×
Ad

ಶಿವಮೊಗ್ಗ: ರಂಗಪಠ್ಯ- ಸಾಂಸ್ಕೃತಿಕ ಸಂವಾದ ಕಾರ್ಯಕ್ರಮ

Update: 2021-03-02 17:10 IST

ಶಿವಮೊಗ್ಗ: ಭಾರತದ ವಿದ್ಯಾರ್ಥಿಗಳು ಅತೀ ಬುದ್ಧಿವಂತರು ಎಂದು ರಂಗಕರ್ಮಿ ಹಾಗೂ ನಿವೃತ್ತ ಇಂಗ್ಲೀಷ್ ಪ್ರಾಧ್ಯಾಪಕ ಪ್ರೊ.ಎಸ್.ಗೌರಿಶಂಕರ್ ಹೇಳಿದರು.

ಕರ್ನಾಟಕ ಸಂಘದ ವತಿಯಿಂದ ಸಂಘದ ಭವನದಲ್ಲಿ ಆಯೋಜಿಸಿದ್ದ ರಂಗಪಠ್ಯ- ಸಾಂಸ್ಕೃತಿಕ ಸಂವಾದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.

ಜಗತ್ತಿನಲ್ಲಿ ಭಾರತದ ವಿದ್ಯಾರ್ಥಿಗಳು ಅತೀ ಬುದ್ಧಿವಂತರೆಂಬುದು ನಿಜ. ಏಕೆಂದರೆ ಇತರ ದೇಶಗಳ ವಿದ್ಯಾರ್ಥಿಗಳು ಯಾವುದೇ ಒಂದು ವಿಷಯಕ್ಕೆ ಸೀಮಿತವಾಗಿ ಯೋಚಿಸುತ್ತಾರೆ. ಆದರೆ ಭಾರತೀಯ ವಿದ್ಯಾರ್ಥಿಗಳು ಒಂದು ವಿಷಯದ ಸುತ್ತ ಇರುವ ಹಲವು ವಿಷಯಗಳನ್ನು ಗ್ರಹಿಸಿ, ಅನುಭವಿಸಿ ಯೋಚಿಸುತ್ತಾರೆ ಹಾಗಾಗಿ ಅವರು ಬುದ್ದಿವಂತರು ಎಂದು ವಿಶ್ಲೇಷಿಸಿದರು.

ಆದರೆ ಭಾರತೀಯರಿಗೆ ಕೀಳರಿಮೆ ಇದೆ. ವಿದ್ಯಾರ್ಥಿಗಳು ಈ ಕೀಳರಿಮೆಯಿಂದ ಹೊರಬರಬೇಕು ಅದರಲ್ಲೂ ತಮಗೆ ಇಂಗ್ಲೀಷ್ ಬರುವುದಿಲ್ಲ ಎಂಬ ಭಾವನೆ ಬೇಡ ಅದರ ಬದಲು ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಿ ಎಂದು ಸಲಹೆ ನೀಡಿದ ಅವರು ರಂಗಪಠ್ಯ ಎನ್ನುವುದು ಈಗ ಬದಲಾಗುತ್ತಿದೆ.

ಶೇಕ್ಸ್‌ಪಿಯರ್ ಸೇರಿದಂತೆ ಜಗತ್ತಿನ ಎಲ್ಲಾ ಹಳೆಯ ನಾಟಕಕಾರರ ನಾಟಕಗಳು ಎರಡೂ ವರೆ ಗಂಟೆಗಳ ಕಾಲ ಹಿಡಿದಿಡಬೇಕು ಎಂಬು ಸೂತ್ರದಲ್ಲಿ ರಚಿತವಾದವು. ಆದರೆ ಈಗ ಅಷ್ಟೊಂದು ಸಂಯಮದಿಂದ ನಾಟಕ ನೋಡುವ ತಾಳ್ಮೆ ಯಾರಿಗೂ ಇಲ್ಲ ಎಂದರು.

ಮುಖ್ಯ ಅತಿಥಿಯಾಗಿ ಮಾತನಾಡಿದ ಕರ್ನಾಟಕ ಸಂಘದ ಮಾಜಿ ಅಧ್ಯಕ್ಷೆ ವಿಜಯಶ್ರೀಧರ್ ಪಠ್ಯ ಸಾಮಾನ್ಯವಾಗಿ ಮರೆತುಹೋಗುತ್ತದೆ. ಆದರೆ ಪಠ್ಯ ಕುರಿತ ನಾಟಕಗಳು ಮಾತ್ರ ನೆನಪಿನ ಪುಟದಲ್ಲಿ ಉಳಿಯುತ್ತವೆ. ರಂಗ ಪಠ್ಯ ಮಾಡುವವರು ಪ್ರೇಕ್ಷಕರನ್ನು ಗಮನದಲ್ಲಿಟ್ಟುಕೊಂಡು ಮಾಡಿದರೆ ಉತ್ತಮ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕರ್ನಾಟಕ ಸಂಘದ ಅಧ್ಯಕ್ಷ ಹೆಚ್.ಡಿ.ಉದಯಶಂಕರ ಶಾಸ್ತ್ರಿ ವಹಿಸಿದ್ದರು. ಗೌರವ ಕಾರ್ಯದರ್ಶಿ ಪ್ರೊ.ಆಶುಲತಾ ಎಂ, ಡಾ.ಚನ್ನೇಶ್, ಡಾ.ಹಾಲಮ್ಮ ಮುಂತಾದವರಿದ್ದರು. ಶೀಲಾಸುರೇಶ್ ಕಾರ್ಯಕ್ರಮ ನಿರೂಪಿಸಿದರು. ನಂತರ ಕುವೆಂಪು ಅವರ ಜಲಗಾರ, ಸ್ಮಶಾನ ಕುರುಕ್ಷೇತ್ರ ನಾಟಕ ಕುರಿತು ಸಂವಾದ ಕಾರ್ಯಕ್ರಮ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News