ಸಿಎಂ ಬಿಎಸ್‍ವೈ ಸೇರಿ ಎಲ್ಲರೂ ನನ್ನ ಜ್ಯೂನಿಯರ್ ಗಳೇ: ಬಸನಗೌಡ ಪಾಟೀಲ್ ಯತ್ನಾಳ್

Update: 2021-03-01 16:59 GMT

ಬೆಂಗಳೂರು, ಮಾ.1: ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಸರಕಾರದಲ್ಲೇ ಮಂತ್ರಿ ಆಗಿ ನಾನು ಕೆಲಸ ಮಾಡಿದ್ದೇನೆ. ಮುಖ್ಯಮಂತ್ರಿ ಬಿಎಸ್‍ವೈ ಸೇರಿ ಎಲ್ಲರೂ ನನ್ನ ಜ್ಯೂನಿಯರ್ ಗಳೇ ಆಗಿದ್ದಾರೆ. ನಾನು ಇವರ ಯಾರ ಕಾಲು ಹಿಡಿಯೋ ಮಗನಲ್ಲ ಎಂದು ಮಾಜಿ ಕೇಂದ್ರ ಸಚಿವ, ಹಾಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಮತ್ತೆ ಗುಡುಗಿದ್ದಾರೆ.

ಸೋಮವಾರ ಫ್ರೀಡಂ ಪಾರ್ಕ್ ನಲ್ಲಿ ನಡೆಯುತ್ತಿರುವ ಪಂಚಮಸಾಲಿ ಮೀಸಲಾತಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೆಲವರು ತಲೆ ಹಿಡಿದು ಮಂತ್ರಿ ಹೇಗೆ ಆಗಿದ್ದಾರೆ ಎನ್ನುವುದರ ಬಗ್ಗೆ ನಾನು ನಾಳೆ ಮಾತನಾಡುತ್ತೇನೆ. ಊರಿಗೆ ಬಂದವಳು ನೀರಿಗೆ ಬರಲೇ ಬೇಕಾಗುತ್ತದೆ. ಎರಡು ವರ್ಷದ ಬಳಿಕವಾದರೂ ಊರಿಗೆ ಬರಲೇ ಬೇಕಾಗುತ್ತದೆ. ಆವಾಗ ನಾವು ಯಾರು ಎಂದು ತಿಳಿಸಬೇಕಾಗುತ್ತದೆ ಎಂದು ಹೇಳಿದರು.

ನಮ್ಮ ಹೋರಾಟ ಕೆಡಿಸೋಕೆ ಕೆಲವು ಸ್ವಾಮೀಜಿಗಳನ್ನು ಮುಂದೆ ಬಿಟ್ಟಿದ್ದರು. ಅವರು ನಮ್ಮನ್ನ ದಾರಿ ತಪ್ಪಿಸುವುದಕ್ಕೆ ಹೊರಟಿದ್ದರು. ಆದರೆ, ನಾವು ಎಚ್ಚೆತ್ತುಕೊಂಡಿದ್ದೇವೆ. ಇದರ ನಡುವೆ ನಮ್ಮ ಅಧಿಕಾರಿಗಳನ್ನೂ ಎತ್ತಿಬಿಟ್ಟರು. ಐಪಿಎಸ್ ಸಂದೀಪ್ ಪಾಟೀಲ್ ಜೈಲಿಗೆ ಹಾಕುವುದಕ್ಕೆ ಹೊರಟಿದ್ದರು. ನಾನು ಅವರಿಗೆ ನಮ್ಮನ್ನ ಮುಟ್ಟಿದರೆ ಹುಷಾರ್ ಎಂದು ಹೇಳಿದ್ದೆ. ನಮ್ಮ ಸಿಎಂ, ಪಿಎಂ ಅವರನ್ನೂ ಹೊರದಬ್ಬುತ್ತೇವೆ ಎಂದು ಹೇಳಿದ್ದೆ. ನಮ್ಮ ಅಧಿಕಾರಿಗಳನ್ನೇ ಬಿಟ್ಟು ನಮ್ಮ ಹಣಿಯೋಕೆ ಹೊರಟರು ಎಂದು ತಿಳಿಸಿದರು.

ಜ.14ರಿಂದ ಕೂಡಲಸಂಗಮದಿಂದ ಪಾದಯಾತ್ರೆ ಪ್ರಾರಂಭವಾಗಿ ಅಲ್ಲಿಂದ ಇಲ್ಲಿಗೆ ಬಂದು ಧರಣಿ ನಡೆದಿದೆ. ಮಳೆ, ಬಿಸಿಲು, ಗಾಳಿಗೆ ಹೆದರದೇ ಹೋರಾಟ ನಡೆಸಿದ್ದೇವೆ. ಸಮುದಾಯದ ಮಕ್ಕಳ ಭವಿಷ್ಯಕ್ಕಾಗಿ ಈ ಹೋರಾಟ ನಡೆಸಲಾಗುತ್ತಿದೆ. ಹರಿಹರಕ್ಕೆ ಪಾದಯಾತ್ರೆ ಬಂದ ಮೇಲೆ ದೊಡ್ಡ ಚಾಲೆಂಜ್ ಎದುರಾಗಿತ್ತು. ಹೋರಾಟ ತಡೆಯಲು ನಮ್ಮವರೇ ಪ್ರಯತ್ನ ಮಾಡಿದ್ದರು. ಹರಪ್ಪನಹಳ್ಳಿಯಲ್ಲೂ ಅವಮಾನ ಮಾಡಿದರು. ಆದರೂ ಎದೆಗುಂದದೆ ಹೋರಾಟ ನಡೆಯಿತು. ಹರಿಹರದಲ್ಲಿ ಸಂಗಮ ಆಗಿದ್ದರಿಂದ ಯಾವ ತಡೆಯೂ ನಿಲ್ಲಲಿಲ್ಲ. ಇಲ್ಲಿಯವರೆಗೆ ನಿರಾತಂಕವಾಗಿ ನಡೆದಿದೆ ಎಂದರು.

ಚನ್ನಪ್ಪ ಚನ್ನಗೌಡ, ಕುಂಬಾರ ಮಾಡಿದ ಕೊಡನವ್ವಾ ಎಂಬ ಹಾಡನ್ನು ಹಾಡುವ ಮೂಲಕ ಧರಣಿಗೆ ಮತ್ತಷ್ಟು ಶಕ್ತಿ ತುಂಬಿದರು.

ನಾನು ಅಲ್ಲಿ, ನೀವು ಇಲ್ಲಿ ಧರಣಿ ಮಾಡಿ

ನಾವು ಅಲ್ಲಿ ಧರಣಿ ಮಾಡುತ್ತೇವೆ. ನೀವು ಇಲ್ಲಿ ಧರಣಿ ಮಾಡಿ ಎಂದು ಹೇಳಿದ ಬಸನಗೌಡ ಯತ್ನಾಳ್ ಅವರು, ನಾನು ಅಲ್ಲಿಯೇ ರಾತ್ರಿ ಕೂಡ ಊಟ ಮಾಡಿ ಮಲಗುತ್ತೇನೆ. ಅದು ಹೇಗೆ ಹೊರಗೇ ಹಾಕುತ್ತಾರೆ ಎನ್ನುವುದನ್ನು ನಾನೂ ನೋಡುತ್ತೇನೆ ಎಂದು ತಿಳಿಸಿದರು.

‘ಪಂಚಮಸಾಲಿ ಸಮಾಜವನ್ನು ಪ್ರವರ್ಗ 2ಎಗೆ ಸೇರಿಸುವಂತೆ ಒತ್ತಾಯಿಸಿ ಮಾ.2ರಿಂದ ಪತ್ರ ಚಳುವಳಿಯನ್ನೂ ಪ್ರಾರಂಭಿಸಲು ಮುಂದಾಗಿದ್ದೇವೆ.’

- ಬಸವ ಜಯಮೃತ್ಯುಂಜಯ ಸ್ವಾಮೀಜಿ, ಕೂಡಲ ಸಂಗಮ ಪೀಠ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News