ಸಚಿವರು ದೇವಲೋಕದಿಂದ ಇಳಿದು ಬಂದಿದ್ದಾರೆಯೇ?: ಸ್ವಪಕ್ಷದ ನಾಯಕರ ವಿರುದ್ಧ ರೇಣುಕಾಚಾರ್ಯ ಆಕ್ರೋಶ

Update: 2021-02-26 12:07 GMT

ಬೆಂಗಳೂರು, ಫೆ. 26: ‘ಎರಡು-ಮೂರು ಖಾತೆಗಳನ್ನು ಕೇಳಲಿಕ್ಕೆ ಆಗುತ್ತದೆ ಇವರಿಗೆ, ನಮ್ಮ ಬೇಡಿಕೆಗಳಿಗೆ ಸ್ಪಂದಿಸಲು ಆಗುವುದಿಲ್ಲವೇ?' ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ವಿರುದ್ಧ ಸಿಎಂ ರಾಜಕೀಯ ಕಾರ್ಯದರ್ಶಿ ಹಾಗೂ ಶಾಸಕ ಎಂ.ಪಿ.ರೇಣುಕಾಚಾರ್ಯ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ‘ಡಾ.ಸುಧಾಕರ್ ಅವರೊಬ್ಬರಿಂದಲೇ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದಿಲ್ಲ. ಸುಧಾಕರ್ ಅವರು ಮಾತ್ರವೇ ಅಲ್ಲ, ಆರೇಳು ಮಂದಿ ಸಚಿವರು ಶಾಸಕರ ಕೈಗೆ ಸಿಗುತ್ತಿಲ್ಲ. ಇವರೇನು ಬಿಟ್ಟಿಯಾಗಿ ಗೆದ್ದು ಬಂದಿಲ್ಲ' ಎಂದು ವಾಗ್ದಾಳಿ ನಡೆಸಿದರು.

‘ನಾನು ಎರಡು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ಬಿಜೆಪಿ ಪಕ್ಷ ಸಂಘಟನೆಯ ಕೆಲಸ ಮಾಡಿ ಮೂರು ಬಾರಿ ಶಾಸಕನಾಗಿ ಆಯ್ಕೆಯಾಗಿದ್ದೇನೆ. ಆದರೆ, ಪಕ್ಷಕ್ಕಾಗಿ ಕೆಲವರ ಕೊಡುಗೆ ಏನಿದೆ ಎಂದು ಪ್ರಶ್ನೆ ಮಾಡಿದ್ದಾರೆ. ನನಗೆ ಅವಮಾನ ಮಾಡಿದ್ದಾರೆ, ಇದನ್ನು ಖಂಡಿಸುತ್ತೇನೆ' ಎಂದು ರೇಣುಕಾಚಾರ್ಯ ಹೇಳಿದರು.

‘ಆರೋಗ್ಯ ಮತ್ತು ವೈದ್ಯಕೀಯ ಇಲಾಖೆ ಸಚಿವ ಡಾ.ಸುಧಾಕರ್ ಅವರ ಆಪ್ತ ಸಹಾಯಕರಿಗೆ ಕರೆ ಮಾಡಿದರೆ ಅವರು ನಮ್ಮ ಕರೆಯನ್ನೆ ಸ್ವೀಕರಿಸುವುದಿಲ್ಲ. ಸುಧಾಕರ್ ಅವರೇನು ದೇವಲೋಕದಿಂದ ಇಳಿದು ಬಂದಿದ್ದಾರೆಯೇ?' ಎಂದು ರೇಣುಕಾಚಾರ್ಯ ಅಸಮಾಧಾನ ಹೊರ ಹಾಕಿದರು.

‘ನಾನು ಪ್ರತಿನಿಧಿಸುವ ಹೊನ್ನಾಳಿ ಕ್ಷೇತ್ರದ ಕೆಲ ಕೆಲಸಗಳ ಬಗ್ಗೆ ಸಚಿವ ಸುಧಾಕರ್ ಅವರ ಗಮನಕ್ಕೆ ತಂದಿದ್ದೆ. ಆದರೆ, ಅವರು ಸೂಕ್ತ ರೀತಿಯಲ್ಲಿ ಸ್ಪಂದಿಸುತ್ತಿಲ್ಲ' ಎಂದ ಶಾಸಕ ರೇಣುಕಾಚಾರ್ಯ, ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದರೆ ಸುಮ್ಮನಿರುವುದಿಲ್ಲ. ಕೆಲ ಸಚಿವರು ತಮ್ಮ ವರ್ತನೆಯನ್ನು ಬದಲಾಯಿಸಿಕೊಳ್ಳಬೇಕು ಎಂದು ಸಲಹೆ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News