×
Ad

ಚಿಕ್ಕಮಗಳೂರು: ಗ್ರಾಹಕರ ಸೋಗಿನಲ್ಲಿ ತೆರಳಿ ಹುಲಿ ಉಗುರು ಮಾರಾಟಗಾರರನ್ನು ಬಂಧಿಸಿದ ಪೊಲೀಸರು

Update: 2021-02-28 22:39 IST

ಚಿಕ್ಕಮಗಳೂರು, ಫೆ.28: ನಗರದ ರೈಲ್ವೆ ನಿಲ್ದಾಣದ ಬಳಿ ಹುಲಿ ಉಗುರು, ಮೂಳೆ, ಹಲ್ಲುಗಳನ್ನು ಮಾರಲು ಮುಂದಾಗಿದ್ದ ಇಬ್ಬರು ಆರೋಪಿಗಳನ್ನು ಡಿಸಿಐಬಿ ವಿಭಾಗದ ಪೊಲೀಸರು ಗ್ರಾಹಕರ ಸೋಗಿನಲ್ಲಿ ದಾಳಿ ನಡೆಸಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಕ್ಷಯ್ ಎಂ.ಎಚ್.ತಿಳಿಸಿದ್ದಾರೆ.

ಎಸ್ಪಿ ಕಚೇರಿ ಸಭಾಂಗಣದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಗರದ ರೈಲ್ವೈ ನಿಲ್ದಾಣದ ಬಳಿ ಇಬ್ಬರು ವ್ಯಕ್ತಿಗಳು ಕಾರಿನಲ್ಲಿ ಹುಲಿ ಉಗುರು, ಹಲ್ಲು, ಮೂಳೆಗಳನ್ನು ಮಾರಲು ಮುಂದಾಗಿದ್ದಾರೆಂಬ ಬಗ್ಗೆ ಖಚಿತ ಮಾಹಿತಿ ಶನಿವಾರ ಸಂಜೆ ಲಭ್ಯವಾಗಿತ್ತು. ಖಚಿತ ಮಾಹಿತಿ ಮೇರೆಗೆ ಕಾರ್ಯಪ್ರವೃತ್ತರಾದ ಡಿಸಿಐಬಿ ವಿಭಾಗದ ಇನ್‍ಸ್ಪೆಕ್ಟರ್ ಸತ್ಯನಾರಾಯಣ, ಪಿಎಸ್ಸೈ ಪದ್ದು, ಎಎಸ್ಸೈ ವೀರೇಂದ್ರ ಹಾಗೂ ಸಿಬ್ಬಂದಿ ಮಾರಾಟಗಾರರ ಬಳಿಗೆ ಗ್ರಾಹಕರ ಸೋಗಿನಲ್ಲಿ ತೆರಳಿ ಹುಲಿ ಉಗುರು, ಹಲ್ಲು ಕೊಂಡುಕೊಳ್ಳುವುದಾಗಿ ವ್ಯವಹರಿಸಿದ್ದಾರೆ. 

ಆರೋಪಿಗಳು ಕಾರಿನಲ್ಲಿ ಹುಲಿ ಉಗುರು, ಮೂಳೆ, ಹಲ್ಲುಗಳಿರುವುದನ್ನು ತೋರಿಸುತ್ತಿದಂತೆ ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಪ್ರಕರಣ ಸಂಬಂಧ ಹಾಸನ ತಾಲೂಕಿನ ಅಂಬುಗ ಗ್ರಾಮದ ಲೋಕೇಶ್ ಹಾಗೂ ಚಿಕ್ಕಮಗಳೂರಿನ ಅರಶಿನಗುಪ್ಪೆ ಗ್ರಾಮದ ಚೆಲುವ ಎಂಬವರನ್ನು ಬಂಧಿಸಲಾಗಿದೆ. ಆರೋಪಿಗಳಿಂದ 10 ಲಕ್ಷ ರೂ. ಮೌಲ್ಯದ 8 ಹುಲಿ ಉಗುರುಗಳು, 1 ಹುಲಿ ಚರ್ಮದ ತುಣುಕು, 1 ಕೋರೆಹಲ್ಲು, 4 ಹಲ್ಲುಗಳು ಹಾಗೂ 14 ಹಲ್ಲಿನ ಮೂಳೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಮಾಹಿತಿ ನೀಡಿದರು.

ಹಲ್ಲು, ಮೂಳೆ, ಉಗುರುಗಳು ಹುಲಿಯದ್ದೆಂದು ವನ್ಯಜೀವಿ ತಜ್ಞರಿಂದ ಪರಿಶೀಲಿಸಲಾಗಿದ್ದು, ಇದನ್ನು ಚಿಕ್ಕಮಗಳೂರು ವಲಯ ಅರಣ್ಯಾಧಿಕಾರಿಗಳ ವಶಕ್ಕೆ ನೀಡಲಾಗಿದೆ. ಆರೋಪಿಗಳ ಹಿಂದೆ ವನ್ಯಜೀವಿ ಭೇಟೆಗಾರರ ಜಾಲ ಇರುವ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದ ಅವರು, ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕು ವ್ಯಾಪ್ತಿಯಲ್ಲಿ ಹುಲಿಯೊಂದನ್ನು ಟ್ರ್ಯಾಪ್ ಮಾಡಿ ಅದರ ಹಲ್ಲು, ಉಗುರು ಕಿತ್ತಿರುವ ಪ್ರಕರಣ ನಡೆದಿದೆ. ಹುಲಿಯನ್ನು ಟ್ರ್ಯಾಪ್ ಮಾಡಿದವರು ಯಾರೆಂಬ ಬಗ್ಗೆ ಬಂಧಿತ ಆರೋಪಿಗಳ ಬಳಿ ವಿಚಾರಿಸಲಾಗುತ್ತಿದೆ. ತನಿಖೆಯಿಂದ ಹೆಚ್ಚಿನ ಮಾಹಿತಿ ತಿಳಿದು ಬರಲಿದೆ ಎಂದರು.

ಈ ವೇಳೆ ಡಿವೈಎಸ್ಪಿ ಪ್ರಭು, ಚಿಕ್ಕಮಗಳೂರು ವೃತ್ತದ ಸಿಐ ವಿನೋದ್ ಭಟ್, ನಗರ ಠಾಣೆಯ ಪಿಎಸ್ಸೈ ಗುರುಪ್ರಸಾದ್, ಡಿಸಿಐಬಿ ವಿಭಾಗದ ಇನ್‍ಸ್ಪೆಕ್ಟರ್ ಸತ್ಯನಾರಾಯಣ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News