3,500 ಕೋಟಿ ರೂ. ವೆಚ್ಚದಲ್ಲಿ ಹೆದ್ದಾರಿ ಅಭಿವೃದ್ಧಿ: ಡಿಪಿಆರ್ ಸಿದ್ದಪಡಿಸಲು ಡಿಸಿಎಂ ಕಾರಜೋಳ ಸೂಚನೆ
ಬೆಳಗಾವಿ, ಫೆ .28: ಲೋಕೋಪಯೋಗಿ ಇಲಾಖೆಯು 2021-22ನೆ ಸಾಲಿನಲ್ಲಿ 3,500ಕೋಟಿ ರೂ. ವೆಚ್ಚದಲ್ಲಿ ರಾಜ್ಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿಗೆ ಡಿಪಿಆರ್ ಸಿದ್ದಪಡಿಸಲು ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ.ಕಾರಜೋಳ ತಿಳಿಸಿದ್ದಾರೆ.
ರವಿವಾರ ಗೋಕಾಕ್‍ನಲ್ಲಿ ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರೊಂದಿಗೆ ವಿವಿಧ ಕಾಮಗಾರಿಗಳ ಪ್ರಗತಿ ಪರಿಶೀಲನೆ ನಡೆಸಿ, ಅಧಿಕಾರಿಗಳೊಂದಿಗೆ ಚರ್ಚಿಸಿದ ನಂತರ ಮಾತನಾಡಿದ ಅವರು, ಈಗಾಗಲೇ ಮೇಲ್ಕಂಡ ಪ್ರಸ್ತಾವನೆಗೆ ಸಿಎಂ ಅನುಮೋದನೆ ಪಡೆಯಲಾಗಿದ್ದು, ಡಿಪಿಆರ್ ಸಿದ್ದಪಡಿಸುವಂತೆ ಸೂಚಿಸಲಾಗಿದೆ ಎಂದರು.
ಈ ವರ್ಷದಲ್ಲಿ ಒಟ್ಟಾರೆ 25 ಸಾವಿರ ಕಿ.ಮೀ ರಸ್ತೆಯನ್ನು ಮೇಲ್ದರ್ಜೆಗೇರಿಸಲಾಗಿದ್ದು, ಅದರಲ್ಲಿ 15,510 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಎಂಡಿಆರ್ ಗೆ ಹಾಗೂ 9,601 ಕಿ.ಮೀ ಎಂಡಿಆರ್ ರಸ್ತೆಗಳನ್ನು ರಾಜ್ಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಲಾಗಿದೆ. ಬೆಳಗಾವಿ ಜಿಲ್ಲೆಯ 892 ಕಿ.ಮೀ ಗ್ರಾಮೀಣ ರಸ್ತೆಗಳನ್ನು ಎಂಡಿಆರ್ ಗೆ ಹಾಗೂ 555 ಕಿ.ಮೀ ಎಂಡಿಆರ್ ರಸ್ತೆಗಳನ್ನು ರಾಜ್ಯ ಹೆದ್ದಾರಿಗೆ ಮೇಲ್ದರ್ಜೆಗೇರಿಸಲಾಗಿದೆ ಎಂದು ವಿವರಿಸಿದರು.
ಹತ್ತು ವರ್ಷಗಳಿಂದ ಈ ಕುರಿತು ಬೇಡಿಕೆ ಇತ್ತು. ಶಾಸಕರು ಅಹವಾಲುಗಳನ್ನು ನೀಡಿದ್ದರು. ಮೇಲ್ದರ್ಜೆಗೇರಿಸಿದ ಈ ರಸ್ತೆಗಳ ನಿರ್ವಹಣೆ ಮತ್ತು ಅಭಿವೃದ್ಧಿ ಯನ್ನು ಎಪ್ರಿಲ್ ನಂತರ ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದ ಅವರು, ಜಿಲ್ಲಾ ಪ್ರಗತಿ ಕುರಿತು ವಿವರಿಸಿದರು. ಈ ವೇಳೆ ಸಚಿವ ರಮೇಶ್ ಜಾರಕಿಹೊಳಿ ಹಾಗೂ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.
‘ಗೋಕಾಕ್ ಫಾಲ್ಸ್ ನಡುವೆ ನಿರ್ಮಾಣ ಹಂತದಲ್ಲಿರುವ 15.54 ಕೋಟಿ ರೂ.ವೆಚ್ಚದ ಸೇತುವೆ ಕಾಮಗಾರಿ ಜುಲೈ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಲಾಗುವುದು. ಕಾಮಗಾರಿಯ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ವಾಹನಗಳ ಸಂಚಾರಕ್ಕೆ, ಪ್ರವಾಸಿಗರಿಗೆ ಅನುಕೂಲವಾಗುವಂತೆ ಕ್ರಮ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ'
-ಗೋವಿಂದ ಎಂ.ಕಾರಜೋಳ, ಉಪಮುಖ್ಯಮಂತ್ರಿ