ಜೆಡಿಎಸ್ ನಾಶ ಮಾಡಲು ಸಾಧ್ಯವಿಲ್ಲ, ಪಕ್ಷ ರಾಜ್ಯದಲ್ಲಿ ಅಧಿಕಾರಕ್ಕೆ ಬರುತ್ತದೆ: ಎಚ್.ಡಿ.ದೇವೇಗೌಡ

Update: 2021-02-26 17:27 GMT

ಮಂಡ್ಯ, ಫೆ.26: ಹರದನಹಳ್ಳಿ ದೊಡ್ಡೇಗೌಡ ರಾಜಕಾರಣಿಯಲ್ಲ, ಸಾಮಾನ್ಯ ರೈತ. ಈ ಶರೀರ ಇರುವವರೆಗೂ ಕಾವೇರಿಗೆ ಹೋರಾಟ ಮಾಡುತ್ತೇನೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ತಿಳಿಸಿದ್ದಾರೆ.

ಪಾಂಡವಪರ ತಾಲೂಕು ಮೇಲುಕೋಟೆಯಲ್ಲಿ ಶುಕ್ರವಾರ ನಡೆದ ಮೇಲುಕೋಟೆ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಬೆಂಬಲಿತ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರ ಅಭಿನಂದನಾ ಸಭೆಯಲ್ಲಿ ಮಾತನಾಡಿದ ಅವರು, ವೈಗೈ, ವಾಲ್ಲಾರು, ಗುಂಡಾರು ನದಿಗಳನ್ನು ಕಾವೇರಿ ನದಿಗೆ ಜೋಡಣೆ ಮಾಡಲು ತಮಿಳುನಾಡು ಸರಕಾರ ಮುಂದಾಗಿರುವುದನ್ನು ತೀವ್ರವಾಗಿ ಖಂಡಿಸಿದರು.

ಕಾವೇರಿ ಉಳಿವಿಗಾಗಿ ನಿರಂತರ ಹೋರಾಟ ಮಾಡಿದ್ದೇನೆ, ಉಪವಾಸ ಕುಳಿತಿದ್ದೇನೆ. ಈಗಲೂ ಸುಮ್ಮನೆ ಕೂರುವುದಿಲ್ಲ, ಹೋರಾಡುತ್ತೇನೆ. ಜಿಲ್ಲೆಯ ಜನರು ಕಾವೇರಿ ಉಳಿವಿಗೆ ಹೋರಾಟಕ್ಕೆ ಮುಂದಾಗಬೇಕು ಎಂದು ಅವರು ಕರೆ ನೀಡಿದರು.

ಯಾರೂ ಜೆಡಿಎಸ್ ನಾಶ ಮಾಡಲು ಸಾಧ್ಯವಿಲ್ಲ. ಈ ಪಕ್ಷ ರಾಜ್ಯದಲ್ಲಿ ಉಳಿಯುತ್ತದೆ, ಬೆಳೆಯುತ್ತದೆ, ಅಧಿಕಾರಕ್ಕೆ ಬರುತ್ತದೆ. ಇನ್ನು ಮೂರು ತಿಂಗಳು ಬಂದರೆ 88 ಆಗುತ್ತೆ. ಆದರೂ ದೇವೇಗೌಡ ಮನೆಯಲ್ಲಿ ಕೂರುವುದಿಲ್ಲ ಎಂದು ಅವರು ಹೇಳಿದರು.

ಕುಮಾರಸ್ವಾಮಿ ಮತ್ತೆ ಮುಖ್ಯಮಂತ್ರಿ ಆಗುತ್ತಾರೆಂದು ನಾನು ಹೇಳಿದರೆ ಮಗನ ಮೇಲಿನ ವ್ಯಾಮೋಹ ಎನ್ನಬಹುದು. ಆದರೆ, ಕುಮಾರಸ್ವಾಮಿ ಹೋದ ಕಡೆಯಲ್ಲೆಲ್ಲಾ ಕುಮಾರಸ್ವಾಮಿಯೇ ಮುಂದಿನ ಮುಖ್ಯಮಂತ್ರಿ ಎಂದು ಜನ ಕೂಗುತ್ತಿದ್ದಾರೆ ಎಂದು ಅವರು ಹೇಳಿದರು.

ಶಾಸಕರಾದ ಎಚ್. ಡಿ.ರೇವಣ್ಣ, ಸಾ.ರಾ.ಮಹೇಶ್, ಸಿ.ಎಸ್.ಪುಟ್ಟರಾಜು, ಶ್ರೀಕಂಠೇಗೌಡ, ಅಪ್ಪಾಜಿಗೌಡ, ಮಾಜಿ ಸಂಸದರಾದ ಎಲ್.ಆರ್.ಶಿವರಾಮೇಗೌಡ, ಕುಪೇಂದ್ರ ರೆಡ್ಡಿ, ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಝಫರುಲ್ಲಾಖಾನ್, ಮೈಸೂರು ನೂತನ ಮೇಯರ್ ರುಕ್ಮಿಣಿ ಮಾದೇಗೌಡ, ಇತರೆ ಮುಖಂಡರು ಉಪಸ್ಥಿತರಿದ್ದರು.

2018ರಲ್ಲಿ ಮೈಸೂರು ಮಹಾನಗರಪಾಲಿಕೆಯಲ್ಲಿ 18 ಕಾಂಗ್ರೆಸ್, 25 ಜೆಡಿಎಸ್ ಸದಸ್ಯರಿದ್ದರು. ಆಗ ಕುಮಾರಸ್ವಾಮಿ ಸಿಎಂ ಆಗಿದ್ದರು. ಒಂದು ಪಕ್ಷೇತರ ಸದಸ್ಯರನ್ನು ಬರಮಾಡಿಕೊಂಡು  ಕಾಂಗ್ರೆಸ್ ನವರು ಕೇಳದೇ ಇದ್ದರೂ ಅವರಿಗೇ ಬೆಂಬಲ ಕೊಡಿ ಎಂದು ನಾನು  ಹೇಳಿದ್ದೆ. ಅದನ್ನು ಸಿದ್ದರಾಮಯ್ಯನವರು ಈಗ ಸ್ಮರಿಸಿಕೊಳ್ಳಬೇಕು."
-ಎಚ್.ಡಿ.ದೇವೇಗೌಡ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News