ಬಿಪಿಎಲ್ ಕುಟುಂಬಗಳಿಗೆ ಶೀಘ್ರವೇ ರಾಗಿ, ಜೋಳ ವಿತರಣೆ: ಆಹಾರ ಸಚಿವ ಉಮೇಶ್ ಕತ್ತಿ

Update: 2021-02-26 14:50 GMT

ಬೆಂಗಳೂರು, ಫೆ. 26: ಬಿಪಿಎಲ್ ಪಡಿತರ ಚೀಟಿದಾರರಿಗೆ 2 ಕೆ.ಜಿ.ರಾಗಿ ಅಥವಾ ಬಿಳಿಜೋಳ ನೀಡಲಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಉಮೇಶ್ ಕತ್ತಿ ಇಂದಿಲ್ಲಿ ತಿಳಿಸಿದ್ದಾರೆ.

ಶುಕ್ರವಾರ ನಗರದಲ್ಲಿ ಸಿಲ್ಕ್ ಅಸೋಸಿಯೇಷನ್ ಆಫ್ ಇಂಡಿಯಾ ರೇಶ್ಮೆ ಉದ್ಯಮದ ವಿಚಾರ ವಿನಿಮಯ, ನಾನು ಮತ್ತು ರೇಶ್ಮೆ ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಅವರು, ಡಾ.ಎಸ್.ಬಿ.ದಂಡಿನ ಅವರು ಬಾಗಲಕೋಟೆ ವಿವಿಯ ಕುಲಪತಿ ಯಾಗಿದ್ದಾಗ ಅವರ ಜೊತೆ ಕೆಲಸ ಮಾಡಿರುವ ಅನುಭವ ಇದೆ ಎಂದರು.

ಅವರು ಬಾಗಲಕೋಟೆ, ಬೆಳಗಾವಿ, ಹುಬ್ಬಳ್ಳಿಯ ರೈತರ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ನಾನು ಮತ್ತು ರೇಶ್ಮೆ ಪುಸ್ತಕದ ಜೊತೆಗೆ ತೋಟಗಾರಿಕೆ ಬಗ್ಗೆ ಅಪಾರ ಕಾಳಜಿ ಹೊಂದಿರುವ ಅವರು ಮತ್ತು ಸಂಶೋಧನೆಗಳನ್ನು ನಡೆಸಿದ ಅನುಭವ ಅವರಿಗಿದೆ ಎಂದು ಉಮೇಶ್ ಕತ್ತಿ ಹೇಳಿದರು.

ಬಿಪಿಎಲ್ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ಕೇಂದ್ರ ಸರಕಾರದ ಅಕ್ಕಿಯ ಜೊತೆ ಸ್ಥಳೀಯ ಆಹಾರ ಉತ್ಪನ್ನವಾದ ರಾಗಿ ಮತ್ತು ಬಿಳಿಜೋಳ ವಿತರಿಸಲು ಈಗಾಗಲೇ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದ ಅವರು ಶೀಘ್ರದಲ್ಲೆ ರಾಗಿ, ಜೋಳ ವಿತರಣೆ ಮಾಡಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ತೋಟಗಾರಿಕೆ ಮತ್ತು ರೇಶ್ಮೆ ಸಚಿವ ಶಂಕರ್ ಮಾತನಾಡಿ, ರಾಜ್ಯದಲ್ಲಿ ಸುಮಾರು 11 ಸಾವಿರ ಕುಟುಂಬಗಳು ತೋಟಗಾರಿಕೆಯಲ್ಲಿ ತೊಡಗಿದ್ದು, 7 ಸಾವಿರ ಕುಟುಂಬಗಳು ರೇಶ್ಮೆ ನೇಕಾರಿಕೆಯಲ್ಲಿ ತೊಡಗಿದ್ದಾರೆ. ರೇಶ್ಮೆ ಬೆಳೆಗಳ ಉತ್ತೇಜನಕ್ಕೆ ಮತ್ತು ಮಾರುಕಟ್ಟೆಗೆ ಬೇಕಾದ ಎಲ್ಲ ಸೌಲಭ್ಯಗಳನ್ನು ಒದಗಿಸಲು ಸರಕಾರ ಸಿದ್ದವಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News