ಸಾಹಿತಿ ಭಗವಾನ್ ಮುಖಕ್ಕೆ ಮಸಿ: ವಕೀಲೆ ಮೀರಾ ಅಮಾನತಿಗೆ ಶಿಫಾರಸ್ಸು

Update: 2021-02-26 17:07 GMT

ಬೆಂಗಳೂರು, ಫೆ.26: ಸಾಹಿತಿ, ಚಿಂತಕ ಪ್ರೊ.ಕೆ.ಎಸ್.ಭಗವಾನ್ ಅವರ ಮುಖಕ್ಕೆ ಕೋರ್ಟ್ ಆವರಣದಲ್ಲೇ ಮಸಿ ಬಳಿದಿದ್ದ ಮೀರಾ ರಾಘವೇಂದ್ರ ಅವರ ವಕೀಲಿಕೆ ಸನ್ನದು ರದ್ದುಪಡಿಸುವಂತೆ ಕರ್ನಾಟಕ ರಾಜ್ಯ ವಕೀಲರ ಪರಿಷತ್(ಕೆಎಸ್‍ಬಿಸಿ)ಗೆ ಶಿಫಾರಸು ಮಾಡಲಾಗಿದೆ.

ಘಟನೆ ಸಂಬಂಧ ವಿಚಾರಣೆ ನಡೆಸಿ ವರದಿ ನೀಡುವಂತೆ ಕೆಎಸ್‍ಬಿಸಿ ಉಪಸಮಿತಿ ರಚಿಸಿತ್ತು. ಬಾರ್ ಕೌನ್ಸಿಲ್ ಉಪ ಸಮಿತಿ ಇದೀಗ ವರದಿ ನೀಡಿದ್ದು, ಶಿಸ್ತು ವಿಚಾರಣೆ ಮುಗಿಯುವರೆಗೆ ಮೀರಾ ಅವರ ವಕೀಲಿಕೆ ಸನ್ನದು ಅಮಾನತು ಮಾಡುವಂತೆ ಶಿಫಾರಸು ಮಾಡಿದೆ.

ಪ್ರಕರಣದ ವಿಚಾರಣೆ ನಡೆಸಲಿಕ್ಕಾಗಿ ಕೆಎಸ್‍ಬಿಸಿ ಇತ್ತೀಚೆಗೆ ಸದಸ್ಯರಾದ ಎನ್. ಶಿವಕುಮಾರ್, ಎಂ.ದೇವರಾಜ, ಎಂ.ಎನ್.ಮಧುಸೂದನ್‍ರೊಳಗೊಂಡ ಉಪಸಮಿತಿಯನ್ನು ರಚಿಸಿತ್ತು.

ಹಿಂದೂ ಧರ್ಮದ ಬಗ್ಗೆ ಹಗುರವಾಗಿ ಮಾತನಾಡಿದರು ಎಂಬ ಕಾರಣಕ್ಕೆ ಸಾಹಿತಿ ಪ್ರೊ. ಕೆ.ಎಸ್ ಭಗವಾನ್ ವಿರುದ್ಧ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೂರು ದಾಖಲಿಸಲಾಗಿತ್ತು. ಈ ಪ್ರಕರಣದ ವಿಚಾರಣೆಗೆಂದು ಫೆ.4ರಂದು ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಆಗಮಿಸಿದ್ದ ಭಗವಾನ್ ವಾಪಸ್ಸಾಗುವ ಸಂದರ್ಭದಲ್ಲಿ ವಕೀಲೆ ಮೀರಾ ಮುಖಕ್ಕೆ ಮಸಿ ಬಳಿದಿದ್ದರು.

ವಕೀಲೆಯ ಈ ಕೃತ್ಯಕ್ಕೆ ಬೆಂಗಳೂರು ವಕೀಲರ ಸಂಘ ಸೇರಿದಂತೆ ಹಲವು ಸಾಹಿತಿಗಳು, ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು. ಓರ್ವ ನ್ಯಾಯವಾದಿಯಾಗಿ ಮೀರಾ ನಡೆದುಕೊಂಡ ರೀತಿ ಸರಿಯಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದವು. ಆದರೆ, ತಮ್ಮ ನಡೆಯನ್ನು ಸಮರ್ಥಿಸಿಕೊಂಡಿದ್ದ ಮೀರಾ, ಹಿಂದೂ ಧರ್ಮದ ಬಗ್ಗೆ ಭಗವಾನ್ ಹಗುರವಾಗಿ ಮಾತನಾಡಿದ್ದು ಸರಿಯಲ್ಲ ಎಂದಿದ್ದರು.

ಮುಖಕ್ಕೆ ಮಸಿ ಬಳಿದ ಬೆನ್ನಲ್ಲೇ ಭಗವಾನ್ ಅವರು ನಗರದ ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಇದರನ್ವಯ ಮೀರಾ ವಿರುದ್ಧ ಐಪಿಸಿ ಸೆಕ್ಷನ್ 341(ಅಕ್ರಮವಾಗಿ ತಡೆಯುವುದು), 504(ಅವಾಚ್ಯವಾಗಿ ನಿಂದನೆ), 506(ಕೊಲೆ ಬೆದರಿಕೆ) ಅಡಿ ಎಫ್‍ಐಆರ್ ದಾಖಲಾಗಿತ್ತು. ಜತೆಗೆ, ಭಗವಾನ್ ಅವರು ಕರ್ನಾಟಕ ಸ್ಟೇಟ್ ಬಾರ್ ಕೌನ್ಸಿಲ್‍ಗೂ ದೂರು ಸಲ್ಲಿಸಿ ಪೂರ್ವಯೋಜಿತ ಕೃತ್ಯವೆಸಗಿರುವ ಮೀರಾ ರಾಘವೇಂದ್ರ ಅವರ ಸದಸ್ಯತ್ವ ರದ್ದುಗೊಳಿಸುವಂತೆ ಕೋರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News