ಸಿಎಂ ಭೇಟಿಗೂ ಮುನ್ನ ಮುನಿಸಿಕೊಂಡ ಕುಮಾರ ಬಂಗಾರಪ್ಪ: ಮನವೊಲಿಸಿದ ಸಂಸದ‌ ರಾಘವೇಂದ್ರ

Update: 2021-02-28 12:22 GMT

ಶಿವಮೊಗ್ಗ, ಫೆ.28: ಮೂಗುರು ಏತಾ ನೀರಾವರಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕ ಕುಮಾರ ಬಂಗಾರಪ್ಪನವರನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ ಎನ್ನಲಾಗಿದ್ದು, ಈ ಸಂಬಂಧ ಸಿಎಂ ಕಾರ್ಯಕ್ರಮದಲ್ಲಿ ಭಾಗವಹಿಸದೆ ಮುನಿಸಿಕೊಂಡಿದ್ದ ಕುಮಾರ ಬಂಗಾರಪ್ಪರನ್ನು ಸಂಸದ‌ ರಾಘವೇಂದ್ರ ಅವರು ಮನವೊಲಿಸಿದ್ದಾರೆ.

ಸೊರಬ ತಾಲೂಕಿನ ಮೂಗುರು ಏತ ನೀರಾವರಿ ಯೋಜನೆ ಲೋಕಾರ್ಪಣೆ ಕಾರ್ಯಕ್ರಮದ‌ ಅಂಗವಾಗಿ ಬಿಜೆಪಿಯಿಂದ ಅಳವಡಿಸಿದ್ದ ಫ್ಲೆಕ್ಸ್, ವಿಡಿಯೋ ಗಳಲ್ಲಿ ಶಾಸಕ ಕುಮಾರ ಬಂಗಾರಪ್ಪನವರನ್ನು ಕಡೆಗಣಿಸಲಾಗಿದೆ ಎನ್ನಲಾಗಿದ್ದು, ಇದು‌ ಕುಮಾರ ಬಂಗಾರಪ್ಪನವರ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಇದರಿಂದ ಮುನಿಸಿಕೊಂಡ ಕುಮಾರ ಅವರು ಮೂಗುರುನಿಂದ ಸೊರಬದ ತಮ್ಮ ನಿವಾಸಕ್ಕೆ ಆಗಮಿಸಿದ್ದರು.

ಏತ ನೀರಾವರಿ ಯೋಜನೆಯ ಅನುಷ್ಠಾನದ ಬಗ್ಗೆ ಸಿದ್ಧಪಡಿಸಲಾದ ಸ್ಟೇಜ್ ವಿಡಿಯೋ ಡಾಕ್ಯುಮೆಂಟರಿಯಲ್ಲಿ ಕುಮಾರ ಬಂಗಾರಪ್ಪ ಚಿತ್ರವೇ ಇರದಂತೆ ನೋಡಿಕೊಳ್ಳಲಾಗಿದೆ ಎಂಬ ಆರೋಪ  ಕೇಳಿಬಂದಿತ್ತು. ಸ್ವತಃ ಕುಮಾರ ಬಂಗಾರಪ್ಪ ನವರೇ ನೀರಾವರಿ ನಿಗಮದ ಅಧಿಕಾರಿಗಳಿಗೆ ಕೇಳಿದರೆ ಸಮರ್ಪಕವಾದ ಉತ್ತರ ಸಿಗಲಿಲ್ಲ ಎನ್ನಲಾಗಿದೆ. ಇದರಿಂದ ಅಸಮಾಧಾನಗೊಂಡ ಕುಮಾರ ಅವರು ಕಾರ್ಯಕ್ರಮ ನೀವೇ ಮಾಡಿಕೊಳ್ಳಿ ಎಂದು ಮುನಿಸಿಕೊಂಡಿದ್ದಾರೆ. ನೀರಾವರಿ ಇಲಾಖೆ ಅಧಿಕಾರಿಗಳ ಕ್ರಮವನ್ನು ಸಾಮಾಜಿಕ ಜಾಲತಾಣದಲ್ಲಿ ಕುಮಾರ ಅಭಿಮಾನಿಗಳು ತೀವ್ರವಾಗಿ ಖಂಡಿಸಿದ್ದಾರೆ. ಜೊತೆಗೆ ಶಾಸಕರನ್ನು ಕಡೆಗಣಿಸಿರುವ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಂಸದರಿಂದ ಮನವೊಲಿಕೆ: ಇನ್ನು ಈ ವಿಚಾರ ತಿಳಿಯುತ್ತಲೇ ಸಂಸದ ಬಿ.ವೈ ರಾಘವೇಂದ್ರ, ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿ ಅಧ್ಯಕ್ಷ ಗುರುಮೂರ್ತಿ ಹಾಗೂ ಜಿಲ್ಲಾ ಬಿಜೆಪಿ ಅಧ್ಯಕ್ಷ ಟಿ.ಡಿ ಮೇಘರಾಜ್ ಕುಮಾರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಒಂದು ತಾಸಿಗೂ ಹೆಚ್ಚು ಚರ್ಚೆ ನಡೆಸಿದ ಮುಖಂಡರು ಶಾಸಕರ ಮನವೊಲಿಸುವಲ್ಲಿ ಸಫಲರಾದರು ಎನ್ನಲಾಗಿದೆ.

ಮೂಲ ಬಿಜೆಪಿ- ಕುಮಾರ ಬಣ ?: ಸೊರಬದಲ್ಲಿ ಮೂಲ ಬಿಜೆಪಿ ಹಾಗೂ ಶಾಸಕ ಕುಮಾರ ಬಣದ ನಡುವೆ ವೈಮನಸ್ಸು ಜೋರಾಗಿದೆ ಎಂದು ಹೇಳಲಾಗುತ್ತಿದ್ದು, ಬಿಜೆಪಿ ಮಂಡಲ ಅಧ್ಯಕ್ಷರ ನೇಮಕದಲ್ಲಿ ಜಿಲ್ಲಾ ಹಾಗೂ ಸ್ಥಳೀಯ ಮುಖಂಡರು ಕುಮಾರ ಬಂಗಾರಪ್ಪ ಅವರಿಗೆ ವಿರುದ್ಧವಾಗಿ ನಿರ್ಣಯ ಕೈಗೊಂಡಿದ್ದರಿಂದ ಆ ಸಂದರ್ಭದಲ್ಲಿ ಭಿನ್ನಮತ ಉಂಟಾಗಿತ್ತು ಎನ್ನಲಾಗಿದೆ.

ಪಕ್ಷದ ಕೆಲವು ನಾಯಕರ ಕುಮ್ಮಕ್ಕಿನಿಂದ ಸೊರಬದ ಮೂಲ ಬಿಜೆಪಿಯ ಕೆಲವರು ಶಾಸಕರ ನಿರ್ಧಾರಗಳ ವಿರುದ್ಧವಾಗಿದ್ದಾರೆ. ಕ್ಷೇತ್ರದಲ್ಲಿ ಪಕ್ಷದ ಗೆಲುವಿಗೆ ನಾವು ಬೇಕು, ಆದರೆ ಅಧಿಕಾರ ನಡೆಸಲು ಮೂಲ ಬಿಜೆಪಿ ಎಂಬ ವಿಷಯ ಮುನ್ನಲೆಗೆ ತರುತ್ತಾರೆ ಎಂಬುವುದ ಶಾಸಕರ ಬಣದವರ ಆರೋಪವಾಗಿದೆ. ಇನ್ನು ಶಾಸಕರು ತಮ್ಮ‌ ಬೆಂಬಲಿಗರಿಗೆ ಮಾತ್ರ ಮಣೆ ಹಾಕುವ ಮೂಲಕ ನಿಷ್ಟಾವಂತ ಕಾರ್ಯಕರ್ತರನ್ನು ಕಡೆಗಣೆಸುತ್ತಾರೆ ಎಂಬುವುದು‌ ಮೂಲ ಬಿಜೆಪಿಯವರ ಆರೋಪ.

ಇದರ ಮುಂದುವರಿದ ಭಾಗವಾಗಿ ಮೂಗುರು ಏತ ನೀರಾವರಿ ಯೋಜನೆಯಲ್ಲಿ ಶಾಸಕರನ್ನು‌ ಕಡೆಗಣಿಸಿದ್ದಾರೆ ಎನ್ನಲಾಗಿದೆ. ಈ ಕಾರಣದಿಂದ ಶಾಸಕ‌ ಕುಮಾರ ಬಂಗಾರಪ್ಪ ಬೇಸರ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿಗಳು ಬರುವ ಈ ಕಾರ್ಯಕ್ರಮದಲ್ಲಿ ಭಿನ್ನಮತ ಕಾಣಿಸಿಕೊಳ್ಳಬಾರದು ಎಂಬ ಕಾರಣದಿಂದ ಸಂಸದ ರಾಘವೇಂದ್ರ, ಕುಮಾರ ಬಂಗಾರಪ್ಪ ನವರ ಮನವೊಲಿಸಿ‌ ಕಾರ್ಯಕ್ರಮಕ್ಕೆ ಇಬ್ಬರು ಒಟ್ಟಿಗೆ ತೆರಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News