ಆಹ್ವಾನ ನೀಡಿದರೆ ‘ಬಿಗ್ ಬಾಸ್' ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವೆ: ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್

Update: 2021-03-01 15:00 GMT

ಬೆಂಗಳೂರು, ಮಾ. 1: ‘ಖಾಸಗಿ ಸುದ್ದಿವಾಹಿನಿ ಆಯೋಜಿಸಿರುವ ‘ಬಿಗ್ ಬಾಸ್' ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನ ನೀಡಿದರೆ ಆ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ. ಅಲ್ಲದೆ, ರಾಜಕಾರಣದಲ್ಲಿ ಕಿಡಿ ಹೊತ್ತುವಂತೆ ಮಾಡುತ್ತೇನೆ' ಎಂದು ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಎಚ್.ವಿಶ್ವನಾಥ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಸೋಮವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬಿಗ್ ಬಾಸ್ ಕಾರ್ಯಕ್ರಮ ನಿರೂಪಕರು ಈ ಹಿಂದೆ ನನ್ನನ್ನು ಆಹ್ವಾನಿಸಿದ್ದರು. ಆದರೆ, ಆ ಸಂದರ್ಭದಲ್ಲಿ ನನಗೆ ಆರೋಗ್ಯದ ಸಮಸ್ಯೆ ಕಾರಣ ಪಾಲ್ಗೊಳ್ಳಲು ಸಾಧ್ಯವಾಗಿರಲಿಲ್ಲ. ಇದೀಗ ನಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ ಎಂದರು.

ಸ್ಪರ್ಧಿಗಳಿಗೆ ರಾಜಕಾರಣದ ಬಗ್ಗೆ ಶಿಕ್ಷಣ ನೀಡುತ್ತೇನೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸುವಂತೆ ನನ್ನ ಆಪ್ತರು ಸಲಹೆ ನೀಡಿದ್ದಾರೆ. ವೇದಿಕೆಯನ್ನು ಕ್ರಿಯಾಶೀಲವಾಗಿ ಬಳಸಿಕೊಳ್ಳುವ ಇಚ್ಛೆ ಇದೆ ಎಂದ ಅವರು, ಚುನಾವಣೆಗಳು ಸಮೀಪಿಸುತ್ತಿರುವುದರಿಂದ ಅದರಲ್ಲಿ ತೊಡಗಿಸಿಕೊಳ್ಳಬೇಕಾಗುತ್ತದೆ. ಹೀಗಾಗಿ ಹೆಚ್ಚು ದಿನಗಳನ್ನು ಬಿಗ್‍ಬಾಸ್‍ನಲ್ಲಿ ಕಳೆಯಲು ಸಾಧ್ಯವಿಲ್ಲ ಎಂದರು.

ಎಸ್.ಎಲ್.ಧರ್ಮೇಗೌಡ ಅವರ ನಿಧನದಿಂದ ಖಾಲಿ ಇರುವ ಸ್ಥಾನಕ್ಕೆ ನನಗೆ ಅವಕಾಶ ನೀಡುವಂತೆ ಪಕ್ಷದ ಮುಖಂಡರಿಗೆ ಮನವಿ ಮಾಡಿದ್ದೇನೆ. ಈ ವಿಷಯವನ್ನು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಗಮನಕ್ಕೂ ತಂದಿದ್ದೇನೆ. ಸುಪ್ರೀಂಕೋರ್ಟ್ ನ ಶಾಪದಿಂದ ವಿಮೋಚನೆ ಆಗಲು ಇದೊಂದು ಅವಕಾಶ ನೀಡಬೇಕು ಎಂದು ವಿಶ್ವನಾಥ್ ತಿಳಿಸಿದರು.

ಸರಕಾರದಲ್ಲಿ ನನಗೆ ಯಾವುದೇ ಜವಾಬ್ದಾರಿಯನ್ನು ನೀಡಿದರೂ ಸಮರ್ಥವಾಗಿ ನಿಭಾಯಿಸಲು ಸಿದ್ಧ. ನನಗೆ ಕನಿಷ್ಠ ಮೂರುವರೆ ವರ್ಷ ಅವಕಾಶ ನೀಡಬೇಕು ಎಂದು ಕೋರಿದ ವಿಶ್ವನಾಥ್, ನನಗೆ ಆಗಿರುವ ವ್ಯತ್ಯಾಸವನ್ನು ಸರಿಪಡಿಸಬೇಕೆಂದು ಇದೇ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News