ಸ್ಫೋಟದಲ್ಲಿ ಹಾನಿಗೀಡಾದ ಇಸ್ರೇಲಿ ಹಡಗು: ದುರಸ್ತಿಗಾಗಿ ದುಬೈಗೆ ಆಗಮನ

Update: 2021-02-28 15:59 GMT

 ದುಬೈ,ಫೆ.28: ಒಮನ್ ಕೊಲ್ಲಿಯಲ್ಲಿ ಪ್ರಯಾಣಿಸುತ್ತಿದ್ದಾಗ ಸಂಭವಿಸಿದ ನಿಗೂಢ ಸ್ಫೋಟದಲ್ಲಿ ಹಾನಿಗೀಡಾದ ಇಸ್ರೇಲ್ ಮಾಲಕತ್ವದ ಸರಕುಸಾಗಣೆ ಹಡಗು ದುರಸ್ತಿಗಾಗಿ ದುಬೈ ಬಂದರಿಗೆ ರವಿವಾರ ಆಗಮಿಸಿದೆ.

ಸ್ಫೋಟದಲ್ಲಿ ಹಡಗಿನಲ್ಲಿದ್ದ ಸಿಬ್ಬಂದಿಗೆ ಯಾವುದೇ ಅಪಾಯವಾಗದಿದ್ದರೂ ಹಡಗಿನ ಮೂತಿ ಭಾಗದಲ್ಲಿ ನೀರಿನಮಟ್ಟದಿಂದ ಸ್ವಲ್ಪ ಮೇಲುಗಡೆ ಎರಡು ರಂಧ್ರಗಳಾಗಿವೆ ಎಂದು ಅಮೆರಿಕದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ಸ್ಫೋಟದ ಕಾರಣದ ಬಗ್ಗೆ ಇನ್ನೂ ಸ್ಪಷ್ಟವಾದ ಮಾಹಿತಿ ಲಭ್ಯವಾಗಿಲ್ಲ. ಆದರೆ 2015ರ ಪರಮಾಣು ಒಡಂಬಡಿಕೆಗೆ ಸಂಬಂಧಿಸಿ ಅಮೆರಿಕ ಹಾಗೂ ಇರಾನ್ ನಡುವೆ ಉದ್ವಿಗ್ನತೆ ತೀವ್ರವಾಗಿ ಉಲ್ಬಣಿಸಿರುವ ನಡುವೆಯೇ ಈ ಘಟನೆ ನಡೆದಿದೆ.ಈ ಸ್ಫೋಟದ ಹಿಂದೆ ಇರಾನ್‌ನ ಕೈವಾಡವಿರುವುದಾಗಿ ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ.

  ಅಣುಶಕ್ತಿ ಕಾರ್ಯಕ್ರಮದ ವಿರುದ್ಧವಾಗಿ ತನ್ನ ಮೇಲೆ ವಿಧಿಸಲಾಗಿರುವ ನಿರ್ಬಂಧಗಳಿಂದ ಪರಮಾಣು ಒಡಂಬಡಿಕೆಯಡಿ ದೊರೆತಿರುವ ರಿಯಾಯಿತಿಗಳನ್ನು ನೀಡುವಂತೆ ಜೋ ಬೈಡೆನ್ ಆಡಳಿತದ ಮೇಲೆ ಇರಾನ್ ಒತ್ತಡ ಹೇರುತ್ತಿದೆ. ಹಿಂದಿನ ಡೊನಾಲ್ಡ್ ಟ್ರಂಪ್ ಆಡಳಿತವು ಈ ವಿನಾಯಿತಿಗಳನ್ನು ರದ್ದುಪಡಿಸಿತ್ತು.

  ಪ್ರಮುಖ ತೈಲಸಾಗಾಣಿಕೆ ಸಾಗರಮಾರ್ಗವಾದ ಹೊರ್ಮುಝ್ ಜಲಸಂಧಿಯಲ್ಲಿ 2019ರಲ್ಲಿ ಇದೇ ರೀತಿಯಾಗಿ ವಿದೇಶಿ ತೈಲ ಟ್ಯಾಂಕರ್ ಹಡಗುಗಳ ಮೇಲೆ ಸರಣಿ ಬಾಂಬ್ ದಾಳಿಗಳು ನಡೆದಿದ್ದವು. ಈ ವಿಧ್ವಂಸಕ ಕೃತ್ಯಗಳ ಹಿಂದೆ ಇರಾನ್‌ನ ಕೈವಾಡವಿರುವುದಾಗಿ ಅಮೆರಿಕದ ನೌಕಾಪಡೆ ಆಪಾದಿಸಿತ್ತು. ಆದರೆ ಇರಾನ್ ಈ ಆರೋಪಗಳನ್ನು ನಿರಾಕರಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News