‘ಕಾವೇರಿ ಹೆಚ್ಚುವರಿ ನೀರು' ತಮಿಳುನಾಡು ಬಳಸಿಕೊಳ್ಳಲು ಅವಕಾಶ ನೀಡುವುದಿಲ್ಲ: ಬೊಮ್ಮಾಯಿ

Update: 2021-02-26 16:34 GMT

ಬೆಂಗಳೂರು, ಫೆ. 26: ‘ಕಾವೇರಿ ನದಿಯ ಹೆಚ್ಚುವರಿ ನೀರನ್ನು ತಮಿಳುನಾಡು ಸರಕಾರಕ್ಕೆ ಬಳಕೆ ಮಾಡಿಕೊಳ್ಳಲು ರಾಜ್ಯ ಸರಕಾರ ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ. ಈ ಬಗ್ಗೆ ರಾಜ್ಯದ ಜನರಿಗೆ ಆತಂಕಬೇಡ' ಎಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜ ಬೊಮ್ಮಾಯಿ ಇಂದಿಲ್ಲಿ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಉಪಸ್ಥಿತಿಯಲ್ಲಿ ಜಲಸಂಪನ್ಮೂಲ ಇಲಾಖೆ ಹಿರಿಯ ಅಧಿಕಾರಿಗಳ ಜೊತೆ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕಾವೇರಿ ನದಿ ಹೆಚ್ಚುವರಿ ನೀರನ್ನು ತಮಿಳುನಾಡು ಬಳಕೆ ಮಾಡಿಕೊಳ್ಳಲು ಮುಂದಾಗಿರುವುದು ಗಮನಕ್ಕೆ ಬಂದಿದೆ. ಇದಕ್ಕೆ ಸರಕಾರ ಅವಕಾಶ ನೀಡುವುದಿಲ್ಲ. ಕಾವೇರಿ ನದಿಪಾತ್ರದ ರಾಜ್ಯಗಳು ಕಾನೂನು ಪಾಲನೆ ಮಾಡಬೇಕು' ಎಂದು ಮನವಿ ಮಾಡಿದರು.

‘ಕಾವೇರಿ ನದಿ ನೀರು ಹೆಚ್ಚುವರಿ ಬಳಕೆ ಮಾಡಿಕೊಳ್ಳುವ ನೀರಾವರಿ ಯೋಜನೆಗೆ ಕೇಂದ್ರ ಸರಕಾರ ಆರ್ಥಿಕ ನೆರವು ನೀಡಿದೆ ಎಂಬುದು ಆಧಾರರಹಿತ ಆರೋಪ. ತಮಿಳುನಾಡು ಸರಕಾರಕ್ಕೆ ಕೇಂದ್ರ ಯಾವುದೇ ಹಣಕಾಸು ನೆರವು ನೀಡಿಲ್ಲ. ಊಹಾಪೋಹಗಳಿಗೆ ರಾಜ್ಯದ ಜನತೆ ಕಿವಿಗೊಡಬಾರದು' ಎಂದು ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

‘ತಮಿಳುನಾಡು ಸರಕಾರ ಕೈಗೊಳ್ಳಲು ಉದೇಶಿಸಿರುವ ಯೋಜನೆ ಅಂತಾರಾಜ್ಯ ನದಿನೀರು ಹಂಚಿಕೆ ಪ್ರಾಧಿಕಾರದ ವಿರುದ್ಧದ ಯೋಜನೆಯಾಗಿದೆ. ಯಾವ ಆಧಾರದ ಮೇಲೆ ಯೋಜನೆಯನ್ನು ಆರಂಭಿಸಿದ್ದಾರೋ ಗೊತ್ತಿಲ್ಲ. ಕರ್ನಾಟಕಕ್ಕೆ ಮಾಹಿತಿ ನೀಡದೆ ಯೋಜನೆ ಆರಂಭಿಸಿರುವುದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

‘ಸ್ವಾತಂತ್ರ್ಯಪೂರ್ವದಿಂದಲೂ ರಾಜ್ಯದ ಪ್ರತಿಯೊಂದು ನೀರಾವರಿ ಯೋಜನೆಗೂ ದುರುದ್ದೇಶಪೂರ್ವಕವಾಗಿ ತಮಿಳುನಾಡು ಅಡ್ಡಿಪಡಿಸುತ್ತಲೇ ಬಂದಿದೆ. ಎಲ್ಲ ಹಂತಗಳಲ್ಲೂ ವಿವಾದ ಸೃಷ್ಟಿ ಮಾಡುವುದೇ ಅವರ ಗುರಿಯಾಗಿದೆ ಎಂದ ಅವರು, ಕಾವೇರಿ ನದಿ ಹೆಚ್ಚುವರಿ ನೀರನ್ನು ಬಳಕೆ ಮಾಡಬೇಕಾದರೆ ಹೆಚ್ಚುವರಿ ನೀರಿನ ಪ್ರಮಾಣವನ್ನು ನಿಗದಿಪಡಿಸಬೇಕು' ಎಂದರು.

‘ತಮಿಳುನಾಡು ಸರಕಾರ ಮನಸೋಇಚ್ಛೆ ನಿರ್ಧಾರ ಸರಿಯಲ್ಲ. ಹೆಚ್ಚುವರಿ ನೀರು ಬಳಸಿಕೊಳ್ಳಲು ಇವರಿಗೆ ಅಧಿಕಾರ ಕೊಟ್ಟವರು ಯಾರು ಎಂದು ಪ್ರಶ್ನಿಸಿದ ಅವರು, ಕಾವೇರಿ ನದಿ ನೀರು ವಿಚಾರವಾಗಿ ಖಾಸಗಿ ವ್ಯಕ್ತಿಗಳು ನ್ಯಾಯಾಲಯದಲ್ಲಿ ಪ್ರಶ್ನೆ ಮಾಡುವಂತಿಲ್ಲ ಎಂದು ಹಿಂದಿನ ಕೆಲವು ತೀರ್ಪುಗಳಲ್ಲಿ ನ್ಯಾಯಾಲಯವೇ ನಿರ್ದೇಶಿಸಿದೆ. ಆದರೂ, ತಮಿಳುನಾಡು ಸರಕಾರ ಖಾಸಗಿಯವರಿಂದ ದೂರು ದಾಖಲಿಸಿದೆ. ರಾಜ್ಯ ಸರಕಾರಕ್ಕೂ ಕಾನೂನು ಹೋರಾಟ ನಡೆಸುವುದು ಗೊತ್ತಿದೆ' ಎಂದು ಹೇಳಿದರು.

‘ತಮಿಳುನಾಡು ಸರಕಾರ ವೆಲ್ಲಾರು, ವಗೈ, ಗುಂಡೂರು ಯೋಜನೆಗಳಿಗೆ ಅಡ್ಡಿ ಮಾಡಿದೆ. ಕಾವೇರಿಯಲ್ಲಿರುವ ಹೆಚ್ಚುವರಿ 45 ಟಿಎಂಸಿ ನೀರನ್ನು ಬಳಕೆ ಮಾಡಿಕೊಳ್ಳುವ ಯೋಜನೆ ಕಾಮಗಾರಿ ಆರಂಭಿಸಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ತೊಂದರೆಯಾಗಲಿದೆ. ಹೆಚ್ಚುವರಿ ನೀರನ್ನು ಇನ್ನು ಸರಿಯಾಗಿ ಹಂಚಿಕೆ ಮಾಡಿಲ್ಲ. ಇದನ್ನು ಹೀಗೆ ಬಳಸುವುದು ಸರಿಯಲ್ಲ' ಎಂದು ಅವರು ತಿಳಿಸಿದರು.

‘ಕಾನೂನಿಗೆ ವಿರುದ್ಧವಾಗಿರುವ ಈ ಯೋಜನೆಗೆ ಕರ್ನಾಟಕದ ವಿರೋಧವಿದೆ. ಕಾವೇರಿ ನದಿ ನೀರು ಹಂಚಿಕೆಗೆ ಸಂಬಂಧಿಸಿದಂತೆ ಮೂರು ರಾಜ್ಯಗಳಲ್ಲಿ ಒಬ್ಬ ನೋಡಲ್ ಅಧಿಕಾರಿ ನೇಮಿಸಲಾಗಿದೆ. ಯೋಜನೆ ನದಿಪಾತ್ರದಿಂದ ಕೆಳಗಿರುವುದರಿಂದ ನಾವು ನೀರನ್ನು ತಿರುವು ಮಾಡಲು ಬರುವುದಿಲ್ಲ. ನ್ಯಾಯಾಲಯ ಏನು ತೀರ್ಪಿನಡಿಯಲ್ಲೇ ನಾವು ಕಾಮಗಾರಿಯನ್ನು ಆರಂಭಿಸುತ್ತೇವೆ. ಇದು ಕುಡಿಯುವ ನೀರಿನ ಯೋಜನೆಯಾಗಿದೆ' ಎಂದು ಸ್ಪಷ್ಟಪಡಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News