಳಿ ಕೈಬಿಡಬೇಕು, ಪ್ರಸಕ್ತ ಸಾಲಿನ ಆರ್.ಟಿ.ಇ. ಹಣ ಕೂಡಲೇ ಬಿಡುಗಡೆ ಮಾಡಬೇಕು, 1ನೇ ತರಗತಿಯಿಂದ 10ನೇ ತರಗತಿವರೆಗೆ ಶಾಲೆಗಳನ್ನು ತೆರೆಯಲು ಅನುಮತಿ ನೀಡಬೇಕು, ಸರ್ಕಾರ ಕೂಡಲೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಆತ್ಮಹತ್ಯೆಗೆ ಯತ್ನ: ಈ ಮಧ್ಯೆ ಜೇವರ್ಗಿ ತಾಲೂಕಿನ ಸುಂಬಡದ ಪ್ರಕಾಶ ಎಂಬುವರು ವಿಷ ಸೇವಿಸಿ ಆತ್ಮಹತ್ಯಗೆ ಯತ್ನಿಸಿದರು. ಇದರಿಂದಾಗಿ ಕೆಲಹೊತ್ತು ಶಿಕ್ಷಕರ ಮಧ್ಯೆ ಆತಂಕವುಂಟಾಯಿತು. ಅಲ್ಲಿಯೇ ಇದ್ದ ಪೊಲೀಸ್ ವಾಹನದಲ್ಲಿ ಅಸ್ವಸ್ತಗೊಂಡ ಸಿದ್ಧಗಂಗಾ ಶಿಕ್ಷಣ ಸಂಸ್ಥೆಯ ಪ್ರಕಾಶ ಅವರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.

ಒಕ್ಕೂಟದ ವಿಭಾಗೀಯ ಅಧ್ಯಕ್ಷ ಸುನೀಲ್ ಹುಡಗಿ ಜಿಲ್ಲಾ ಸಂಚಾಲಕ ಅರುಣಕುಮಾರ ಪೋಜಾಲ, ಸಾಹೇಬಗೌಡ ಪುರದಾಳ ಮತ್ತಿತರರು ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News