'ಅಸಹಾಯಕ ಸಿಎಂ, ಬ್ಲಾಕ್‍ಮೇಲ್ ಮಂತ್ರಿಮಂಡಲ, ಪುಕ್ಕಲು ಸಂಸದರು': ಕಾಂಗ್ರೆಸ್ ಟ್ವೀಟ್ ಪ್ರಹಾರ
ಬೆಂಗಳೂರು, ಫೆ.26: ಡಕೋಟಾ ಸರಕಾರ, ಅಸಹಾಯಕ ಮುಖ್ಯಮಂತ್ರಿ, ಬ್ಲಾಕ್‍ಮೇಲ್ ಮಂತ್ರಿಮಂಡಲ, ಪುಕ್ಕಲು ಸಂಸದರು, ತಿಕ್ಕಲು ಸಚಿವರು, ಸಾಮಾನ್ಯ ಶಾಸಕರು, ಭ್ರಷ್ಟಾಚಾರದ ಆಡಳಿತ. ಸಮನ್ವಯತೆಯಿಲ್ಲ, ಜನಪರ ಯೋಜನೆಯಿಲ್ಲ, ಶಾಸಕರಿಗೆ ಸ್ವಾತಂತ್ರ್ಯವಿಲ್ಲ, ಅನುದಾನವೂ ಇಲ್ಲ. ಬಿಜೆಪಿ/ಬಿಜೆಪಿ ಕಚ್ಚಾಟದಲ್ಲಿ ರಾಜ್ಯ ನಲುಗಿದೆ. ಇದೇನಾ ನಿಮ್ಮ ಆಡಳಿತ ವೈಖರಿ ರಾಜ್ಯ ಬಿಜೆಪಿ ಎಂದು ಕಾಂಗ್ರೆಸ್ ಟ್ವೀಟ್ ಮಾಡಿದೆ.
ಹೋರಾಟವಿರುವುದು ಬಿಜೆಪಿ/ಬಿಜೆಪಿ ನಡುವೆ. ಸೋಲುತ್ತಿರುವುದು ರಾಜ್ಯದ ಜನತೆ. ಸಾಮಾನ್ಯ ಶಾಸಕರಿಗೆ ಅನುದಾನವಿಲ್ಲ, ಸಚಿವರಿಗೆ ಖಾತೆ ನಿಭಾಯಿಸುವ ಯೋಗ್ಯತೆ ಇಲ್ಲ. ರಾಜ್ಯ ಬಿಜೆಪಿ ನಿಮ್ಮವರೇ ನಿಮ್ಮ ಬಂಡವಾಳ, ಅಯೋಗ್ಯತನವನ್ನು ಹೊರ ಹಾಕುತ್ತಿದ್ದಾರೆ. ಮೊದಲು ನಿಮ್ಮೊಳಗಿನ ಕಿತ್ತಾಟ ನಿಲ್ಲಿಸಿ, ನೆಟ್ಟಗೆ ಆಡಳಿತ ನಡೆಸಿ, ನಿಮ್ಮಿಂದ ಜನತೆ ನೆಮ್ಮದಿ ಕಳೆದಿದೆ ಎಂದು ಕಾಂಗ್ರೆಸ್ ಟೀಕಿಸಿದೆ.
‘ಉಕ್ಕಿನ ಮನುಷ್ಯ’ ಸರ್ದಾರ್ ಪಟೇಲರ ಪಾದದ ಧೂಳಿಗೂ ಸಮನಲ್ಲದ ‘ತುಕ್ಕಿನ ಮನುಷ್ಯ’ ಪಟೇಲರಿಗಿಂತ ತಾನೇ ಮಹಾನ್ ವ್ಯಕ್ತಿ ಎಂದುಕೊಂಡು ಆತ್ಮರತಿಯಲ್ಲಿದ್ದಾನೆ. ಜಿಡಿಪಿ ಕುಸಿತ, ನಿರುದ್ಯೋಗ, ಐತಿಹಾಸಿಕ ಬೆಲೆ ಏರಿಕೆ, ಖಾಸಗೀಕರಣ. ಇದೆಲ್ಲದರ ನೆನಪು ಭಾರತೀಯರಿಗೆ ಸದಾ ಇರಲೆಂದು ತನ್ನ ಹೆಸರು ಇಟ್ಟಿದ್ದಾನೆ. ಭಾರತೀಯರ ಪಾಲಿನ ದುಬಾರಿ ಫಕೀರ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ.