‘ಕನ್ನಡದಲ್ಲಿ ತೀರ್ಪು ನೀಡಲು ನಿರ್ದೇಶನ ನೀಡಿ’: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ನಾಗಾಭರಣ ಮನವಿ

Update: 2021-02-26 12:37 GMT

ಬೆಂಗಳೂರು, ಫೆ.26: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ನೇತೃತ್ವದಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಒಕಾ ಹಾಗೂ ರಿಜಿಸ್ಟ್ರಾರ್ ಜನರಲ್ ಅವರನ್ನು ರಾಜ್ಯ ವಕೀಲರ ಪರಿಷತ್ತಿನ ಅಧ್ಯಕ್ಷ ಶ್ರೀನಿವಾಸ ಬಾಬು ಜೊತೆಗೆ ಭೇಟಿ ಮಾಡಿ ‘ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ’ ಮಾಡುವಂತೆ ಹಕ್ಕೊತ್ತಾಯದ ಮನವಿ ಪತ್ರವನ್ನು ಸಲ್ಲಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಟಿ.ಎಸ್.ನಾಗಾಭರಣ, ರಾಜ್ಯದ ಎಲ್ಲ ಅಧೀನ ನ್ಯಾಯಲಯಗಳಲ್ಲಿ ವಕಾಲತ್ತು ಮತ್ತು ತೀರ್ಪುಗಳನ್ನು ಕನ್ನಡದಲ್ಲಿ ನೀಡುವಂತೆ ನಿರ್ದೇಶನ ನೀಡಬೇಕೆಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅವರಲ್ಲಿ ಮನವಿ ಮಾಡಿದರು.

ರಾಜ್ಯದ ಎಲ್ಲ ಅಧೀನ ನ್ಯಾಯಾಲಯಗಳಲ್ಲಿ ಪೀಠಾಧಿಕಾರಿಗಳು ತಮ್ಮ ನ್ಯಾಯಾಲಯಗಳ ದೈನಂದಿನ ವ್ಯವಹಾರಗಳಲ್ಲಿ ವಿಶೇಷವಾಗಿ ತೀರ್ಪುಗಳು, ಆದೇಶಗಳು  ಜ್ಞಾಪನಾ ಪತ್ರಗಳು, ರಾಜ್ಯ ವ್ಯಾಪ್ತಿಯೊಳಗಿನ ಪತ್ರವ್ಯವಹಾರಗಳಲ್ಲಿ ಕನ್ನಡವನ್ನೆ ಸಂಪೂರ್ಣವಾಗಿ ಬಳಸುವಂತೆ 2003ರಲ್ಲೆ ಪತ್ರ ಬರೆದಿದೆಯಾದರೂ ಅಧೀನ ನ್ಯಾಯಾಲಯಗಳಲ್ಲಿ ಇನ್ನು ಸಂಪೂರ್ಣವಾಗಿ ಕನ್ನಡೀಕರಣವಾಗಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಡಿಜಿಟಲ್ ತಂತ್ರಜ್ಞಾನಕ್ಕೆ ಬಂದ ಮೇಲೆ ಸಾಕಷ್ಟು ನಮೂನೆಗಳು ಇಂಗ್ಲಿಷ್ ನಲ್ಲಿಯೇ ಬರುವುದರಿಂದ ಅದನ್ನು ಕನ್ನಡಕ್ಕೆ ತರ್ಜುಮೆ ಮಾಡುವ ಕೆಲಸವನ್ನು ಒಂದು ವಿಭಾಗ ಮಾಡುತ್ತಿದ್ದು, ಅದನ್ನು ತುರ್ತಾಗಿ ಮುಗಿಸುವುದಾಗಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರು ತಿಳಿಸಿರುವುದಾಗಿ ಅವರು ಮಾಹಿತಿ ಹಂಚಿಕೊಂಡರು.

ಬೆಂಗಳೂರಿನ ವಿವಿಧೆಡೆ ನಡೆದ ಅಭಿಯಾನ: ಅಂಬೇಡ್ಕರ್ ವೀಧಿಯಲ್ಲಿರುವ ಹೈಕೋರ್ಟ್ ಮುಂಭಾಗ, ಕಾವೇರಿ ಭವನದ ಹಿಂಭಾಗದ ಕರ್ನಾಟಕ ಸಿವಿಲ್ ನ್ಯಾಯಾಲಯದ ಮುಂಭಾಗ, ನೃಪತುಂಗ ರಸ್ತೆಯಲ್ಲಿರುವ ಕರ್ನಾಟಕ ಕ್ರಿಮಿನಲ್ ನ್ಯಾಯಾಲಯದ ಮುಂಭಾಗ, ಎಂ.ಜಿ.ರಸ್ತೆಯಲ್ಲಿರುವ ಮೇಯೋಹಾಲ್ ನ್ಯಾಯಾಲಯದ ಮುಂಭಾಗ, ಸಿದ್ದಯ್ಯ ರಸ್ತೆಯಲ್ಲಿರುವ ಕೌಟುಂಬಿಕ ನ್ಯಾಯಾಲಯದ ಮುಂಭಾಗ ಹಾಗೂ ಎಲ್ಲ ಜಿಲ್ಲಾ ನ್ಯಾಯಾಲಯಗಳ ಮುಂಭಾಗದಲ್ಲಿ ಏಕಕಾಲದಲ್ಲಿ ಅಧೀನ ನ್ಯಾಯಾಲಯಗಳಲ್ಲಿ ಕನ್ನಡ ಅನುಷ್ಠಾನ ಕುರಿತಾಗಿ ಜಾಗೃತಿ ಅಭಿಯಾನವನ್ನು ನಡೆಸಲಾಯಿತು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಕೆ.ಮುರಳಿಧರ, ಪ್ರಾಧಿಕಾರದ ನಾಮನಿರ್ದೇಶಿತ ಸದಸ್ಯರಾದ ಡಾ.ವಿಜಯಲಕ್ಷ್ಮಿ ಬಾಳೆಕುಂದ್ರಿ, ಪ್ರೊ.ಅಬ್ದುಲ್ ರೆಹಮಾನ್ ಪಾಷಾ, ಡಾ.ಕಿಶೋರ್, ರೋಹಿತ್ ಚಕ್ರತೀರ್ಥ, ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಮಹಾನಗರ ಪಾಲಿಕೆ ಜಾಗೃತಿ ಸಮಿತಿ ಸದಸ್ಯರು, ಬೆಂಗಳೂರು ಮತಕ್ಷೇತ್ರ ಕನ್ನಡ ಜಾಗೃತಿ ಸಮಿತಿ ಸದಸ್ಯರು, ಕಾಯಕಪಡೆ ಸದಸ್ಯರುಗಳು ಅಭಿಯಾನದಲ್ಲಿ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News