ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಇಂದಿನ ಅಗತ್ಯಗಳಿಗೆ ತಕ್ಕಂತೆ ರೂಪಗೊಂಡಿದೆ: ಸಚಿವ ಸುರೇಶ್ ಕುಮಾರ್

Update: 2021-03-01 17:32 GMT

ಧಾರವಾಡ, ಮಾ.1: ಶಿಕ್ಷಣ ತಜ್ಞರು ಬೇರು ಮಟ್ಟದಿಂದ ಅಧ್ಯಯನ ಮಾಡಿ, ಕ್ಷೇತ್ರ ಭೇಟಿ, ವಿವಿಧ ಗುಂಪುಗಳೊಂದಿಗೆ ಸಂವಾದ ಮೂಲಕ ಮಾಹಿತಿ ಸಂಗ್ರಹಿಸಿ, ದೀರ್ಘ ಅಧ್ಯಯನದ ಮೂಲಕ ರೂಪುಗೊಂಡಿರುವ ನೂತನ ರಾಷ್ಟ್ರೀಯ ಶಿಕ್ಷಣ ನೀತಿ-2020 ಇಂದಿನ ಅಗತ್ಯಗಳಿಗೆ ಪರಿಹಾರ ಸೂಚಿಸಲಿದೆ ಎಂದು ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.

ಸೋಮವಾರ ನಗರದ ಆಲೂರು ವೆಂಕಟರಾವ್ ಭವನದಲ್ಲಿ ರಾಜ್ಯ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘ ಆಯೋಜಿಸಿದ್ದ ‘ರಾಷ್ಟ್ರೀಯ ಶಿಕ್ಷಣ ನೀತಿ-2020’ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿಯು ಅನೇಕ ಸಮಸ್ಯೆ, ಗೊಂದಲಗಳಿಗೆ ಪರಿಹಾರ ಸೂಚಿಸಲಿದೆ. ಈ ಕುರಿತು ಚರ್ಚಿಸಿ ಕ್ರಮಕೈಗೊಳ್ಳಲು ವಿಧಾನ ಪರಿಷತ್ ಸದಸ್ಯ ಅರುಣ್ ಶಹಾಪುರ ನೇತೃತ್ವದಲ್ಲಿ ಒಂದು ತಂಡ ರಚಿಸಲಾಗಿದೆ. ರಾಜ್ಯ ಸರಕಾರ ಪದವಿ ಪೂರ್ವ ಮಹಾವಿದ್ಯಾಲಯಗಳಿಗೆ ನೂತನವಾಗಿ ಶಿಕ್ಷಕರ ನೇಮಕ ಮಾಡಿ ಅವರಿಗೆ ತರಬೇತಿ ಪೂರ್ಣಗೊಳಿಸಿದೆ. ಶಿಕ್ಷಣ ಇಲಾಖೆಗೆ ಅಗತ್ಯವಿರುವ ಎಲ್ಲ ಸುಧಾರಣಾ ಕ್ರಮಗಳನ್ನು ಕೈಗೊಳ್ಳುವುದಾಗಿ ಸುರೇಶ್ ಕುಮಾರ್ ತಿಳಿಸಿದರು.

ಮುಂದಿನ ಎರಡ್ಮೂರು ದಿನಗಳಲ್ಲಿ ಪಿ.ಯು. ಕಾಲೇಜುಗಳಿಗೆ ಅತಿಥಿ ಉಪನ್ಯಾಸಕರ ನೇಮಕ ನಡೆಯಲಿದೆ. ಅನುದಾನಿತ ಶಿಕ್ಷಣ ಸಂಸ್ಥೆಗಳಲ್ಲಿ ನಿವೃತ್ತಿ ಅಥವಾ ಆಕಸ್ಮಿಕವಾಗಿ ಸ್ಥಾನಗಳು ಖಾಲಿಯಾದರೆ ತಕ್ಷಣಕ್ಕೆ ಶಿಕ್ಷಕರನ್ನು, ಉಪನ್ಯಾಸಕರನ್ನು ನೇಮಿಸಲು ಸರಕಾರ ಕ್ರಮಕೈಗೊಂಡಿದೆ ಎಂದು ಅವರು ತಿಳಿಸಿದರು.

ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿದ್ದ ವಿಧಾನ ಪರಿಷತ್ ಸಭಾಪತಿ ಬಸವಾಜ ಹೊರಟ್ಟಿ ಮಾತನಾಡಿ, ರಾಷ್ಟ್ರೀಯ ಶಿಕ್ಷಣ ನೀತಿಯ ಅನುಷ್ಠಾನ ಪ್ರಾಮಾಣಿಕವಾಗಿ ಆಗಬೇಕು. ಶಿಕ್ಷಕರ ಸಮಸ್ಯೆಗಳಿಗೆ ಇಲಾಖೆ ತಕ್ಷಣ ಸ್ಪಂದಿಸುವ ಮೂಲಕ ಅವರ ವಿಶ್ವಾಸ ಹೆಚ್ಚಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಸ್.ವಿ.ಸಂಕನೂರ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಧಾನಪರಿಷತ್ ಸದಸ್ಯರಾದ ಅರುಣ್ ಶಹಾಪುರ, ಹನಮಂತ ನಿರಾಣಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕಿ ಆರ್.ಸ್ನೇಹಲ್, ಅಪರ ಆಯುಕ್ತ ಮೇಜರ್ ಸಿದ್ದಲಿಂಗಯ್ಯ ಹಿರೇಮಠ ಸೇರಿದಂತೆ ಪದವಿ ಪೂರ್ವ ಮಹಾವಿದ್ಯಾಲಯಗಳ ನೌಕರರ ಸಂಘದ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News