ಉತ್ತಮ ಬದುಕು ಕಟ್ಟಿಕೊಳ್ಳಲು ಗುಣಮಟ್ಟದ ಶಿಕ್ಷಣವೇ ಮಾರ್ಗ: ಡಿಸಿಎಂ ಡಾ.ಅಶ್ವತ್ಥನಾರಾಯಣ

Update: 2021-02-28 16:23 GMT

ಬೆಂಗಳೂರು, ಫೆ. 28: ‘ಉತ್ತಮ ಸಮಾಜದ ಜತೆಗೆ ಉತ್ತಮ ಬದುಕು ಕಟ್ಟಿಕೊಳ್ಳಲು ಗುಣಮಟ್ಟದ ಶಿಕ್ಷಣದಿಂದ ಮಾತ್ರ ಸಾಧ್ಯ ಎಂದು' ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಪ್ರತಿಪಾದಿಸಿದರು.

ರವಿವಾರ ವಿಜಯನಗರದಲ್ಲಿ ವಿ.ಸೋಮಣ್ಣ ಪ್ರತಿಷ್ಠಾನ ಆಯೋಜಿಸಿದ್ದ ದ.ರಾ.ಬೇಂದ್ರೆ ಅವರ 125ನೆ ಜಯಂತೋತ್ಸವದ ಪ್ರಯುಕ್ತ 2019-20ನೆ ಸಾಲಿನ ಎಸ್ಸೆಸ್ಸೆಲ್ಸಿಲ್ಲಿ ಹೆಚ್ಚು ಅಂಕ ಗಳಿಸಿದ ಬಿಬಿಎಂಪಿ ಶಾಲೆಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಶಿಕ್ಷಣ ಮಾತ್ರ ಸರ್ವ ಸಮಸ್ಯೆಗಳಿಗೆ ಮುಲಾಮು ಎಂದರು.

‘ರಾಷ್ಟ್ರವನ್ನು ಕಟ್ಟುವ ವಿಶಾಲ ತಳಹದಿಯನ್ನು ದೃಷ್ಟಿಯಲ್ಲಿಟ್ಟುಕೊಂಡು ಗುಣಮಟ್ಟದ ಕಲಿಕೆ-ಬೋಧನೆಯ ಪರಿಕಲ್ಪನೆ ಅಡಿಯಲ್ಲಿ ವಿದ್ಯಾರ್ಥಿ ಕೇಂದ್ರಿತ ಶಿಕ್ಷಣ ಕೊಡುವ ನಿಟ್ಟಿನಲ್ಲಿ ಸರಕಾರ ಈಗಾಗಲೇ ಅನೇಕ ಹೆಜ್ಜೆಗಳನ್ನು ಇಟ್ಟಿದೆ. ರಾಜ್ಯದ ಶೈಕ್ಷಣಿಕ ವಲಯದಲ್ಲಿ ದೊಡ್ಡ ಸುಧಾರಣಾ ಪರ್ವವೇ ಆರಂಭವಾಗಿದೆ' ಎಂದು ಅವರು ಹೇಳಿದರು.

‘ಶಿಕ್ಷಣವನ್ನು ಕೇವಲ ಅಕಾಡೆಮಿಕ್ ದೃಷ್ಟಿಯಿಂದ ಕಲಿಯುವುದಲ್ಲ. ಅದು ಎಲ್ಲ ಹಂತಗಳಲ್ಲೂ ದೇಶಕ್ಕೆ ಪೂರಕವಾಗಿರಬೇಕು. ವಿಜ್ಞಾನ, ತಂತ್ರಜ್ಞಾನ, ವೈದ್ಯಕೀಯ ಇನ್ನಾವುದೇ ಉದ್ದೇಶವಿದ್ದರೂ ಅಂತಿಮವಾಗಿ ನಮ್ಮ ಕಲಿಕೆಯು ಸಮಾಜಕ್ಕೆ ಅರ್ಪಣೆಯಾಗಬೇಕು. ಈ ನಿಟ್ಟಿನಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಮರು ನಿರ್ಮಾಣ ಮಾಡಲಾಗುತ್ತಿದೆ' ಎಂದು ಅವರು ತಿಳಿಸಿದರು.

ವಸತಿ ಸಚಿವ ವಿ.ಸೋಮಣ್ಣ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಿಮರ್ಶಕ ನರಹಳ್ಳಿ ಬಾಲಸುಬ್ರಹ್ಮಣ್ಯ, ಪರಿಷತ್ ಸದಸ್ಯ ಅ.ದೇವೇಗೌಡ, ಮಾಜಿ ಸಚಿವ ಸೊಗಡು ಶಿವಣ್ಣ, ಪ್ರತಿಷ್ಠಾನದ ಅಧ್ಯಕ್ಷೆ ಶೈಲಜಾ ಸೋಮಣ್ಣ, ಕಾರ್ಯಾಧ್ಯಕ್ಷ ಡಾ.ಅರುಣ್ ಸೋಮಣ್ಣ, ಕೋಶಾಧ್ಯಕ್ಷ ನವೀನ್ ಸೋಮಣ್ಣ, ಕಾಸಿಯಾ ಕಾರ್ಯದರ್ಶಿ ಜಗದೀಶ್ ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News