ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಸ್ಥಿತಿಗತಿ ಅಧ್ಯಯನ ಆರಂಭ: ಕೆ.ಜಯಪ್ರಕಾಶ್ ಹೆಗ್ಡೆ

Update: 2021-02-27 16:41 GMT

ಚಿಕ್ಕಮಗಳೂರು, ಫೆ.27: ರಾಜ್ಯದ ಹಿಂದುಳಿದ ವರ್ಗಗಳ ಶೈಕ್ಷಣಿಕ, ಸಾಮಾಜಿಕ ಸ್ಥಾನಮಾನ ಕುರಿತಂತೆ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸುವ ಪ್ರಕ್ರಿಯೆಯನ್ನು ಆರಂಭಿಸಲಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ ತಿಳಿಸಿದ್ದಾರೆ.

ಖಾಸಗಿ ಕಾರ್ಯಕ್ರಮದ ನಿಮಿತ್ತ ನಗರಕ್ಕೆ ಆಗಮಿಸಿದ್ದ ವೇಳೆ ಪ್ರವಾಸಿ ಮಂದಿರಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದಿನ ಆಯೋಗ ಅಧ್ಯಯನ ನಡೆಸಿ ಸಂಗ್ರಹಿಸಿದ ವರದಿ ಕುರಿತಂತೆ ಹೈಕೋರ್ಟ್ ನಲ್ಲಿ ಪ್ರಕರಣವಿದೆ. ತಮ್ಮ ನೇತೃತ್ವದ ಆಯೋಗ, ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸಾಮಾಜಿಕ ಸ್ಥಾನಮಾನದ ಬಗ್ಗೆ ಸಮಗ್ರವಾಗಿ ಅಧ್ಯಯನ ನಡೆಸುವ, ಅಂಕಿ ಅಂಶಗಳನ್ನು ಸಂಗ್ರಹಿಸುವ ಕೆಲಸವನ್ನು ಆರಂಭಿಸಿದೆ. ಈ ನಿಟ್ಟಿನಲ್ಲಿ ಈಗಾಗಲೇ ಸಾರ್ವಜನಿಕ ಅಭಿಪ್ರಾಯ ಸಂಗ್ರಹಕ್ಕಾಗಿ ಸಭೆ ಕರೆದು ಚರ್ಚೆ ನಡೆಸಲಾಗುತ್ತಿದ್ದು, ಹಿಂದುಳಿದ ವರ್ಗಗಳ ಸ್ಥಿತಿಗತಿಯನ್ನು ಕರಾರುವಕ್ಕಾಗಿ ಅಧ್ಯಯನ ನಡೆಸಿ ಸರಕಾರಕ್ಕೆ ವರದಿ ಸಲ್ಲಿಸಲಾಗುವುದು. ವರದಿ ಆಧರಿಸಿ ರಾಜ್ಯ ಸರಕಾರ ಸೂಕ್ತ ನಿರ್ಣಯ ಕೈಗೊಳ್ಳಲಿದೆ ಎಂದರು.

ರಾಜ್ಯದಲ್ಲಿ ಹಿಂದುಳಿದ ವರ್ಗಗಳು ಸೇರಿದಂತೆ ಹಲವು ಸಮಾಜಗಳ ಮೀಸಲಾತಿ ಕುರಿತ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ಚಳವಳಿ ಮೂಲಕ ಸರಕಾರಕ್ಕೆ ಒತ್ತಡ ಹೇರುತ್ತಿರುವ ಬಗೆಗಿನ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದ ಜಯಪ್ರಕಾಶ್ ಹೆಗ್ಡೆ, ಇಂತಹ ಚಳವಳಿ, ಬೇಡಿಕೆಗಳ ಬಗ್ಗೆ ನಿರ್ಧಾರ, ತೀರ್ಮಾನ ಕೈಗೊಳ್ಳುವ ಅಧಿಕಾರ ಆಯೋಗಕ್ಕಿಲ್ಲ. ಆಯೋಗದ ಅಧ್ಯಕ್ಷರಾಗಿ ಸಮುದಾಯಗಳ ಬೇಡಿಕೆ ಬಗ್ಗೆ ಪ್ರತಿಕ್ರಿಯಿಸುವುದು ಸೂಕ್ತವಲ್ಲ ಎಂದರು.

ರಾಜ್ಯದಲ್ಲಿ ಅನೇಕ ಸಣ್ಣಪುಟ್ಟ ಹಿಂದುಳಿದ ಜಾತಿಗಳಿವೆ. ಅವರಿಗೆ ತಮ್ಮ ಹಕ್ಕುಗಳು ಹಾಗೂ ಮೀಸಲಾತಿಗಳ ಬಗ್ಗೆ ಮಾಹಿತಿ ಇಲ್ಲ. ಈ ಹಿನ್ನೆಲೆಯಲ್ಲಿ ಆಯೋಗ ಅವರಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಲಿದೆ ಎಂದ ಅವರು, ಒಂದೇ ಜಿಲ್ಲೆಯಲ್ಲಿ ಒಂದು ಸಮುದಾಯಕ್ಕೆ ಸೇರಿದವರು ಕೆಲವು ತಾಲೂಕುಗಳಲ್ಲಿ ಪರಿಶಿಷ್ಟ ಮತ್ತೆ ಕೆಲವೆಡೆ ಹಿಂದುಳಿದ ವರ್ಗ ಎಂದು ಸೌಲಭ್ಯ ಪಡೆಯುತ್ತಿವೆ. ಕೇಂದ್ರ ಮತ್ತು ರಾಜ್ಯ ಸರಕಾರಗಳ ಪಟ್ಟಿಯಲ್ಲಿರುವ ದೋಷದಿಂದ ಅಂತಹ ಲೋಪ ಉಂಟಾಗಿದೆ. ಈ ಬಗ್ಗೆ ಮೀಸಲಾತಿ ಪಟ್ಟಿಯ ಪೋರ್ಟಲ್‍ನಲ್ಲಿ ತಿದ್ದುಪಡಿ ಆಗಬೇಕು. ಆ ನಿಟ್ಟಿನಲ್ಲಿ ಕ್ರಮವಹಿಸಲಾಗುವುದು ಎಂದರು.

ಕೇಂದ್ರ ಹಾಗೂ ರಾಜ್ಯದ ಮೀಸಲಾತಿ ಪಟ್ಟಿಯಲ್ಲಿ ಕೆಲವು ಗೊಂದಲಗಳಿವೆ. ಈ ಗೊಂದಲದಿಂದಾಗಿ ಕೆಲ ಸಮುದಾಯಗಳ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಮೀಸಲಾತಿಯಲ್ಲಿ ಅನ್ಯಾಯವಾಗುತ್ತಿದೆ. ಆಯಾಯ ಜಾತಿಯ ಮೀಸಲಾತಿ ಕುರಿತಂತೆ ಅಧ್ಯಯನ ನಡೆಸಿ ಸರಕಾರಗಳ ಗಮನಸೆಳೆಯಲಾಗುವುದು ಎಂದು ಇದೇ ವೇಳೆ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News