ಫೈರ್ ಇಂಜಿನ್ ಚಾಲಕನ ಸಮಯಪ್ರಜ್ಞೆಯಿಂದ ಆರೋಪಿಗಳ ಬಂಧನ ಸಾಧ್ಯವಾಗಿದೆ: ಎಸ್ಪಿ ಅಕ್ಷಯ್

Update: 2021-02-28 15:32 GMT

ಚಿಕ್ಕಮಗಳೂರು, ಫೆ.28: ನಗರದ ಎಐಟಿ ಸರ್ಕಲ್ ಬಳಿ ಶನಿವಾರ ಹಾಡಹಗಲೇ ನಡೆದ ದರೋಡೆ ಪ್ರಕರಣದ ಇಬ್ಬರು ಆರೋಪಿಗಳನ್ನು ಪೊಲೀಸರು ಕ್ಷಿಪ್ರ ಕಾರ್ಯಾಚರಣೆಯಲ್ಲಿ ಕೇವಲ ಎರಡು ಗಂಟೆಗಳ ಒಳಗೆ ಬಂಧಿಸಿದ್ದಾರೆ. ಆರೋಪಿಗಳು ಬೈಕ್‍ನಲ್ಲಿ ಪರಾರಿಯಾಗಿದ್ದರೆ ಬಂಧನ ಕಷ್ಟವಾಗುತ್ತಿತ್ತು. ಆದರೆ ಫೈರ್ ಇಂಜಿನ್ ಚಾಲಕನ ಸಮಯ ಪ್ರಜ್ಞೆ ಹಾಗೂ ಸ್ಥಳೀಯರ ಸಹಕಾರದಿಂದ ಪೊಲೀಸರು ಆರೋಪಿಗಳನ್ನು ಬಂಧಿಸಲು ಸಾಧ್ಯವಾಗಿದೆ ಎಂದು ಎಸ್ಪಿ ಅಕ್ಷಯ್ ಎಂ.ಎಚ್.ತಿಳಿಸಿದ್ದಾರೆ.

ರವಿವಾರ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶನಿವಾರ ಬೆಳಗ್ಗೆ 11ರ ಸಮಯದಲ್ಲಿ ಎಐಟಿ ವೃತ್ತದ ಬಳಿ ಇರುವ ಸಿಡಿಎ ಮಾಜಿ ಅಧ್ಯಕ್ಷ ಚಂದ್ರೇಗೌಡ ಅವರ ಮನೆಗೆ ಇಬ್ಬರು ಆರೋಪಿಗಳು ಹೆಲ್ಮೆಟ್ ಧರಿಸಿಕೊಂಡು ನುಗ್ಗಿದ್ದಾರೆ. ಮನೆಯಲ್ಲಿದ್ದ ಚಂದ್ರೇಗೌಡ ಪತ್ನಿ ಸರೋಜಮ್ಮ ಅವರಿಗೆ ಚಾಕು ತೋರಿಸಿ ಹೆದರಿಸಿದ್ದಾರೆ. ನಂತರ ಕೈಕಾಲು, ಬಾಯಿಗೆ ಬಟ್ಟೆಯಿಂದ ಕಟ್ಟಿ ಹಾಕಿ ಹಣ, ಚಿನ್ನಾಭರಣವನ್ನು ದೋಚಿದ್ದಾರೆ. ಇದೇ ವೇಳೆ ಸರೋಜಮ್ಮ ಅವರ ಮಗ ಶಿವಪ್ರಸಾದ್ ಮನೆಗೆ ಬಂದು ಕರೆ ಗಂಟೆ ಒತ್ತಿದರೂ ಬಾಗಿಲು ತೆರೆಯದಿದ್ದಾಗ ಅನುಮಾನ ಬಂದು ಮನೆಯ ಬಾತ್‍ರೂಮಿನ ಕಿಟಕಿಯಿಂದ ಇಣುಕಿ ನೋಡಿದಾಗ ತನ್ನ ತಾಯಿಯನ್ನು ಕಟ್ಟಿಹಾಕಿರುವುದು ಕಾಣಿಸಿದೆ. ಕೂಡಲೇ ಅವರು ಅಕ್ಕಪಕ್ಕದವರನ್ನು ಕೂಗಿ ಕರೆದಿದ್ದಾರೆ ಎಂದು ಎಸ್ಪಿ ವಿವರಿಸಿದರು.

ಸಮಯ ಪ್ರಜ್ಞೆ ಮೆರೆದ ಪೈರ್ ಇಂಜಿನ್ ಚಾಲಕ: ಈ ಸಂದರ್ಭ ಮನೆಯೊಳಗಿದ್ದ ಇಬ್ಬರು ಕಳ್ಳರು ಮನೆಯಿಂದ ಹೊರ ಬಂದು ತಮ್ಮ ಬೈಕ್ ಏರಿದ್ದಾರೆ. ಆರೋಪಿಗಳು ತಮ್ಮ ಕೈಗಳಲ್ಲಿ ಚಾಕು ಹಿಡಿದುಕೊಂಡಿದ್ದರಿಂದ ಮನೆಯ ಹೊರಗಿದ್ದ ಸಾರ್ವಜನಿಕರಿಗೆ ಕಳ್ಳರನ್ನು ಹಿಡಿಯಲು ಸಾಧ್ಯವಾಗಿಲ್ಲ. ಇದೇ ವೇಳೆ ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದ ಫೈರ್ ಇಂಜಿನ್ ಚಾಲಕ ಸಾರ್ವಜನಿಕರ ಕೂಗಾಟ ಆಲಿಸಿಕೊಂಡು ಕಳ್ಳರು ಬೈಕ್ ಏರಿ ಪರಾರಿಯಾಗಲು ಮುಂದಾಗುತ್ತಿದ್ದಂತೆ ತಾವು ಚಲಾಯಿಸುತ್ತಿದ್ದ ವಾಹನವನ್ನು ಬೈಕ್‍ಗೆ ಗುದ್ದಿದ್ದಾರೆ. ಪರಿಣಾಮ ಕಳ್ಳರಿಗೆ ಬೈಕ್ ಏರಲು ಸಾಧ್ಯವಾಗದೇ ಕಲ್ಯಾಣನಗರದ ಓಣಿಗಳಲ್ಲಿ ಓಡಿ ಅಡಗಿಕೊಂಡಿದ್ದಾರೆ. ಫೈರ್ ಇಂಜಿನ್ ಚಾಲಕ ಸಮಯಪ್ರಜ್ಞೆ ಮೆರೆದಿದ್ದಲ್ಲದೆ ಕೂಡಲೇ ಪೊಲೀಸರಿಗೆ ಕರೆ ಮಾಡಿದ್ದರಿಂದ ನಗರ ಠಾಣೆ ಪೊಲೀಸರು ಕಲ್ಯಾಣ ನಗರದಾದ್ಯಂತ ಆರೋಪಿಗಳಿಗೆ ಹುಡುಕಾಟ ನಡೆಸಿ ಕೇವಲ 2 ಗಂಟೆಯೊಳಗೆ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಗಳು ಚಂದ್ರೇಗೌಡ ಮನೆಯಿಂದ ಕಳವು ಮಾಡಿದ್ದ 75 ಗ್ರಾಂ ಚಿನ್ನಾಭರಣ, 50 ಸಾವಿರ ರೂ. ನಗದು ಹಾಗೂ ಬೈಕ್ ಅನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ವಿವರಿಸಿದರು.

ಸಂಬಂಧಿಯಿಂದಲೇ ಸ್ಕೆಚ್; ಯೂಟ್ಯೂಬ್ ನೋಡಿ ದರೋಡೆಗೆ ತಯಾರಿ !
ಬಂಧನಕ್ಕೊಳಗಾದ ಆರೋಪಿಗಳ ಪೈಕಿ ಸಚಿನ್(23) ಎಂಬಾತ ನಗರದ ಕೆಂಪನಹಳ್ಳಿ ನಿವಾಸಿಯಾಗಿದ್ದು, ಆಟೊ ರಿಕ್ಷಾ ಚಾಲಕನಾಗಿದ್ದಾನೆ. ಮೋಹನ್(28) ದಂಟರಮಕ್ಕಿ ನಿವಾಸಿಯಾಗಿದ್ದು, ಗಾರೆ ಕೆಲಸ ಮಾಡಿಕೊಂಡಿದ್ದ. ಆರ್ಥಿಕವಾಗಿ ಭಾರೀ ಸಮಸ್ಯೆಯಲ್ಲಿದ್ದ ಇಬ್ಬರು ಆರೋಪಿಗಳು ಹಣಕ್ಕಾಗಿ ಈ ಕೃತ್ಯ ಎಸಗಿರುವುದನ್ನು ವಿಚಾರಣೆ ವೇಳೆ ತಿಳಿಸಿದ್ದಾರೆಂದ ಅವರು, ಆರೋಪಿಗಳ ಪೈಕಿ ಸಚಿನ್ ಎಂಬಾತ ಚಂದ್ರೇಗೌಡ ಅವರ ಸಂಬಂಧಿಕನಾಗಿದ್ದು, ಚಂದ್ರೇಗೌಡ ಇತ್ತೀಚೆಗೆ ಆಸ್ತಿಯೊಂದನ್ನು ಮಾರಾಟ ಮಾಡಿದ್ದು, ಇದರಿಂದ ಭಾರೀ ಹಣ ಬಂದಿರಬಹುದೆಂದು ಭಾವಿಸಿ ತನ್ನ ಸ್ನೇಹಿತನೊಂದಿಗೆ ಸಂಬಂಧಿಯ ಮನೆಯಲ್ಲೇ ದರೋಡೆ ಮಾಡಲು ಸಂಚು ಮಾಡಿದ್ದ. ಇಬ್ಬರು ಆರೋಪಿಗಳ ಮೇಲೆ ಈ ಹಿಂದೆ ಯಾವುದೇ ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿಲ್ಲ. ದಿಢೀರ್ ಹಣ ಮಾಡುವ ಉದ್ದೇಶದಿಂದ ಕೃತ್ಯಕ್ಕೆ ಮುಂದಾಗಿದ್ದಾರೆ. ದರೋಡೆಗೂ ಮುನ್ನ ಆರೋಪಿಗಳಿಬ್ಬರು ಯೂಟ್ಯೂಬ್ ನಲ್ಲಿ ದರೋಡೆ ಮಾಡುವ ವಿಧಾನಗಳನ್ನು ನೋಡಿ 8 ದಿನಗಳಿಂದ ತಯಾರಿ ನಡೆಸಿದ್ದಾರೆ ಎಂದರು.

ಆರೋಪಿಗಳು ದರೋಡೆಗಾಗಿ ಹೊಸ ಶೂ, ಜಾಕೆಟ್‍ಗಳನ್ನೂ ಖರೀದಿ ಮಾಡಿದ್ದರು. ದರೋಡೆಯ ದಿನದಂದು ಆರೋಪಿಗಳು ಎಲ್ಲದಕ್ಕೂ ಸಿದ್ಧರಾಗಿ ಬಂದಿದ್ದರು. ತಮ್ಮ ಬ್ಯಾಗ್‍ನಲ್ಲಿ ಕಾರದ ಪುಡಿ, ರಾಡೊಂದನ್ನೂ ತಂದಿದ್ದರು. ಇಬ್ಬರು ಆರೋಪಿಗಳು ಬೈಕ್‍ನಲ್ಲಿ ಪರಾರಿಯಾಗಿದ್ದರೆ ಬಂಧನ ಕಷ್ಟವಾಗುತ್ತಿತ್ತು. ಆದರೆ ಫೈರ್ ಇಂಜಿನ್ ಚಾಲಕನ ಸಮಯ ಪ್ರಜ್ಞೆ, ಸ್ಥಳೀಯರ ಸಹಕಾರದಿಂದ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಬಂಧಿಸಲು ಸಾಧ್ಯವಾಗಿದೆ ಎಂದ ಅವರು, ಫೈರ್ ಇಂಜಿನ್ ಚಾಲಕ ಹಾಗೂ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಪೊಲೀಸ್ ತಂಡಗಳಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಲಾಗುತ್ತಿದೆ ಎಂದರು.

ಬೆಂಗಳೂರು ಮೂಲದ ಮೂವರು ವೃತ್ತಿಪರ ಕಳ್ಳರು ಅಂದರ್
ಜಿಲ್ಲೆಯಾದ್ಯಂತ ಅಪರಾಧ ಕೃತ್ಯಗಳನ್ನು ನಿಯಂತ್ರಿಸುವಲ್ಲಿ ಕಳ್ಳತನ ಕೃತ್ಯಗಳಲ್ಲಿ ತೊಡಗಿಕೊಂಡಿದ್ದ ಬೆಂಗಳೂರಿನ ಮೂವರ ತಂಡವೊಂದನ್ನು ಇತ್ತೀಚೆಗೆ ಪೊಲೀಸರು ಬಂಧಿಸಿದ್ದಾರೆ. ಕ್ರಿಮಿನಲ್ ಹಿನ್ನೆಲೆಯ ಇಮ್ರಾನ್, ಶಹನವಾಜ್, ಬಿಲಾಲ್ ಬಂಧಿತ ಆರೋಪಿಗಳಾಗಿದ್ದು, ಈ ಕಳ್ಳರ ಗುಂಪು ಬೆಂಗಳೂರಿನಲ್ಲಿ ಕಂಪೆನಿಯೊಂದರ ಹಳದಿ ಬೋರ್ಡ್ ನ ಕಾರೊಂದನ್ನು ಬಾಡಿಗೆ ಪಡೆದು ಇತ್ತೀಚೆಗೆ ಜಿಲ್ಲೆಗೆ ಬಂದು ಮಧ್ಯರಾತ್ರಿ ವೇಳೆ ಕಳ್ಳತನಕ್ಕೆ ಸಂಚು ಮಾಡುತ್ತಿದ್ದರು. ಈ ನಂಬರ್ ನ ಕಾರು ಪದೇ ಪದೇ ನಗರದಲ್ಲಿ ತಿರುಗಾಡುತ್ತಿರುವುದನ್ನು ಪೊಲೀಸರು ಗಮನಸಿದ್ದರು. ಈ ಕಳ್ಳರ ತಂಡ ಕಾಳಿದಾಸ ನಗರದಲ್ಲಿ ಕಳ್ಳತನ ಮಾಡಿ ಕಾರಿನಲ್ಲಿ ಹೋಗುತ್ತಿದ್ದ ವೇಳೆ ಪೊಲೀಸರು ಅಡ್ಡ ಹಾಕಿದರೂ ನಿಲ್ಲಿಸದೇ ಪರಾರಿಯಾಗಿದ್ದರು.

ಕಾರಿನ ನಂಬರ್ ಆಧರಿಸಿ ತನಿಖೆ ಕೈಗೊಂಡಾಗ ಆರೋಪಿಗಳು ಸಿಕ್ಕಿಹಾಕಿಕೊಂಡಿದ್ದಾರೆ. ಈ ಆರೋಪಿಗಳು ಜಿಲ್ಲೆಯಲ್ಲಿ ನಡೆದ ನಾಲ್ಕು ಕಳ್ಳತನ ಪ್ರಕರಣದ ಆರೋಪಿಗಳಾಗಿದ್ದು, ಇವರು ಕಡೂರು ಪಟ್ಟಣದಲ್ಲಿ ಕಳ್ಳತನಕ್ಕೆ ಸಂಚು ರೂಪಿಸಿದ್ದರು. ಅಲ್ಲಿ ಕಳವು ಮಾಡುವ ಮುನ್ನ ಬಂಧನಕ್ಕೊಳಗಾಗಿದ್ದಾರೆ ಎಂದ ಎಸ್ಪಿ ಅಕ್ಷಯ್, ಕಳೆದ ವರ್ಷ ಜಿಲ್ಲೆಯಲ್ಲಿ ನಡೆದ 8 ಸರಗಳ್ಳತನ ಪ್ರಕರಣವನ್ನು ಪೊಲೀಸರು ಇತ್ತೀಚೆಗೆ ಭೇದಿಸಿದ್ದು, ಪ್ರಕರಣದಲ್ಲಿ ಚಿಕ್ಕಮಗಳೂರು ನಗರದ ನಿವಾಸಿ ಜುನೈದ್ ಎಂಬಾತನನ್ನು ಬಂಧಿಸಲಾಗಿದೆ ಎಂದರು.

ಶೃಂಗೇರಿ ಬಾಲಕಿಯ ಅತ್ಯಾಚಾರ; 31 ಆರೋಪಿಗಳ ಬಂಧನ: ಜಿಲ್ಲೆಯ ಶೃಂಗೇರಿ ತಾಲೂಕಿನ ಗೋಚುವಳ್ಳಿ ಕ್ರಷರ್ ನಲ್ಲಿ ವಾಸವಿದ್ದ ಅಪ್ರಾಪ್ತ ವಯಸ್ಸಿನ ಬಾಲಕಿ ಅತ್ಯಾಚಾರ ಪ್ರಕರಣದಲ್ಲಿ ಇದುವರೆಗೆ 31 ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳನ್ನು ಸಂಗ್ರಹಿಸುವ ನಿಟ್ಟಿನಲ್ಲಿ ತನಿಖಾಧಿಕಾರಿಗಳ ತಂಡ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಪ್ರಭಾವಿಗಳ ಸಂಬಂಧಿಕರಿದ್ದು, ಈ ಆರೋಪಿಗಳನ್ನೂ ಬಂಧಿಸಬೇಕೆಂದು ಆರೋಪಿಗಳ ಸಂಬಂಧಿಕರಿಂದಲೇ ಒತ್ತಡವಿದೆಯೇ ಹೊರತು ಬಂಧಿಸದಂತೆ ಯಾರೂ ಒತ್ತಡ ಹೇರಿಲ್ಲ ಎಂದು ಹೇಳಿದರು. 

ಫೈರ್ ಇಂಜಿನ್ ಚಾಲಕ, ಪೊಲೀಸರಿಗೆ ನಗದು ಬಹುಮಾನ: ಶನಿವಾರ ಎಐಟಿ ವೃತ್ತದ ಬಳಿ ಮನೆಯೊಂದರಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಸಮಯ ಪ್ರಜ್ಞೆ ಮೂಲಕ ಬೈಕ್‍ಗೆ ಫೈರ್ ಇಂಜಿನ್ ಗುದ್ದಿಸಿ ಆರೋಪಿಗಳು ತಪ್ಪಿಸಿಕೊಳ್ಳದಂತೆ ಮಾಡಿದ್ದ ಫೈರ್ ಇಂಜಿನ್ ಚಾಲಕ ದೇವೇಂದ್ರಪ್ಪ ಅವರಿಗೆ ನಗದು ಬಹುಮಾನ, ಪ್ರಶಸ್ತಿ ಪತ್ರ ನೀಡಿ ಸನ್ಮಾನಿಸಿದರು. ಅಲ್ಲದೇ ಕ್ಷಿಪ್ರ ಕಾರ್ಯಾಚರಣೆ ಮೂಲಕ ಆರೋಪಿಗಳನ್ನು ಬಂಧಿಸಿದ ಸಿಐ ವಿನೋದ್ ಭಟ್, ನಗರ ಠಾಣೆಯ ಪಿಎಸ್ಸೈ ಗುರುಪ್ರಸಾದ್, ಪಿಎಸ್ಸೈಗಳಾದ ವಿನುತಾ, ಧನಂಜಯ್, ಮೌನೇಶ್, ಪೇದೆಗಳಾದ ಲೋಹಿತ್, ಶಶಿಧರ್, ಪ್ರವೀಣ್, ನವೀನ್, ಗಿರೀಶ್, ಇಬ್ರಾಹೀಂ, ಪ್ರಸನ್ನ ಅವರಿಗೆ ಎಸ್ಪಿ ನಗದು ಬಹುಮಾನ ನೀಡಿದರು. 

ತಾಲೂಕಿನ ಗೌಡನಹಳ್ಳಿಯಲ್ಲಿ ಬೆಂಕಿ ಆರಿಸಲು ಕರೆ ಬಂದಿತ್ತು. ಕರೆ ಮೇರೆಗೆ ಅಗ್ನಿಶಾಮಕದಳದ ಸಿಬ್ಬಂದಿಯೊಂದಿಗೆ ವಾಹನದಲ್ಲಿ ಗೌಡನಹಳ್ಳಿಗೆ ಹೊರಟಿದ್ದೆವು. ವಾಹನ ಎಐಟಿ ವೃತ್ತದ ಬಳಿಯ ಬೈಪಾಸ್ ರಸ್ತೆಯಲ್ಲಿ ಬರುತ್ತಿದ್ದ ವೇಳೆ ಸಾರ್ವಜನಿಕರು ಗುಂಪು ಸೇರಿಕೊಂಡು ಕಳ್ಳರೆಂದು ಕೂಗುತ್ತಿದ್ದರು. ಕೆಲವರು ಇಬ್ಬರು ಮುಸುಕುಧಾರಿಗಳತ್ತ ಕಲ್ಲೆಸೆಯುತ್ತಿರುವುದನ್ನು ಫೈರ್ ಇಂಜಿನ್ ಚಲಾಯಿಸುತ್ತಿದ್ದಾಗ ಗಮನಿಸಿದೆ. ಕಳ್ಳರು ಚಾಕು ಹಿಡಿದುಕೊಂಡು ಬೈಕ್ ಏರಿದ್ದರು. ಕೂಡಲೇ ನಾನು ವಾಹನವನ್ನು ಅವರಿದ್ದ ಭೈಕ್‍ಗೆ ಗುದ್ದಿಸಿ ಅಡ್ಡಲಾಗಿ ನಿಲ್ಲಿಸಿದೆ. ಕಳ್ಳರಿಬ್ಬರಿಗೆ ಬೈಕ್ ಎತ್ತಲು ಸಾಧ್ಯವಾಗದೇ ಓಡಿ ಹೋದರು. ರವಿವಾರ ಎಸ್ಪಿ ಕರೆ ಮಾಡಿ, ಕಳ್ಳರ ಬಂಧನಕ್ಕೆ ನಿಮ್ಮ ಸಮಯಪ್ರಜ್ಞೆ ಕಾರಣ ಎಂದು ಪ್ರಶಂಶಿಸಿದರು. ನಗದು ಬಹುಮಾನ, ಪ್ರಶಸ್ತಿ ಪತ್ರ, ಸನ್ಮಾನ ಮಾಡಿದ್ದಾರೆ. ಇದರಿಂದ ತುಂಬಾ ಸಂತಸವಾಯಿತು. 
- ದೇವೇಂದ್ರಪ್ಪ, ಫೈರ್ ಇಂಜಿನ್ ಚಾಲಕ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News