ದರೋಡೆಗೆ ಹೊಂಚು ಆರೋಪ: ಇಬ್ಬರನ್ನು ಬಂಧಿಸಿದ ತುಂಗಾನಗರ ಪೊಲೀಸರು

Update: 2021-02-26 15:05 GMT

ಶಿವಮೊಗ್ಗ, ಫೆ.26: ದರೋಡೆಗೆ ಹೊಂಚು ಹಾಕಿ ಕುಳಿತಿದ್ದ ಆರೋಪದ ಮೇಲೆ ಇಬ್ಬರನ್ನು ತುಂಗಾನಗರ ಪೊಲೀಸರು ಬಂಧಿಸಿದ್ದಾರೆ.

ನಗರದ ಹೊರವಲಯದಲ್ಲಿರುವ ಶಕ್ತಿಧಾಮ‌ ಲೇಔಟ್ ನಲ್ಲಿ ಪಾದಚಾರಿಗಳು, ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವ ವ್ಯಕ್ತಿಗಳನ್ನು ತಡೆದು ಮಾರಕಾಸ್ತ್ರಗಳಿಂದ‌ ಬೆದರಿಸಿ ಒಡವೆ, ಹಣ ಸುಲಿಗೆ ಮಾಡಲು ತಂಡವೊಂದು ಹೊಂಚು ಹಾಕುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ತುಂಗಾನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ತಿರುಮಲೇಶ್ ನೇತೃತ್ವದ ತಂಡ ಮಿಂಚಿನ ಕಾರ್ಯಾಚರಣೆ ನಡೆಸಿ ಆರೋಪಿತರನ್ನು ಬಂಧಿಸಿದೆ.

ಟಿಪ್ಪುನಗರ ನಿವಾಸಿಗಳಾದ ಸುಹೇಲ್ ಖಾನ್(24) ಹಾಗೂ ಅಬ್ದುಲ್ ಸಲಾಂ(22) ಬಂಧಿತ ಆರೋಪಿಗಳು. ಉಳಿದ ಮೂವರು ತಲೆಮರೆಸಿಕೊಂಡಿದ್ದು, ಇವರ ಪತ್ತೆಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದರು.

ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ ಒಂದು ದ್ವಿಚಕ್ರ ವಾಹನ, ಚಾಕು ಮತ್ತು ಕಬ್ಬಿಣದ ರಾಡು ಹಾಗೂ 200 ಗ್ರಾಂ ಖಾರದ ಪುಡಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ. ಇಬ್ಬರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೊಳಪಡಿಸಲಾಗಿದೆ.

ಡಿವೈಎಸ್ಪಿ ಪ್ರಶಾಂತ್ ಮುನ್ನೋಳಿ, ತುಂಗಾನಗರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ದೀಪಕ್ ಕುಮಾರ್ ಮಾರ್ಗದರ್ಶನದಲ್ಲಿ, ಪಿಎಸ್ಐ ತಿರುಮಲೇಶ್, ಸಿಬ್ಬಂದಿ ಸೈಯದ್ ಇಮ್ರಾನ್, ರಾಜು, ಕಾಂತರಾಜು, ಲಂಕೇಶ್, ರವೀಂದ್ರ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News