ಗಾರ್ಡನ್ ಟೆನಿಸ್ ಕ್ಲಬ್‌ನಲ್ಲಿ ಆಕಸ್ಮಿಕ ಬೆಂಕಿ: ಪೀಠೋಪಕರಣ ಭಸ್ಮ, ಅಪಾರ ಪ್ರಮಾಣದ ಆಸ್ತಿ ನಷ್ಟ

Update: 2021-02-26 18:03 GMT

ಚಾಮರಾಜನಗರ: ನಗರದ ಸೋಮವಾರಪೇಟೆ ರಸ್ತೆಯಲ್ಲಿರುವ ಪ್ರತಿಷ್ಠಿತ ಗಾರ್ಡನ್ ಟೆನಿಸ್ ಕ್ಲಬ್‍ನಲ್ಲಿ(ಜಿ.ಟಿ.ಸಿ) ಶುಕ್ರವಾರ ಮಧ್ಯಾಹ್ನ ಕಾಣಿಸಿಕೊಂಡ ಆಕಸ್ಮಿಕ ಬೆಂಕಿಯಿಂದ ಅಪಾರ ಪ್ರಮಾಣದ ಆಸ್ತಿ ನಷ್ಟ ಉಂಟಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಮಧ್ಯಾಹ್ನ 2.30ರ ಸಮಯದಲ್ಲಿ ಬೆಂಕಿ ಕಾಣಿಸಿಕೊಂಡು ಕೊಠಡಿ, ಅಡುಗೆ ಮನೆ ಇತರ ಕಡೆಗೂ ಹರಡಿದೆ. ಇದರಿಂದಾಗಿ ಕ್ಲಬ್‍ನ 7 ಕೊಠಡಿಗಳು, ಫ್ರಿಡ್ಜ್, ಟಿವಿ, ಪೀಠೋಪಕರಣಗಳು, ಮದ್ಯದ ಬಾಟಲಿಗಳು, ಅಡುಗೆ ಮನೆಯಲ್ಲಿದ್ದ ಪದಾರ್ಥಗಳು ಬೆಂಕಿಗೆ ಆಹುತಿಯಾಗಿವೆ.

ಬೆಂಕಿ ಕಾಣಿಸಿಕೊಂಡ ಕೂಡಲೇ ಕ್ಲಬ್‍ನಲ್ಲಿದ್ದ ಸುಮಾರು 25 ಜನರು (ಸಿಬ್ಬಂದಿ ಮತ್ತು ಗ್ರಾಹಕರು) ತಕ್ಷಣ ಹೊರಗೆ ಬಂದಿದ್ದಾರೆ. ಜೊತೆಗೆ ಅಡುಗೆ ಮನೆಯಲ್ಲಿದ್ದ ಸಿಲಿಂಡರ್ ಅನ್ನು ಹೊರಗೆ ತೆಗೆದು ಸಂಭವಿಸಬಹುದಾದ ಭಾರೀ ಅವಘಡವನ್ನು ತಪ್ಪಿಸಿ, ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದಾರೆ.

ಸ್ಥಳಕ್ಕೆ ಬಂದ ಅಗ್ನಿಶಾಮಕ ದಳ ಸಿಬ್ಬಂದಿ ಕ್ಲಬ್‍ನ ಪಕ್ಕದಲ್ಲಿದ್ದ ಪೆಟ್ರೋಲ್ ಬಂಕ್‍ಗೆ ಬೆಂಕಿ ತಗಲದಂತೆ ಜಾಗ್ರತೆ ವಹಿಸಿ ಬೆಂಕಿ ನಂದಿಸಿದರು ಎಂದು ಜಿಲ್ಲಾ ಅಗ್ನಿಶಾಮಕ ದಳ ಅಧಿಕಾರಿ ನವೀನ್‍ಕುಮಾರ್ ತಿಳಿಸಿದರು.

ನಗರದಲ್ಲೇ ಅತ್ಯುತ್ತಮವಾದ ಕ್ಲಬ್ ಸ್ಥಾಪಿಸಬೇಕೆಂಬ ಉದ್ದೇಶದಿಂದ ಲಕ್ಷಾಂತರ ರೂ ಬಂಡವಾಳ ಹಾಕಿದ್ದೆವು. ಬೆಂಕಿ ಅವಘಡ ಸಂಭವಿಸಿ ಎಲ್ಲವೂ ನಾಶವಾಗಿ ಹೋಗಿದೆ. ಇದರಿಂದಾಗಿ ದಿಕ್ಕು ತೋಚದಂತಾಗಿದೆ ಎಂದು ಮಾಲಕ ಮಂಜು ಅಳಲು ತೋಡಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News