ಸಿದ್ದರಾಮಯ್ಯ ಜೊತೆ ತೆರಳಿ ಡಿಕೆಶಿ ವಿರುದ್ಧ ಹೈಕಮಾಂಡ್‍ಗೆ ದೂರು ನೀಡುತ್ತೇನೆ: ಅಖಂಡ ಶ್ರೀನಿವಾಸಮೂರ್ತಿ
ಬೆಂಗಳೂರು, ಮಾ.1: ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ. ಹೊಸದಿಲ್ಲಿಗೆ ತೆರಳಿ ಹೈಕಮಾಂಡ್ ನಾಯಕರನ್ನು ಭೇಟಿಯಾಗಿ ಅವರ ವಿರುದ್ಧ ದೂರು ನೀಡುತ್ತೇನೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರನ್ನು ಜೊತೆಯಲ್ಲಿ ಕರೆದುಕೊಂಡು ಹೋಗುತ್ತೇನೆ ಎಂದು ಪುಲಿಕೇಶಿನಗರ ವಿಧಾನಸಭಾ ಕ್ಷೇತ್ರದ ಶಾಸಕ ಆರ್.ಅಖಂಡ ಶ್ರೀನಿವಾಸಮೂರ್ತಿ ಹೇಳಿದ್ದಾರೆ.
ಸೋಮವಾರ ಶಾಸಕರ ಭವನದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಮನೆಗೆ ಬೆಂಕಿ ಬಿತ್ತು, ನನಗೆ ನೋವಾಗಿದೆ. ಆದರೂ, ನನಗೆ ನ್ಯಾಯ ಸಿಕ್ಕಿಲ್ಲ. ಡಿ.ಕೆ.ಶಿವಕುಮಾರ್ ಈ ವಿಚಾರದಲ್ಲಿ ನನಗೆ ಬೆಂಬಲ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ನನ್ನ ಮನೆಯನ್ನು ಸುಟ್ಟವರ ವಿರುದ್ಧ ನಾನು ನ್ಯಾಯಾಲಯದಲ್ಲಿ ಹೋರಾಟ ಮಾಡುತ್ತೇನೆ. ಪಕ್ಷದಲ್ಲಿ ನನಗೆ ಬೆಂಬಲ ಸಿಗದಿದ್ದರೂ ನಾನು ಹೋರಾಟವನ್ನು ಮುಂದುವರಿಸುತ್ತೇನೆ. ಪಕ್ಷದಲ್ಲಿದ್ದುಕೊಂಡೆ ನನ್ನನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ. ಆದರೂ, ಸಿದ್ದರಾಮಯ್ಯ ಹೇಳಿದಂತೆ ನಾವು ನಡೆದುಕೊಂಡು ಹೋಗುತ್ತಿದ್ದೇವೆ. ಅವರೇ ನಮ್ಮ ರಕ್ಷಣೆಗೆ ಬರಬೇಕು ಎಂದು ಶ್ರೀನಿವಾಸಮೂರ್ತಿ ಮನವಿ ಮಾಡಿದರು.
ನನಗೆ ಟಿಕೆಟ್ ಕೊಡಿಸುವುದಾಗಿ ಸಿದ್ದರಾಮಯ್ಯ ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಡೆ ಏನು ಎಂಬುದನ್ನು ಮಾಧ್ಯಮದವರೇ ಅವರನ್ನು ಪ್ರಶ್ನಿಸಬೇಕು. ನನಗೆ ಟಿಕೆಟ್ ನೀಡುವ ವಿಚಾರದ ಬಗ್ಗೆ ಮಾಜಿ ಶಾಸಕ ಪ್ರಸನ್ನಕುಮಾರ್ ಯಾಕೆ ಮಾತನಾಡುತ್ತಿದ್ದಾರೆ? ಮುಂದಿನ ಚುನಾವಣೆಯಲ್ಲೂ ನಾನು ಕಾಂಗ್ರೆಸ್ ಪಕ್ಷದಿಂದಲೇ ಸ್ಪರ್ಧಿಸುತ್ತೇನೆ ಎಂದು ಅವರು ಹೇಳಿದರು.
ಪ್ರಸನ್ನಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಪುನಃ ಸೇರಿಸಿಕೊಳ್ಳಬೇಡಿ ಎಂದು ಹೇಳಿದ್ದೆ. ಆದರೂ, ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡಿದ್ದಾರೆ. ಹಾಲಿ ಶಾಸಕರು ಇರುವಾಗ ಮತ್ತೊಬ್ಬರನ್ನು ಕರೆ ತಂದಿರುವುದು ಸರಿಯಲ್ಲ. ಇದರಿಂದ ಕ್ಷೇತ್ರದಲ್ಲಿ ಗುಂಪುಗಾರಿಕೆ ಆರಂಭವಾಗುತ್ತದೆ. ಪ್ರಸನ್ನಕುಮಾರ್ ನನ್ನನ್ನು ಅವನು, ಇವನು ಎಂದು ಏಕವಚನದಲ್ಲಿ ಕರೆದದ್ದು ತಪ್ಪು. ಆದರೆ, ನಾನು ಮೃದುವಾಗಿ ಹೋಗಿದ್ದೆ ತಪ್ಪೇ ಎಂದು ಶ್ರೀನಿವಾಸಮೂರ್ತಿ ತಿಳಿಸಿದರು.
ಝಮೀರ್ ಅಣ್ಣ ಹುಲಿ ಇದ್ದಂಗೆ. ಅವರು ಎಲ್ಲರನ್ನೂ ಜೊತೆಯಲ್ಲಿ ಕರೆದುಕೊಂಡು ಹೋಗುತ್ತಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಅವರು ಪ್ರಯತ್ನ ಪಡುತ್ತಿದ್ದಾರೆ ಎಂದು ಮಾಜಿ ಸಚಿವ ಝಮೀರ್ ಅಹ್ಮದ್ ಖಾನ್‍ರನ್ನು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೊಗಳಿದರು.