ಮೀಸಲಾತಿ ಹೋರಾಟ: ಸರಕಾರದ ವಿರುದ್ಧ ಬಿಜೆಪಿ ಸಂಸದ ಶ್ರೀನಿವಾಸಪ್ರಸಾದ್ ಅಸಮಾಧಾನ

Update: 2021-02-26 17:02 GMT

ಮೈಸೂರು,ಫೆ.26: ಹಲವು ಸಮುದಾಯಗಳ ಮೀಸಲಾತಿ ಹೋರಾಟ ವಿಚಾರಕ್ಕೆ ಸಂಬಂಧಿಸಿದಂತೆ ಮೈಸೂರಿನಲ್ಲಿಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಸಂಸದ ಶ್ರೀನಿವಾಸ್ ಪ್ರಸಾದ್ ಮೀಸಲಾತಿ ಬಗ್ಗೆ ಸರ್ಕಾರಕ್ಕೆ ಸ್ಪಷ್ಟ ನಿಲುವು ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ನಗರದಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಪ್ರತಿ ಜಾತಿ ಜನಾಂಗವು ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸರ್ಕಾರ ಇದರ ಬಗ್ಗೆ ಎಲ್ಲಾದರೂ ಹೇಳಿಕೆ ಕೊಟ್ಟಿದೆಯೇ. ಸಂವಿಧಾನ ಬದ್ಧವಾಗಿ ಮೀಸಲಾತಿ ಬಗ್ಗೆ ನಿರ್ಣಯ ಕೈಗೊಳ್ಳಲು ಅಧಿಕಾರ ಇದೆ ಎಂದು ಎಲ್ಲಾದರೂ ಸ್ಪಷ್ಟವಾಗಿ ಹೇಳಿದೆಯೇ. ಇದು ಕೇಂದ್ರ ಸರ್ಕಾರಕ್ಕೆ ಸೇರಿದ್ದು, ಇದರ ಬಗ್ಗೆ ಕೂಲಂಕಷವಾಗಿ ಚರ್ಚೆ ಮಾಡಿ, ಸಮಿತಿ ರಚನೆ ಮಾಡಿ ಅದನ್ನು ಜಾರಿಗೆ ತರಲು ದಾಖಲೆ ಕೊಡಿ, ಅದನ್ನು ಕ್ಯಾಬಿನೆಟ್ ನಲ್ಲಿ ಚರ್ಚೆ ಮಾಡಿ ಕೇಂದ್ರಕ್ಕೆ ಕಳುಹಿಸುತ್ತೇವೆ, ಇದು ಮಾತ್ರ ನಮ್ಮಿಂದ ಸಾಧ್ಯ ಎಂದು ಸರ್ಕಾರ ಹೋರಾಟಗಾರರಿಗೆ ಹೇಳಿದೆಯೇ ?. ವೇದಿಕೆಯಲ್ಲಿ ಕೇಳಿದಾಗಲೆಲ್ಲ ಮೀಸಲಾತಿ ಕೊಡಲು ಆಗಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದೀರಾ? ಇದನ್ನು ಸರ್ಕಾರ ಸ್ಪಷ್ಟ ಪಡಿಸಬೇಕು. ಪಂಚಮಸಾಲಿಗಳು ನಮ್ಮ ಪಕ್ಷದ ಬೆನ್ನೆಲುಬು. ಅವರು ನಮ್ಮನ್ನು 2ಎ ಗೆ ಸೇರಿಸುವಂತೆ ತಿರುಗಿ ಬಿದ್ದಿದ್ದಾರೆ. ಅವರನ್ನು ಸೇರಿಸುತ್ತೀರಾ? ಹಾಗೆ ಮಾಡಲು ಸಂವಿಧಾನದಲ್ಲಿ ಅವಕಾಶ ಇದೆಯೇ ? ಈ ವಿಚಾರವಾಗಿ ಸರ್ಕಾರದ ಸ್ಪಷ್ಟ ನಿಲುವು ಬೇಡವೆ ? ಈ ವಿಚಾರದಲ್ಲಿ ಎಲ್ಲರೂ ಗೊಂದಲದಲ್ಲಿ ಇದ್ದೇವೆ ಎಂದು ಅಸಮಾಧಾನ ಹೊರಹಾಕಿದರು.

ಸರಕಾರ ಬಂದು ಎರಡು ವರ್ಷ ಆದರೂ ಎಲ್ಲೆಲ್ಲಿ ನಾಯಕತ್ವದ ಕೊರತೆ ಇದೆ, ಜನಾಂಗ ಸಮಸ್ಯೆ ಇದೆ, ಯಾವ ಜನಾಂಗಕ್ಕೆ ಪ್ರಾತಿನಿಧ್ಯ ಕೊಡಬೇಕು ಅನ್ನೋದನ್ನು ಅಲೋಚನೆ ಮಾಡಿದ್ದೀರಾ ? ಎಂದು ಸರಕಾರಕ್ಕೆ ಪ್ರಶ್ನಿಸಿದರು.

ಕೊವೀಡ್ ನಿಂದ ರಾಷ್ಟ್ರ ತತ್ತರಿಸಿ ಹೋಗಿದೆ. ರೈತರ ದೊಡ್ಡ ಚಳುವಳಿಯಾಗುತ್ತಿದೆ. ಎಂಪಿಗಳ ಸಂಬಳ ಕಡಿತವಾಗಿದೆ. ಅಭಿವೃದ್ಧಿಗೆ ಹಣ ಬರುತ್ತಿಲ್ಲ. ಮೋದಿಯವರ ಮೇಲೆ ವಿಶ್ವಾಸವಿಟ್ಟು ಜನ ಎರಡನೇ ಬಾರಿ ಗೆಲ್ಲಿಸಿದ್ದಾರೆ. ಇದನ್ನು ನಾವು ಉಳಿಸಿಕೊಳ್ಳಬೇಕು. ನಾವು ಪಕ್ಷದ ಸಂಘಟನೆಗೆ ದುಡಿದಿರುವಂತವರು, ಕಾರ್ಯಕಾರಣಿಯಲ್ಲಿರುವವರು. ನಮ್ಮ ಬಿಚ್ಚು ಮನಸ್ಸಿನ ಸಲಹೆ ನಾಯಕರಿಗೆ ತಿಳಿಸೋಣ. ಮೀಸಲಾತಿ ವಿಚಾರವಾಗಿ ಸರ್ಕಾರ ಹಿಂದೇಟು ಹಾಕದೇ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ನಮ್ಮ ಹೇಳಿಕೆಗಳು ಸ್ಪಷ್ಟವಾಗಿರಬೇಕು ಎಂದರು.

ಮೀಸಲಾತಿಗಳು ರಾಜಕೀಯ ಪ್ರೇರಿತ ಎಂಬ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ರಾಜಕೀಯ ಪ್ರೇರಿತವಾದರೆ ಮುಖ್ಯಮಂತ್ರಿಗಳು, ಕಾನೂನು ಸಚಿವರು ಈ ಬಗ್ಗೆ ಹೇಳಬೇಕು. ಪಕ್ಷದ ಕೋರ್ ಕಮಿಟಿಯಲ್ಲಿ ಚರ್ಚಿಸಬೇಕು. ಆದರೆ ಇದರ ಬಗ್ಗೆ ಸ್ಪಷ್ಟ ಹೇಳಿಕೆಗಳೇ ಬರುತ್ತಿಲ್ಲ. ಪಕ್ಷದಲ್ಲಿ ಸ್ಪಷ್ಟ ನಿಲುವಿಲ್ಲ. ಗೊಂದಲದಲ್ಲಿ ಸಿಲುಕಿದ್ದೇವೆ. ಮಠಾಧಿಪತಿಗಳ ಹೋರಾಟದ ಬಗ್ಗೆ ನಾನು ಮಾತನಾಡಲ್ಲ. ಯಾರು ಏನು ಹೇಳಿದ್ದಾರೋ ಗೊತ್ತಿಲ್ಲ. ಸರ್ಕಾರ ಸ್ಪಷ್ಟ ನಿಲುವು, ಹೇಳಿಕೆಗಳ ಮೂಲಕ ಜನರ ಮನಸ್ಸಿನ ಸಂಶಯ ಹೋಗಲಾಡಿಸಬೇಕು ಎಂದು ಸಲಹೆ ನೀಡಿದರು.

ಮೇಯರ್ ಚುನಾವಣೆಯಲ್ಲಿ ಮತ್ತೆ ಮೈತ್ರಿ ಮುಂದುವರಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ ಅದು ಅವರ ಪಕ್ಷದ ಆಂತರಿಕ ವಿಚಾರ. ಈ ಬಗ್ಗೆ ನಾನು ಮಾತನಾಡುವುದಿಲ್ಲ. ವಿರೋಧ ಪಕ್ಷಗಳು ಸತ್ತು ಸುಣ್ಣವಾಗಿದೆ. ನೀವೇ ಅರ್ಥ ಮಾಡಿಕೊಳ್ಳಬೇಕು ಅವರ ಪರಿಸ್ಥಿತಿಯನ್ನು ಎಂದು ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News