ಸಚಿವ ರಮೇಶ್ ಜಾರಕಿಹೊಳಿಯವರದ್ದೆನ್ನಲಾದ ರಾಸಲೀಲೆ ವೀಡಿಯೋ ವೈರಲ್
ಬೆಂಗಳೂರು, ಮಾ.2: ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೊ ಬಹಿರಂಗಗೊಂಡಿದ್ದು, ಯುವತಿಗೆ ಉದ್ಯೋಗದ ಆಮಿಷವೊಡ್ಡಿ ನಿರಂತರ ಲೈಂಗಿಕ ಸಂಪರ್ಕ ಹೊಂದಿದ್ದರು ಎನ್ನುವ ಆರೋಪ ಸಂಬಂಧ ಇಲ್ಲಿನ ಕಬ್ಬನ್‍ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಮಂಗಳವಾರ ನಗರದ ಪೊಲೀಸ್ ಆಯುಕ್ತರ ಕಚೇರಿಗೆ ಭೇಟಿ ನೀಡಿದ ನಾಗರಿಕ ಹಕ್ಕು ಹೋರಾಟ ಸಮಿತಿಯ ದಿನೇಶ್ ಕಲ್ಲಹಳ್ಳಿ, ಸಚಿವ ರಮೇಶ್ ಜಾರಕಿಹೊಳಿ ಅವರು ಯುವತಿಯೊಬ್ಬಾಕೆಯನ್ನು ವಂಚಿಸಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆಂದು ಆರೋಪಿಸಿ, ಅದಕ್ಕೆ ಸಾಕ್ಷಿಯಾಗಿ ಸಿಡಿ ನೀಡಿ ದೂರು ಸಲ್ಲಿಸಿದರು.
ಬಳಿಕ ಆಯುಕ್ತರ ನಿರ್ದೇಶನದಂತೆ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಭೇಟಿ ನೀಡಿ ಲಿಖಿತ ದೂರು ಸಲ್ಲಿಸಿ, ಸಂತ್ರಸ್ತೆಗೆ ಪೊಲೀಸ್ ರಕ್ಷಣೆ ನೀಡುವಂತೆ ಕೋರಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದು ಸೂಕ್ಷ್ಮ ವಿಚಾರ, ಮಹಿಳೆಯ ವಿವರ ಬಹಿರಂಗಪಡಿಸಲು ಸಾಧ್ಯವಿಲ್ಲ. ಅವರ ಕುಟುಂಬ ಸದಸ್ಯರು ನನ್ನನ್ನು ಸಂಪರ್ಕಿಸಿದ್ದಾರೆ. ಅವರು ಹೋರಾಟ ಮಾಡಲು ಶಕ್ತರಲ್ಲ, ಹಾಗಾಗಿ ನನ್ನ ನೆರವು ಕೋರಿದ್ದಾರೆ ಎಂದರು.
ಸಂತ್ರಸ್ತೆಯ ಕಟುಂಬ ಸದಸ್ಯರು ಸೋಮವಾರ ‘ಸಿಡಿ’ ಕೊಟ್ಟಿದ್ದರು. ಸರಕಾರಿ ಉದ್ಯೋಗ ಕೊಡಿಸುವುದಾಗಿ ಹೇಳಿ ಸಚಿವರು ಲೈಂಗಿಕವಾಗಿ ಬಳಸಿದ್ದಾರೆ. ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡಿ ಎಂದು ಕೇಳಿದ್ದರು. ನಮ್ಮ ವಕೀಲರ ಜೊತೆ ಚರ್ಚಿಸಿ ‘ಸಿಡಿ’ ದಾಖಲೆ ಇರಿಸಿಕೊಂಡು ಸತ್ಯಾಸತ್ಯತೆ ಗೊತ್ತಾಗಲಿ, ತನಿಖೆಯಾಗಲಿ ಎಂದು ದೂರು ನೀಡಿದ್ದೇನೆ ಎಂದು ಅವರು ಮಾಹಿತಿ ನೀಡಿದರು.
ದೂರಿನಲ್ಲಿ ಏನಿದೆ?: ಸಚಿವ ರಮೇಶ್ ಜಾರಕಿಹೊಳಿ ಮಹಿಳೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ್ದಾರೆ. ಉತ್ತರ ಕರ್ನಾಟಕದ ಯುವತಿ ಆರ್‍ಟಿ ನಗರದಲ್ಲಿ ವಾಸವಿದ್ದು, ಕಿರುಚಿತ್ರ ನಿರ್ಮಾಣಕ್ಕೆ ಬಂದಾಗ ಕೆಪಿಟಿಸಿಎಲ್‍ನಲ್ಲಿ ಉದ್ಯೋಗ ಕೊಡಿಸುವ ಆಮಿಷವೊಡ್ಡಿ, ಲೈಂಗಿಕವಾಗಿ ಬಳಸಿಕೊಂಡಿದ್ದಾರೆ.
ನಂತರ ಉದ್ಯೋಗವನ್ನೂ ನೀಡದೆ ಲೈಂಗಿಕ ಕಿರುಕುಳ ನೀಡಿದ್ದು, ಇದರ ವಿಡಿಯೊ ಇದೆ ಎಂದಾಗ ಜೀವ ಬೆದರಿಕೆ ಹಾಕಿದ್ದಾರೆ. ಹಾಗಾಗಿ ಪ್ರಕರಣದ ತನಿಖೆ ನಡೆಸಬೇಕು ಮತ್ತು ಸಂತ್ರಸ್ತೆಯ ಕುಟುಂಬಕ್ಕೆ ರಕ್ಷಣೆ ಒದಗಿಸಬೇಕು ಎಂದು ದೂರಿನಲ್ಲಿ ದಿನೇಶ್ ಕಲ್ಲಹಳ್ಳಿ ಉಲ್ಲೇಖಿಸಲಾಗಿದೆ.
ದೂರುದಾರರ ವಿಚಾರಣೆ
ಆರೋಪ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದ್ದು, ಈ ಸಂಬಂಧ ಸಂತ್ರಸ್ತೆಯನ್ನು ವಿಚಾರಣೆ ನಡೆಸಲಾಗುವುದು.
-ಎಂ.ಎನ್.ಅನುಚೇತ್, ಡಿಸಿಪಿ, ಕೇಂದ್ರ ವಿಭಾಗ
ಬಿಜೆಪಿಯಲ್ಲಿ ಇದನ್ನು ಸಹಿಸಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಜಲಸಂಪನ್ಮೂಲ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆ ಪ್ರಕರಣದ ಕುರಿತು ಹುಬ್ಬಳ್ಳಿಯಲ್ಲಿ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ, ಈ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರವಾಗಿರುವ ಸುದ್ದಿಗಳನ್ನು ನೋಡಿದ್ದೇನೆ. ಅವರು ತಪ್ಪು ಮಾಡಿದ್ದರೆ ಖಂಡಿತವಾಗಿಯೂ ಪಕ್ಷದಿಂದ ಕ್ರಮ ಕೈಗೊಳ್ಳುತ್ತೇವೆ. ನಾಳೆ ದಿಲ್ಲಿಯಲ್ಲಿ ಪಕ್ಷದ ವರಿಷ್ಠರ ಜೊತೆಯೂ ಚರ್ಚಿಸುತ್ತೇವೆ. ನಮ್ಮದು ಶಿಸ್ತಿನ ಪಕ್ಷ. ಬಿಜೆಪಿಯಲ್ಲಿ ಇವೆಲ್ಲವನ್ನು ಸಹಿಸಿಕೊಳ್ಳುವುದಿಲ್ಲ. ಮುಖ್ಯಮಂತ್ರಿ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷರ ಜೊತೆಯೂ ಈ ಬಗ್ಗೆ ಮಾತುಕತೆ ನಡೆಸುತ್ತೇನೆ ಎಂದು ತಿಳಿಸಿದ್ದಾರೆ.
ಯುವ ಸಮುದಾಯಕ್ಕೆ ಉದ್ಯೋಗ ಕೊಡಿ ಎಂದರೆ ಉದ್ಯೋಗ ಕೇಳಿ ಬಂದವರಿಗೆ ನೀವು ಏನನ್ನು ಕೊಡಲು ಹೊರಟಿದ್ದೀರಿ ರಾಜ್ಯ ಬಿಜೆಪಿ? ಡಿಯರ್ ರಾಜ್ಯ ಬಿಜೆಪಿ, ನಿಮ್ಮವರೇ ನಿಮಗೆ ಬ್ಲಾಕ್‍ಮೇಲ್ ಜನತಾ ಪಾರ್ಟಿ ಹೆಸರು ಕೊಟ್ಟಿದ್ದು ಇದಕ್ಕೇನಾ? ಕಾಂಗ್ರೆಸ್ ಟ್ವೀಟ್ ಮೂಲಕ ಪ್ರಶ್ನಿಸಿದೆ.