ಸಮಸ್ತ ವೀರಶೈವ- ಲಿಂಗಾಯತ ಸಮುದಾಯಕ್ಕೆ ಮೀಸಲಾತಿ ಸಿಗಬೇಕು: ಮುರುಗೇಶ್ ನಿರಾಣಿ

Update: 2021-02-27 17:17 GMT

ಕೊಪ್ಪಳ, ಫೆ.27: ವೀರಶೈವ-ಲಿಂಗಾಯಿತ ಸಮುದಾಯದಲ್ಲಿ ಅನೇಕ ಉಪಸಮುದಾಯಗಳಿದ್ದು, ಎಲ್ಲರಿಗೂ ಸಾಮಾಜಿಕ ನ್ಯಾಯ ಸಿಗಬೇಕೆಂದರೆ ಸಮಸ್ತ ಸಮುದಾಯಕ್ಕೆ ಮೀಸಲಾತಿ ನೀಡಬೇಕೆಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಅಭಿಪ್ರಾಯಪಟ್ಟಿದ್ದಾರೆ.

ಶನಿವಾರ ನಗರದಲ್ಲಿರುವ ಬಿಜೆಪಿ ಕಚೇರಿಗೆ ಭೇಟಿ ನೀಡಿ ಕಾರ್ಯಕರ್ತರು ಹಾಗೂ ಸಾರ್ವಜನಿಕರನ್ನು ಭೇಟಿಯಾಗಿ ಅವರ ಸಮಸ್ಯೆಗಳನ್ನು ಆಲಿಸಿದ ಬಳಿಕ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ವೀರಶೈವ ಲಿಂಗಾಯತರಲ್ಲಿ ಕುಂಬಾರರು, ಹಡಪದರು ಸೇರಿ ಇನ್ನೂ ಅನೇಕ ಸಮುದಾಯಗಳು ಇವೆ. ಆ ಸಣ್ಣ ಸಮುದಾಯಗಳು ಹೋರಾಟ ಮಾಡಿ ಶಕ್ತಿ ಪ್ರದರ್ಶನ ಮಾಡುವಷ್ಟು ಬಲ ಹೊಂದಿಲ್ಲ. ಈ ಸಮುದಾಯವರು ಶಾಸಕರು ಅಥವಾ ಸಂಸದರಾಗಿಲ್ಲ. ಹೀಗಾಗಿ ಅಂತಹ ಸಮುದಾಯಕ್ಕೂ ಸೌಲಭ್ಯ ಸಿಗಬೇಕು. ಹೀಗಾಗಿ ಸಮಸ್ತ ವೀರಶೈವ-ಲಿಂಗಾಯತ ಸಮುದಾಯಕ್ಕೆ 2ಎ ಮೀಸಲಾತಿ ಸಿಗಬೇಕು ಎಂಬುದು ನನ್ನ ಅಭಿಪ್ರಾಯ ಎಂದು ಅವರು ಹೇಳಿದರು.

ಲಿಂಗಾಯತ ಪಂಚಮಸಾಲಿ ಸಮುದಾಯವನ್ನು 3ಬಿಯಿಂದ 2ಎಗೆ ಸೇರ್ಪಡೆ ಮಾಡಬೇಕೆಂಬ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಜತೆಗೆ ವೀರಶೈವ-ಲಿಂಗಾಯತ ಸಮುದಾಯದಲ್ಲಿ ಸಣ್ಣ ಸಣ್ಣ ಉಪಸಮುದಾಯಗಳು ಸೌಲಭ್ಯದಿಂದ ವಂಚಿತವಾಗಿವೆ. ಒಟ್ಟಾರೆ ಸಮಸ್ತ ವೀರಶೈವ-ಲಿಂಗಾಯತ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡಬೇಕೆಂಬುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಸೂಕ್ತ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಮುರುಗೇಶ್ ನಿರಾಣಿ ವಿಶ್ವಾಸ ವ್ಯಕ್ತಪಡಿಸಿದರು.

ಮೀಸಲಾತಿಗಾಗಿ ವೀರಶೈವ ಲಿಂಗಾಯತರು ಮಾತ್ರ ಹೋರಾಟ ಮಾಡುತ್ತಿಲ್ಲ. ಹಾಲುಮತ ಸಮಾಜದವರು, ವಾಲ್ಮೀಕಿ ಸಮುದಾಯದವರು ಹೋರಾಟ ಮಾಡುತ್ತಿದ್ದಾರೆ. ಅದನ್ನು ಸಮಾಜ ಕಲ್ಯಾಣ ಇಲಾಖೆಯಿಂದ ಪರಿಶೀಲನೆ ಮಾಡಬೇಕು. ಸಚಿವ ಸಂಪುಟ ಸಭೆಯಲ್ಲಿ ಸಾಧಕ-ಬಾಧಕಗಳನ್ನು ನಿರ್ಧಾರ ಮಾಡಲಾಗುವುದು ಎಂದು ಅವರು ಸ್ಪಷ್ಟನೆ ನೀಡಿದರು.

ಈಗಾಗಲೆ ಮುಖ್ಯಮಂತ್ರಿ ಯಡಿಯೂರಪ್ಪ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆ ಮಾಡುವ ಕುರಿತು ಹಿಂದುಳಿದ ವರ್ಗಗಳ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆಯೋಗವು ಸ್ವಾಯತ್ತ ಸಂಸ್ಥೆಯಾಗಿದ್ದು, ಸಾಕಷ್ಟು ಅಧ್ಯಯನ ನಡೆಸಿ ವರದಿ ನೀಡುತ್ತದೆ. ನಂತರವೇ ಸರಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದು ಮುರುಗೇಶ್ ನಿರಾಣಿ ಹೇಳಿದರು.

ಕಾಶಪ್ಪನವರ್ ಗೆ ತಿರುಗೇಟು: ಪಂಚಮಸಾಲಿ ಹೋರಾಟದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಮಾಜಿ ಶಾಸಕ ವಿಜಯ ಕಾಶಪ್ಪನವರಷ್ಟು ದೊಡ್ಡ ನಾಯಕ ನಾನಲ್ಲ. ಅವರು ರಾಷ್ಟ್ರೀಯ ಅಧ್ಯಕ್ಷರು. ಅವರೇ ನಾಯಕತ್ವವನ್ನು ತೆಗೆದುಕೊಂಡು ಹೋರಾಟ ಮಾಡಲಿ. ತಮಗೆ ತಿಳಿದಂತೆ ಮಾಡಲಿ ಎಂದು ತಿರುಗೇಟು ನೀಡಿದ ಅವರು, ನಾವು ಸರಕಾರದ ಮಟ್ಟದಲ್ಲಿ ಏನೇನು ಮಾಡಬೇಕೊ ಅದನ್ನು ಮಾಡುತ್ತೇವೆ. 2ಎಗೆ ಸೇರ್ಪಡೆ ಮಾಡಲು ನಾವು ಹೋರಾಟ ಮಾಡುತ್ತಿದ್ದೇವೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಯಾಕೆ ಮೌನವಾಗಿದ್ದಾರೆ ಎಂಬುದು ನನಗೆ ಗೊತ್ತಿಲ್ಲ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News