ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿದ್ದು ನನ್ನ ದೊಡ್ಡ ತಪ್ಪು: ರೈತ ಮುಖಂಡ ನರೇಶ್‌ ಟಿಕಾಯತ್‌ ಹೇಳಿಕೆ

Update: 2021-02-27 08:32 GMT

ಲಕ್ನೋ: "ಈ ಹಿಂದೆ ಬಿಜೆಪಿಗೆ ಬೆಂಬಲ ನೀಡಿದ್ದು ನನ್ನ ದೊಡ್ಡ ತಪ್ಪು, ನನ್ನ ಹಿಂದಿನ ಸಭೆಗಳು ಬಿಜೆಪಿಯ ಚುನಾವಣಾ ರ್ಯಾಲಿಗಳಾಗಬೇಕು ಎಂಬ ಉದ್ದೇಶ ಯಾವತ್ತೂ ಇರಲಿಲ್ಲ" ಎಂದು ಭಾರತೀಯ ಕಿಸಾನ್ ಯೂನಿಯನ್‍ನ ರಾಷ್ಟ್ರೀಯ ಅಧ್ಯಕ್ಷ ನರೇಶ್ ಟಿಕಾಯತ್ ಹೇಳಿದ್ದಾರೆ.

ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ಮುಂಡೆರ್ವ ಎಂಬಲ್ಲಿ  ಫೆಬ್ರವರಿ 25ರಂದು ನಡೆದ ರೈತರ ಬೃಹತ್ ಮಹಾಪಂಚಾಯತ್ ಉದ್ದೇಶಿಸಿ ಮಾತನಾಡಿದ ಅವರು ಬಿಜೆಪಿ ಸರಕಾರ ರೈತರನ್ನು ನಾಶಗೊಳಿಸುವ ಉದ್ದೇಶ ಹೊಂದಿದೆ ಎಂದು ಆರೋಪಿಸಿದರು. "ನಮ್ಮ ಜಮೀನು ಕಳೆದುಕೊಂಡು  ಕೃಷಿ ಕಾರ್ಯ ನಡೆಸಲು ಸಾಧ್ಯವಿಲ್ಲದೇ ಇದ್ದರೆ ಮತ್ತೆ ನಮಗೇನು ಉಳಿದಿದೆ? ನಮ್ಮ ಜಮೀನುಗಳನ್ನು ಯಾವುದೇ ಸಂದರ್ಭದಲ್ಲಿಯೂ ಬಿಟ್ಟು ಕೊಡುವುದಿಲ್ಲ" ಎಂದು ಅವರು ಹೇಳಿದರು.

ಬಿಜೆಪಿ ಶಾಸಕರುಗಳ ಜತೆ ಯಾವುದೇ ಸಂಬಂಧ ಇಟ್ಟುಕೊಳ್ಳಬೇಡಿ, ಅವರನ್ನು ಕಾರ್ಯಕ್ರಮಗಳಿಗೆ ಆಹ್ವಾನಿಸಬೇಡಿ ಎಂದು ಹೇಳಿದ ಅವರು "ಇಂದು ಸರಕಾರ ನಮ್ಮ ಜತೆ  ಘರ್ಷಣೆಗಿಳಿದಿದೆ. ನಮಗೆ ಮಾತುಕತೆಗಳು ಸೌಹಾರ್ದಯುತವಾಗಿ ನಡೆದು, ಕೃಷಿ ಉತ್ಪನ್ನಗಳಿಗೆ ಸೂಕ್ತ ದರ ನೀಡಿ ನಮ್ಮ ಜಮೀನು ರಕ್ಷಿಸುವುದಷ್ಟೇ ಬೇಕಿದೆ" ಎಂದರು.

"2014ರಲ್ಲಿ ಸಾಮಾನ್ಯ ಜನರನ್ನು ಮೋಡಿ ಮಾಡಿ ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದರು. ದೇಶದ ಬಿಗಡಾಯಿಸುತ್ತಿರುವ ಸ್ಥಿತಿಯನ್ನು ಸರಿಪಡಿಸಲು ತಮಗೆ ಇಷ್ಟು ಕಾಲ ಬೇಕಾಯಿತು ಎಂದು ಅಧಿಕಾರದ ಐದು ವರ್ಷ ಪೂರೈಸಿ ಹೇಳಿದರು. ಮತ್ತೆ 2019ರಲ್ಲಿ ಅಧಿಕಾರದ ಗದ್ದುಗೆಯೇರಿದರು, ಆದರೆ ಏನಾದರೂ ಸುಧಾರಣೆಯಾಗಿದೆಯೇ? ಅಧಿಕಾರಕ್ಕೆ ಬಂದ ನಂತರ ರೈತರಿಗೆ ಸುಂದರ ಕನಸುಗಳನ್ನು ತೋರಿಸಿದರು. ಕಬ್ಬಿನ ಬೆಲೆಯನ್ನು ಕ್ವಿಂಟಾಲ್‍ಗೆ ರೂ. 450ಕ್ಕೆ ನಿಗದಿಪಡಿಸುವುದಾಗಿ ಅವರು 2014ರಲ್ಲಿ ಭರವಸೆ ನೀಡಿದ್ದರು ಆದರೆ ಏಳು ವರ್ಷಗಳಾದರೂ ಆ ಭರವಸೆ ಈಡೇರಿಲ್ಲ" ಎಂದು ಟಿಕಾಯತ್ ಹೇಳಿದರು.

"ಈ ಸರಕಾರಕ್ಕೆ ಅಪಾಯಕಾರಿ ಉದ್ದೇಶವಿದೆ, ಸಣ್ಣ ವರ್ತಕರನ್ನು  ಕೈಬಿಟ್ಟು ಎಲ್ಲಾ ವಸ್ತುಗಳೂ ದೊಡ್ಡ ಮಾಲ್‍ಗಳಲ್ಲಿ ಮಾತ್ರ ಹೆಚ್ಚಿನ ಬೆಲೆಗೆ ಲಭ್ಯವಾಗುವಂತೆ ಮಾಡುವ  ಯೋಜನೆ ಈ ಸರಕಾರಕ್ಕಿದೆ" ಎಂದು ಅವರು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News