ರಾಜ ಕೆಟ್ಟಿದ್ದಾನೆ ಎಂದರೆ ಪ್ರಜೆಗಳು ಚಾಟಿ ತೆಗೆದುಕೊಳ್ಳಬೇಕು: ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ

Update: 2021-02-27 18:31 GMT

ಮೈಸೂರು,ಫೆ.27: ಭಾರತದ ರಾಜಕಾರಣ ಧರ್ಮ ಮತ್ತು ಜಾತಿ ಆಧಾರದಲ್ಲಿ ನಡೆಯುತ್ತಿದ್ದು, ರಾಜ ಕೆಟ್ಟಿದ್ದಾನೆ ಎಂದರೆ ಪ್ರಜೆಗಳು ಚಾಟಿ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣೆ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ವಾಗ್ದಾಳಿ ನಡೆಸಿದರು.

ಮೈಸೂರು ವಿಶ್ವವಿದ್ಯಾನಿಲದ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಮಾಜಿ ಸಚಿವ ಎನ್.ರಾಚಯ್ಯ ಅಧ್ಯಯನ ಪೀಠ ಮಾನಸ ಗಂಗೋತ್ರಿಯ ಬಿ.ಎಂ.ಶ್ರೀ ಸಭಾಂಗಣದಲ್ಲಿ ಶನಿವಾರ ಆಯೋಜಿಸಿದ್ದ 'ದಲಿತ ಚಳವಳಿ ಮತ್ತು ರೈತ ಚಳವಳಿ ಒಂದು ಮುಖಾಮುಖಿ' ಕುರಿತ ಒಂದು ದಿನದ ರಾಜ್ಯಮಟ್ಟದ ವಿಚಾರ ಸಂಕಿರಣ ಮತ್ತು ಎನ್.ರಾಚಯ್ಯ ಶತಮಾನೋತ್ಸವ ಸ್ಮರಣ ಸಂಚಿಕೆ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ದೇಶದಲ್ಲಿ ಕೋಮುವಾದಿಗಳ ಆಡಳಿತ ನಡೆಯುತ್ತಿದೆ. ದೇಶದ ಮೂಲ ನಿವಾಸಿಗಳಿಗೆ ಧ್ವನಿ ಇಲ್ಲದಂತಾಗಿದೆ. ಧರ್ಮ ಮತ್ತು ಜಾತಿ ಆಧಾರದಲ್ಲಿ ರಾಜಕಾರಣ ಮಾಡಲಾಗುತ್ತಿದೆ. ಪ್ರಜೆಗಳು ಚಾಟಿ ಎತ್ತುಕೊಳ್ಳದಿದ್ದರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಯುವಕರು ಜಾಗೃತರಾಗದಿದ್ದರೆ ದೇಶ ಅಪಾಯದ ಸ್ಥಿತಿಗೆ ಹೋಗಲಿದೆ ಎಂದು ಹೇಳಿದರು.

ಪ್ರಜಾಪ್ರಭುತ್ವದ ರಾಷ್ಟ್ರದಲ್ಲಿ ಸರ್ವಾಧಿಕಾರಿ ಧೋರಣೆ ಆಡಳಿತ ಬರುತ್ತಿದೆ. ಕೊರೋನ ಬಂದು ದುಡ್ಡು ಬೇಡ, ಚರ್ಚು, ದೇವಸ್ಥಾನ ಏನು ಬೇಡ ಎಂತ ಇದ್ದರೂ ಇನ್ನೂ ನಮಗೆ ಬುದ್ಧಿ ಬಂದಿಲ್ಲ, ರಾಜಕೀಯ ಪಕ್ಷಗಳಿಗೂ ಬುದ್ಧಿ ಬಂದಿಲ್ಲ ಎಂದರು.

ಇಂದು ಯಾರಾದರೂ ಸರ್ಕಾರದ ವಿರುದ್ಧ ಮಾತನಾಡಿದರೆ, ಸರ್ಕಾರವನ್ನು ಪ್ರಶ್ನೆ ಮಾಡಿದರೆ ಅವರ ಮೇಲೆ ಪ್ರಕರಣ ದಾಖಲಿಸುತ್ತಾರೆ. ಇದೇ ಇವತ್ತಿನ ರಾಜಕೀಯ ಶಸ್ತ್ರಾಸ್ತ್ರವಾಗಿದೆ. ರಾಜಕೀಯ ಅಧಿಕಾರವು ಎಲ್ಲಾ ಸಮಸ್ಯೆಗಳ ಬಗೆಹರಿಸುವ ಕೀಲಿ ಕೈ ಎನ್ನಲಾಗಿದೆ. ಆದರೆ, ಇಂದು ಧರ್ಮ, ಜಾತಿಯೇ ಪ್ರಮುಖವಾಗಿದೆ. ಬೇವಿನ ಮರವನ್ನು ಬಿತ್ತಿ ಮಾವಿನ ಹಣ್ಣು ಕೇಳಿದರೆ ಬರಲು ಸಾಧ್ಯವಿಲ್ಲ. ಇದೇ ಪ್ರಸ್ತುತ ರಾಜಕೀಯ ಪರಿಸ್ಥಿತಿ ಎಂದು ಬೇಸರ ವ್ಯಕ್ತಪಡಿಸಿದರು.

ಪ್ರಜಾಪ್ರಭುತ್ವದ ಮೌಲ್ಯಗಳು ಕುಸಿಯುತ್ತಿದ್ದು, ಸರ್ವಾಧಿಕಾರತ್ವ ಜಾರಿಗೆ ಬರುವ ಸ್ಥಿತಿ ಎದುರಾಗಿದೆ. ಅಹಿಂದ ಮಾತನಾಡಬೇಡಿ ಎನ್ನುವವರು ಯಾವುದೋ ಧರ್ಮದ ಹೆಸರಿನಲ್ಲಿ ಉಳಿದವರ ಮೇಲೆ ಆಡಳಿತ ನಡೆಸುತ್ತಿದ್ದಾರೆ. ಪ್ರಜಾಪ್ರಭುತ್ವದ ಭವಿಷ್ಯ ಏನು ಎಂದು ಯೋಚಿಸಬೇಕಿದೆ. ಪ್ರಜಾಪ್ರಭುತ್ವದ ಆಧಾರ ಸ್ತಂಭಗಳು ದುರ್ಬಲವಾದರೆ, ಸರ್ವಾಧಿಕಾರಿ ಆಡಳಿತಕ್ಕೆ ಒಳಗಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.

ಎನ್.ರಾಚಯ್ಯ ಅವರು ನೊಂದವರ, ಬಡವರ ಧ್ವನಿಯಾಗಿದ್ದರು. ಹಿಂದುಳಿದವರಿಗೆ ಧೈರ್ಯ ತುಂಬುವ ಕಾರ್ಯಮಾಡಿದರು. ಯಾರ ಮುಲಾಜಿಗೂ ಒಳಗಾಗುತ್ತಿರಲಿಲ್ಲ. ಸಿಎಂ ವಿರುದ್ಧವೇ ಅವಿಶ್ವಾಸ ಮಂಡಿಸಿದಂತಹವರು ಎಂದು ಸ್ಮರಿಸಿದರು. ಚರಿತ್ರೆಯಲ್ಲಿ ಶಾಶ್ವತರಾದ ಎನ್.ರಾಚಯ್ಯರಂತಹ ರಾಜಕೀಯ ನಾಯಕರ ಕುರಿತಂತೆ ಯುವ ಸಮುದಾಯ ಅರಿಯಬೇಕು ಎಂದು ಹೇಳಿದರು.

ಕೃತಿಯನ್ನು ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್ ಬಿಡುಗಡೆಗೊಳಿಸಿದರು. ಕೃತಿ ಕುರಿತು ನಿವೃತ್ತ ರಾಜ್ಯ ಮಾಹಿತಿ ಆಯುಕ್ತ ಎಲ್.ಕೃಷ್ಣಮೂರ್ತಿ ಮಾತನಾಡಿದರು. ಮೈಸೂರು ವಿವಿ ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಅಧ್ಯಕ್ಷ ಪ್ರೊ.ಮುಜಾಫರ್ ಅಸ್ಸಾದಿ, ವಿಧಾನಪರಿಷತ್ ಸದಸ್ಯ ಆರ್.ಧರ್ಮಸೇನ, ಶ್ರೀ ಎನ್.ರಾಚಯ್ಯ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಪ್ರೊ.ಎಚ್.ಬಿ.ಮಲ್ಲಿಕಾರ್ಜುನಸ್ವಾಮಿ, ರಾಜ್ಯಶಾಸ್ತ್ರ ಅಧ್ಯಯನ ವಿಭಾಗದ ಪ್ರೊ.ಜಿ.ಟಿ.ರಾಮಚಂದ್ರಪ್ಪ, ಪ್ರೊ.ಕೃಷ್ಣ ಹೊಂಬಳ್ ಇದ್ದರು. 

ಭಾರತದಲ್ಲಿ ಮತ್ತು ಕರ್ನಾಟಕದಲ್ಲಿ ದಲಿತ ಚಳುವಳಿ ಮತ್ತು ರೈತ ಚಳುವಳಿಗಳ ಬಗ್ಗೆ ಮಾತನಾಡುವ ಕೆಲವೇ ಕೆಲವು ರಾಜಕಾರಣಿಗಳ ಬಾಯಿಯನ್ನು ಮುಚ್ಚಿಸುವ ಕೆಲಸವನ್ನು ಪಕ್ಷದ ಒಳಗೂ ಮತ್ತು ಹೊರಗು ಮಾಡಲಾಗುತ್ತಿದೆ
-ಡಾ.ಎಚ್.ಸಿ.ಮಹದೇವಪ್ಪ, ಮಾಜಿ ಸಚಿವ

ನಮ್ಮ ದೇಶದಲ್ಲಿ ದಲಿತರು ಅಂಬೇಡ್ಕರ್ ಒಪ್ಪಿಕೊಂಡರೂ ರೈತರು ಅಂಬೇಡ್ಕರ್ ಅವರನ್ನು ಒಪ್ಪಿಕೊಂಡಿಲ್ಲ. ಹೀಗಾಗಿ ಎಂದೆಂದಿಗೂ ರೈತರು ಹಾಗೂ ದಲಿತರೂ ಮುಖಾಮುಖಿ ಆಗುತ್ತಲಿವೆ. ಮುಖಾಮುಖಿ ಆಗುವ ಬದಲು ಅವರೆರಡರ ನಡುವೆ ಹೊಂದಾಣಿಕೆಯಾಗಿ ಅನುಸಂಧಾನ ಆಗಬೇಕಾದ ಅವಶ್ಯಕತೆಯಿದೆ. ಹಾಗಾದಾಗ ಮಾತ್ರವೇ ಹೋರಾಟ ಪ್ರಬಲಗೊಳ್ಳಲಿದೆ.  
 -ಪ್ರೊ.ಮುಜಾಫರ್ ಅಸ್ಸಾದಿ, ಅಧ್ಯಕ್ಷರು, ರಾಜ್ಯಶಾಸ್ತ್ರ ಅಧ್ಯಯನ ವಿಭಾಗ, ಮೈಸೂರು ವಿವಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News