ನಂಜನಗೂಡು: ಎರಡು ಗುಂಪುಗಳ ನಡುವೆ ಘರ್ಷಣೆ; ಇಬ್ಬರಿಗೆ ಚೂರಿ ಇರಿತ

Update: 2021-02-28 15:37 GMT

ಮೈಸೂರು,ಫೆ.28: ಜಿಲ್ಲೆಯ ನಂಜನಗೂಡು ತಾಲೂಕಿನ ದೇವರಸನಹಳ್ಳಿ ಗ್ರಾಮದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ನಡೆದಿದ್ದು, ಇಬ್ಬರಿಗೆ ಚಾಕುವಿನಿಂದ ಇರಿಯಲಾಗಿದೆ. ಗ್ರಾಮದಲ್ಲಿ ಬಿಗುವಿನ ವಾತವಾರಣ ನಿರ್ಮಾಣವಾಗಿದೆ.

ಕೆಲ ದಿನಗಳ ಹಿಂದೆ ಮೋಟಾರ್ ಬೈಕ್ ಅನ್ನು ಅಡವಿಟ್ಟು, ಹಣ ಪಡೆದಿದ್ದ ವಿಷಯವೇ ಘಟನೆಗೆ ಮೂಲ ಕಾರಣ ಎನ್ನಲಾಗಿದೆ. ಚೇತನ್ ಎಂಬಾತ ತನ್ನ ಬೈಕ್ ಅನ್ನು ಗ್ರಾಮದ ಕಾರ್ತಿಕ್ ಎಂಬಾತನಲ್ಲಿ ಗಿರವಿ ಇಟ್ಟು ಹಣ ಪಡೆದಿದ್ದ. ಈ ಹಣದ ವಿಷಯ ತಗಾದೆಗೆ ತಿರುಗಿ ಇಬ್ಬರಲ್ಲಿ ಮನಸ್ತಾಪವಾಗಿದ್ದಲ್ಲದೆ, ಕಾರ್ತಿಕ್ ತಂದೆಯ ಮೇಲೆ ಚೇತನ್ ಮತ್ತಿತರರು ಹಲ್ಲೆ ನಡೆಸಿದ್ದರು ಎನ್ನಲಾಗಿದೆ. ಈ ವಿಷಯ ಪೊಲೀಸ್ ಠಾಣೆಯವರೆಗೂ ತಲುಪಿ ಎರಡು ಕಡೆಯವರಿಗೆ ಎಚ್ಚರಿಕೆ ನೀಡಿ ಮುಚ್ಚಳಿಕೆ ಮಾಡಿಕೊಳ್ಳಲಾಗಿತ್ತು.

ಶನಿವಾರ ರಾತ್ರಿ ಆಟೋ ಚಾಲಕ ಅಭಿಷೇಕ್ ಮತ್ತು ಕಾರ್ತಿಕ್‍ನ ಸ್ನೇಹಿತ ಮಣಿಕಂಠ ಅವರ ನಡುವೆ ಪ್ರಾರಂಭವಾದ ಮಾತಿನ ಚಕಮಕಿ ವಿಕೋಪಕ್ಕೆ ತಿರುಗಿ, ಗುಂಪು ಘರ್ಷಣೆಗೆ ಕಾರಣವಾಗಿದ್ದು, ಅಭಿಷೇಕ್ ಮತ್ತು ಗ್ರಾಮಕ್ಕೆ ಬರುತ್ತಿದ್ದ ರಾಘವೇಂದ್ರ ಎಂಬಾತ ಚಾಕುವಿನಿಂದ ಇರಿಸಿಕೊಂಡು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ಸೇರುವಂತಾಗಿದೆ. ಗ್ರಾಮದ ಹುಲ್ಲಿನ ಬಣವೆಗೂ ಬೆಂಕಿ ಹಾಕಿದ್ದು, 10ಕ್ಕೂ ಹೆಚ್ಚು ಮಂದಿ ಗುಂಪು ಘರ್ಷಣೆಯಲ್ಲಿ ಸಿಲುಕಿ ನಂಜನಗೂಡು ಆಸ್ಪತ್ರೆಯಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ. ಚಿಂತಾಜನಕ ಸ್ಥಿತಿಯಲ್ಲಿದ್ದ ಅಭಿಷೇಕ್ ಮತ್ತು ರಾಘವೇಂದ್ರ ಅವರನ್ನು ರಾತ್ರಿಯೇ ಮೈಸೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.

ವಿಷಯ ತಿಳಿದ ನಂಜನಗೂಡು ಡಿವೈಎಸ್‍ಪಿ ಗೋವಿಂದರಾಜು ಹಾಗೂ ವೃತ್ತ ನಿರೀಕ್ಷಕ ಲಕ್ಷ್ಮೀಕಾಂತ ತಳವಾರ್ ಗ್ರಾಮಕ್ಕೆ ಆಗಮಿಸಿ ಘರ್ಷಣೆ ವಿಕೋಪಕ್ಕೆ ಹೋಗದಂತೆ ನೋಡಿಕೊಂಡರು. ಈಗಾಗಲೇ ಎರಡು ಗುಂಪಿನ 10ಕ್ಕೂ ಹೆಚ್ಚು ಮಂದಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಂಜನಗೂಡು ಗ್ರಾಮಾಂತರ ಠಾಣೆಯಲ್ಲಿ ಎರಡೂ ಗುಂಪಿನವರು ದೂರು ದಾಖಲಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News