ಆರೋಪಿಗಳ ವಿರುದ್ಧ ಒಂದು ವಾರದಲ್ಲಿ ಚಾರ್ಜ್‍ಶೀಟ್ ಸಲ್ಲಿಕೆ: ಹೈಕೋರ್ಟ್‍ಗೆ ಹೇಳಿಕೆ

Update: 2021-03-02 12:44 GMT

ಬೆಂಗಳೂರು, ಮಾ.2: ಕಲಬುರಗಿಯಲ್ಲಿ ಶೌಚಗುಂಡಿ(ಮ್ಯಾನ್‍ಹೋಲ್) ಸ್ವಚ್ಛಗೊಳಿಸುವಾಗ ಇಬ್ಬರು ಪೌರ ಕಾರ್ಮಿಕರು ಸಾವನ್ನಪ್ಪಿದ ಪ್ರಕರಣದಲ್ಲಿ ಆರೋಪಿಗಳ ವಿರುದ್ಧ ಒಂದು  ವಾರದಲ್ಲಿ ಚಾರ್ಜ್‍ಶೀಟ್ ಸಲ್ಲಿಸಲಾಗುವುದು ಎಂದು ರಾಜ್ಯ ಸರಕಾರ ಹೈಕೋರ್ಟ್‍ಗೆ ಮಾಹಿತಿ ನೀಡಿದೆ. 

ಮನುಷ್ಯರಿಂದ ಶೌಚಗುಂಡಿ(ಮ್ಯಾನ್‍ಹೋಲ್) ಸ್ವಚ್ಛಗೊಳಿಸುವ ಪದ್ಧತಿ ನಿಷೇಧ ಮತ್ತು ಪುನರ್ವಸತಿ ಕಾಯ್ದೆ-2013ರ ನಿಯಮಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಸರಕಾರಕ್ಕೆ ನಿರ್ದೇಶಿಸಲು ಕೋರಿ ಆಲ್ ಇಂಡಿಯಾ ಸೆಂಟ್ರಲ್ ಕೌನ್ಸಿಲ್ ಆಫ್ ಟ್ರೇಡ್ ಯೂನಿಯನ್‍ನ (ಎಐಸಿಸಿಟಿಯು) ಕರ್ನಾಟಕ ಘಟಕ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ (ಕೆಎಸ್‍ಎಲ್‍ಎಸ್‍ಎ) ಹೈಕೋರ್ಟ್‍ಗೆ 2020ರ ಜುಲೈನಲ್ಲಿ ಪ್ರತ್ಯೇಕವಾಗಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಹೈಕೋರ್ಟ್ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. 

ಸರಕಾರದ ಪರ ವಕೀಲರು ಪೀಠಕ್ಕೆ ಮಾಹಿತಿ ನೀಡಿ, ಕಲಬುರಗಿ ನಗರದಲ್ಲಿ ಜ.28ರಂದು ಮ್ಯಾನ್‍ಹೋಲ್‍ನಲ್ಲಿ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದರು. ಪ್ರಕರಣದ ಸಂಬಂಧ ಈಗಾಗಲೇ ತನಿಖೆ ಪೂರ್ಣಗೊಂಡಿದೆ. ಒಂದು ವಾರದಲ್ಲಿ ಆರೋಪಿಗಳ ವಿರುದ್ಧ ಚಾರ್ಜ್‍ಶೀಟ್ ಸಲ್ಲಿಸಲಾಗುವುದು ಎಂದು ಮಾಹಿತಿ ನೀಡಿದರು. ಹೇಳಿಕೆ ದಾಖಲಿಸಿಕೊಂಡ ಪೀಠ ವಿಚಾರಣೆಯನ್ನು ಮುಂದೂಡಿತು.

ಕಲಬುರಗಿಯ ಕೈಲಾಸ್‍ನಗರದಲ್ಲಿ ನಡೆದ ಘಟನೆಯಲ್ಲಿ ಲಾಲ್ ಅಹ್ಮದ್(25), ರಶೀದ್(30) ಎನ್ನುವವರು ಮೃತಪಟ್ಟಿದ್ದರು. ಕೈಲಾಸ್‍ನಗರದಲ್ಲಿ ಕೆಟ್ಟು ಹೋಗಿದ್ದ ಮ್ಯಾನಹೋಲ್ ದುರಸ್ತಿಗೆ ಇವರು ಮುಂದಾಗಿದ್ದರು. ಈಗಿರುವ ನಿಯಮಗಳ ಪ್ರಕಾರ ಒಳಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರನ್ನು ಇಳಿಸದೆ ಸಕಿಂಗ್ ಮೆಷಿನ್ ಬಳಸಬೇಕಿತ್ತು. ಆದರೆ, ಈ ಘಟನೆಯಲ್ಲಿ ಜಲಮಂಡಳಿಯವರೇ ಈ ಇಬ್ಬರು ಗುತ್ತಿಗೆ ಕಾರ್ಮಿಕರನ್ನು ಒಳಚರಂಡಿಗೆ ಇಳಿಯುವಂತೆ ಆಗ್ರಹಿಸಿದ್ದಾರೆಂಬ ಬಲವಾದ ಆರೋಪಗಳು ಕೇಳಿ ಬಂದಿದ್ದವು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News