ಚಿಕ್ಕಮಗಳೂರು: ಜಿಲ್ಲಾ ಲಾರಿ ಮಾಲಕರ ಸಂಘದ ಮುಷ್ಕರ ಯಶಸ್ವಿ; ರಸ್ತೆಗಿಳಿಯದ ಸರಕು ಸಾಗಣೆ ಲಾರಿಗಳು

Update: 2021-02-26 18:16 GMT

ಚಿಕ್ಕಮಗಳೂರು, ಫೆ.26: ಪೆಟ್ರೋಲ್, ಡೀಸೆಲ್ ಮೇಲಿನ ತೆರಿಗೆಯನ್ನು ಕಡಿತಗೊಳಿಸುವಂತೆ ಒತ್ತಾಯಿಸಿ ಜಿಲ್ಲಾ ಲಾರಿ ಮಾಲಕರ ಸಂಘದ ವತಿಯಿಂದ ನಗರದಲ್ಲಿ ಸಾಂಕೇತಿಕವಾಗಿ ಮುಷ್ಕರ ನಡೆಸಲಾಯಿತು. ಮುಷ್ಕರದ ಹಿನ್ನೆಲೆಯಲ್ಲಿ ನಗರ ವ್ಯಾಪ್ತಿಯಲ್ಲಿ ಸರಕು ಸಾಗಣೆ ಲಾರಿಗಳು ಕಣ್ಣಿಗೆ ಬೀಳಲಿಲ್ಲ.

ಶುಕ್ರವಾರ ದೇಶಾದ್ಯಂತ ಆಲ್ ಇಂಡಿಯಾ ಟ್ರಾನ್ಸ್ ಪೋರ್ಟ್ ಅಸೋಸಿಯೇಷನ್ ಮತ್ತು ಸೌತ್ ಇಂಡಿಯಾ ಲಾರಿ ಮಾಲಕರ ಅಸೋಸಿಯೇಷನ್ ಹಾಗೂ ಫೆಡರೇಷನ್ ಆಫ್ ಕರ್ನಾಟಕ ಸ್ಟೇಟ್ ಲಾರಿ ಮಾಲಕರು ಮತ್ತು ಏಜೆಂಟ್ ಅಸೋಸಿಯೇಷನ್ ಮತ್ತು ಇತರ ಸಂಘಗಳು ಕರೆ ನೀಡಿದ್ದ ಮುಷ್ಕರವನ್ನು ಬೆಂಬಲಿಸಿ ಲಾರಿ ಮಾಲಕರು ಮತ್ತು ಚಾಲಕರು ಮುಷ್ಕರ ನಡೆಸಿದರು.

ಬೆಳಗ್ಗೆಯಿಂದಲೇ ಜಿಲ್ಲಾದ್ಯಂತ ಇರುವ 1,200 ಲಾರಿಗಳನ್ನು ರಸ್ತೆಗಿಳಿಸದೇ ಮುಷ್ಕರ ನಡೆಸಿದ ಲಾರಿ ಮಾಲಕರು ಮತ್ತು ಚಾಲಕರು, ಡಿಸೇಲ್ ದರ ದಿನದಿಂದ ದಿನಕ್ಕೆ ಏರುತ್ತಿದೆ. ಈಗಾಗಲೇ ಕೊರೋನ ಸೋಂಕಿನಿಂದ ತತ್ತರಿಸಿ ಹೋಗಿರುವ ಲಾರಿ ಮಾಲಕರ ಹೊಟ್ಟೆ ಮೇಲೆ ಸರಕಾರ ತಣ್ಣೀರು ಬಟ್ಟೆ ಹೊದಿಸಲು ಮುಂದಾಗಿದೆ. ಹೆಚ್ಚಿನ ತೆರಿಗೆ ವಿಧಿಸಿರುವುದರಿಂದ 15 ರಾಜ್ಯಗಳಲ್ಲಿನ ಇಂಧನ ಬೆಲೆಗಿಂತ ಕರ್ನಾಟಕದಲ್ಲಿ ಡೀಸೆಲ್ ಬೆಲೆ ಅಧಿಕವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬೇರೆ ರಾಜ್ಯಗಳಿಂದ ಪ್ರತಿನಿತ್ಯ 40 ಸಾವಿರ ವಾಹನಗಳು ರಾಜ್ಯದಲ್ಲಿ ಸಂಚರಿಸುತ್ತಿದ್ದು, 1 ಲೀಟರ್ ಡೀಸೆಲ್ ಮೇಲೆ 3 ರೂ. ಕಡಿತಗೊಳಿಸಿದರೆ ಒಂದು ಲಾರಿ 200 ಲೀಟರ್ ಡೀಸೆಲ್ ತುಂಬಿಸಿದರೆ ಒಟ್ಟು 40 ಸಾವಿರ ವಾಹನಗಳಿಂದ ದಿನಕ್ಕೆ 8 ಲಕ್ಷ ಲೀಟರ್ ಆಗುತ್ತದೆ. ಇದರಿಂದ ರಾಜ್ಯದ ಬೊಕ್ಕಸಕ್ಕೆ 1.60 ಕೋಟಿ ರೂ. ಆದಾಯ ಬರುತ್ತದೆ. ಕೂಡಲೇ ಡೀಸೆಲ್ ಮೇಲಿನ ತೆರಿಗೆ ಕಡಿತಗೊಳಿಸುವ ಮೂಲಕ ದರ ಕಡಿಮೆ ಮಾಡಬೇಕೆಂದು ಸಂಘದ ಮುಖಂಡರು ಆಗ್ರಹಿಸಿದರು.

ಮಹಾರಾಷ್ಟ್ರ ಹಾಗೂ ತಮಿಳುನಾಡು ಗಡಿಭಾಗಗಳ ಮೂಲಕ ಹಾದುಹೋಗುವ ಬಿಜಾಪುರ, ಬೆಳಗಾಂ, ಕಲ್ಬುರ್ಗಿ, ಬೀದರ್ ಮತ್ತು ಬೆಂಗಳೂರು ಜಿಲ್ಲೆಗಳಲ್ಲಿ 1.50 ರೂ. ಮಹಾರಾಷ್ಟ್ರ, ತಮಿಳುನಾಡಿಗಿಂತ ಕಡಿಮೆ ದರ ಇತ್ತು. ಆದರೆ ಈಗ ಡೀಸೆಲ್ ಮೇಲೆ ಹೆಚ್ಚು ತೆರಿಗೆ ಹೇರಿರುವುದರಿಂದ ಇತರ ರಾಜ್ಯಗಳಿಗಿಂತ ದರ ಅಧಿಕಗೊಂಡಿದೆ. ತಕ್ಷಣ ಡೀಸೆಲ್ ಮೇಲೆ 3 ರೂ. ತೆರಿಗೆ ಕಡಿತಗೊಳಿಸಬೇಕೆಂದು ಒತ್ತಾಯಿಸಿದರು.

ಜಿಲ್ಲಾ ಕೇಂದ್ರದಲ್ಲಿ ಟ್ರಕ್ ಟರ್ಮಿನಲ್ ನಿರ್ಮಿಸಿಕೊಡುವಂತೆ ಹಲವು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ, ತಾತ್ಕಲಿಕವಾಗಿ ಸಂತೆ ಮೈದಾನದಲ್ಲಿ ಒಂದು ಬದಿಯಲ್ಲಿ ಲಾರಿಗಳನ್ನು ನಿಲ್ಲಿಸಲಾಗುತ್ತಿದೆ. ಕೂಡಲೇ ಟ್ರಕ್ ಟರ್ಮಿನಲ್ ನಿರ್ಮಿಸಿಕೊಡಬೇಕೆಂದು ಒತ್ತಾಯಿಸಿದ ಅವರು, ಟ್ರಕ್ ಟರ್ಮಿನಲ್ ಇರುವ ಜಿಲ್ಲೆಗಳಲ್ಲಿ ಕುಡಿಯುವ ನೀರು, ಶೌಚಾಲಯ ನಿರ್ಮಿಸಿಕೊಡಬೇಕೆಂದು ಮನವಿ ಮಾಡಿದರು.

ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲಾ ಲಾರಿ ಮಾಲಕರ ಸಂಘದ ಅಧ್ಯಕ್ಷ ಜಿ.ಕೆ.ಶಿವಾನಂದ, ಉಪಾಧ್ಯಕ್ಷ ಲಾಲೂಪಿಂಟೋ, ಕಾರ್ಯದರ್ಶಿ ಬೆರ್ನಾರ್ಡ್‍ಹೆನ್ರಿ, ಖಜಾಂಚಿ ಮಲ್ಲಿಕಾ, ಸಿ.ಆರ್.ರಾಮು, ರೆಹಮತ್, ಪ್ರಮೋದ್, ಗಂಗಾಧರ್, ಕೆ.ಸಿ.ಯುವರಾಜ್, ಬಸವರಾಜ್, ರಮೇಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News