ಪತಿಯ ಜಗಳ ಬಿಡಿಸಲು ಹೋದ ಗರ್ಭಿಣಿಗೆ ಹಲ್ಲೆ, ಗರ್ಭಪಾತ: ಮೂವರು ಪೊಲೀಸ್ ವಶಕ್ಕೆ
ಚಾಮರಾಜನಗರ, ಫೆ.28: ಪತಿ ಜೊತೆ ಬೇರೆಯವರು ಜಗಳ ಮಾಡುತ್ತಿದ್ದಾಗ ಅದನ್ನು ಬಿಡಿಸಲು ಹೋದ ಮಹಿಳೆ ಹಲ್ಲೆಗೊಳಗಾಗಿ, ಗರ್ಭಪಾತ ಆಗಿರುವ ಘಟನೆ ಚಾಮರಾಜನಗರ ಜಿಲ್ಲೆಯ ಕೊಳ್ಳೇಗಾಲ ತಾಲೂಕು ಉತ್ತಂಬಳ್ಳಿಯಲ್ಲಿ ನಡೆದಿದೆ.
ಹಲ್ಲೆಗೊಳಗಾದ ಮಹಿಳೆಯನ್ನು ಮಾದೇವಿ ಎಂದು ಗುರುತಿಸಲಾಗಿದೆ. ಶುಕ್ರವಾರ ರಾತ್ರಿ ಮಹಿಳೆಯ ಗಂಡ ಸೋಮು ಜೊತೆ ಮಾದೇಶ್ ಹಾಗೂ ಇತರ ಸ್ನೇಹಿತರು ಜಗಳ ಮಾಡಿದ್ದಾರೆ. ಈ ವೇಳೆ ಪತಿಯನ್ನು ಜಗಳದಿಂದ ಬಿಡಿಸಲು ನಾಲ್ಕು ತಿಂಗಳ ಗರ್ಭಿಣಿಯಾಗಿದ್ದ ಮಾದೇವಿ ಮುಂದಾಗಿದ್ದಾರೆ.
ಜಗಳ ನಡೆಯುತ್ತಿದ್ದ ಸಮಯದಲ್ಲಿ ಮಾದೇವಿ ಅಡ್ಡ ಬಂದಿದ್ದಕ್ಕೆ ಕೋಪಗೊಂಡ ಮಾದೇಶ್ ಮಹಿಳೆಯ ಹೊಟ್ಟೆಗೆ ಕಾಲಿನಿಂದ ಜೋರಾಗಿ ಒದ್ದಿದ್ದಾನೆ. ಇದರಿಂದ ಮಾದೇವಿ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಮಹಿಳೆಗೆ ಗರ್ಭಪಾತ ಆಗಿದೆ ಎಂದು ತಿಳಿದುಬಂದಿದೆ.
ಸದ್ಯ ಘಟನೆ ಕುರಿತಂತೆ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿ ಮಾದೇಶ್ ಹಾಗು ಸ್ನೇಹಿತರಾದ ಶಿವಣ್ಣ, ಗೋವಿಂದ ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.