ಸ್ಫೋಟಕ ವಸ್ತುಗಳನ್ನು ಹಿಂತಿರುಗಿಸದಿದ್ದರೆ ಲೈಸೆನ್ಸ್ ರದ್ದು: ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ

Update: 2021-02-26 14:45 GMT

ರಾಯಚೂರು, ಫೆ.26: ಕಲ್ಲು ಕ್ವಾರಿ ಮತ್ತು ಗಣಿಗಾರಿಕೆ ಪ್ರದೇಶಗಳಲ್ಲಿ ಯಾರಾದರೂ ಕಾನೂನುಬಾಹಿರವಾಗಿ ಸ್ಫೋಟಕ ವಸ್ತುಗಳನ್ನು ಸಂಗ್ರಹಿಸಿಟ್ಟುಕೊಂಡಿದ್ದರೆ, ನಾಲ್ಕು ವಾರದೊಳಗೆ ಹಿಂತಿರಿಗಿಸಬೇಕು. ಇಲ್ಲದಿದ್ದರೆ ಅಂತಹವರ ಲೈಸೆನ್ಸ್(ಪರವಾನಿಗೆ)ಯನ್ನು ರದ್ದುಪಡಿಸಲಾಗುವುದೆಂದು ಗಣಿ ಮತ್ತು ಭೂವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದ್ದಾರೆ.

ಶುಕ್ರವಾರ ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಹಟ್ಟಿ ಚಿನ್ನದ ಗಣಿ ಪ್ರದೇಶಕ್ಕೆ ಭೇಟಿ ನೀಡಿ, ಅಧಿಕಾರಿಗಳ ಜೊತೆ ಪ್ರಗತಿ ಪರಿಶೀಲನ ಸಭೆ ನಡೆಸಿ ಬಳಿಕ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ನಾಲ್ಕು ವಾರದ ನಂತರ ಸ್ಫೋಟಕ ವಸ್ತುಗಳನ್ನು ಇಲಾಖೆಗೆ ವಶಪಡಿಸಲು ಸೂಚಿಸಲಾಗಿದೆ. ಬಳಿಕವೂ ಕಂಡುಬಂದರೆ, ಅಂತಹ ಗಣಿ ಗುತ್ತಿಗೆ ರದ್ದು ಮಾಡಲಾಗುವುದು ಎಂದು ಹೇಳಿದರು.

ಹಟ್ಟಿ ಚಿನ್ನದ ಗಣಿಯಲ್ಲಿ 1700 ಕೆಜಿ ಚಿನ್ನ ಉತ್ಪಾದನೆಯಾಗಿದೆ. ಗಣಿಯನ್ನು ಆಧುನಿಕರಣಗೊಳಿಸಲು ಚಿಂತನೆ ನಡೆಸಲಾಗಿದೆ. ಈಗಾಗಲೇ ಆಧುನಿಕರಣಕ್ಕೆ ವರದಿ ತಯಾರಿಸಲಾಗಿದೆ. ಕೋವಿಡ್ ಸಂದರ್ಭದಲ್ಲಿ ಚಿನ್ನ ಉತ್ಪಾದನೆಗೆ ಕಡಿತವಾಗಿತ್ತು. ಈಗ ಉತ್ತಮವಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಗಣಿಗಾರಿಕೆಯಲ್ಲಿ ಅಧಿಕಾರಿಗಳು ಜನಪ್ರತಿನಿಧಿಗಳು ಭಾಗಿಯಾಗಿದ್ದೆ ಇದಕ್ಕೆ ಕಾರಣ. ಅಕ್ರಮ ಗಣಿಗಾರಿಕೆಯಲ್ಲಿ ಅಧಿಕಾರಿಗಳ ಬೇಜವಾಬ್ದಾರಿತನ ಪದೇ ಪದೇ ಕೇಳಿ ಬರುತ್ತಿದೆ. ಮುಂದೆ ಇಂತಹ ದೂರುಗಳು ಕೇಳಿ ಬಂದರೆ, ಅಂತಹವರ ಮೇಲೆ ನಿರ್ದಾಕ್ಷಿಣ್ಯವಾಗಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಮುರುಗೇಶ್ ನಿರಾಣಿ ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಹಟ್ಟಿ ಕಂಪೆನಿ ಅಧ್ಯಕ್ಷ ಮಾನಪ್ಪ ವಜ್ಜಲ್, ಶಾಸಕ ಡಿ.ಎಸ್.ಹುಲಗೇರಿ, ಶಾಸಕ ಕೆ.ಶಿವನಗೌಡ ನಾಯಕ, ಅಪರ ಮುಖ್ಯ ಕಾರ್ಯದರ್ಶಿ ಕುಮಾರ್ ನಾಯಕ್, ಹಟ್ಟಿ ಚಿನ್ನದ ಗಣಿ ವ್ಯವಸ್ಥಾಪಕ ನಿರ್ದೇಶಕ ಪ್ರಭುಲಿಂಗ ಕವಳಿಕಟ್ಟಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News