ಬಲಿಷ್ಠ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ: ಸಚಿವ ಸಿ.ಪಿ.ಯೋಗೇಶ್ವರ್

Update: 2021-03-02 14:14 GMT

ಮೈಸೂರು: ಸಂವಿಧಾನದ ಪ್ರಕಾರ ಯಾರಿಗೆ ಮೀಸಲಾತಿ ಧಕ್ಕಬೇಕಿತ್ತೊ ಅವರಿಗೆ ಇನ್ನೂ ಸರಿಯಾಗಿ ಮೀಸಲಾತಿ ದೊರಕಿಲ್ಲ, ಅಂತಹದರಲ್ಲಿ ಬಲಿಷ್ಠ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದರಲ್ಲಿ ಅರ್ಥವಿಲ್ಲ ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವವರ ವಿರುದ್ಧ ಕಿಡಿಕಾರಿದರು.

ಎರಡು ದಿನಗಳ ಮೈಸೂರು ಪ್ರವಾಸ ಹಮ್ಮಿಕೊಂಡಿರುವ ಅವರು, ಮಂಗಳವಾರ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರ ಮನೆಗೆ ಭೇಟಿ ನೀಡಿ ಮಾತುಕತೆ ನಡೆಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಸಂವಿಧಾನದ ಪ್ರಕಾರ ಮೀಸಲಾತಿ ದೊರಕಬೇಕಿದ್ದ ಸಮುದಾಯಗಳಿಗೆ ಇನ್ನೂ ಮೀಸಲಾತಿ ದೊರಕಿಲ್ಲ, ಈ ಸಮಾಜದಲ್ಲಿ ಅನ್ಯಾಕ್ಕೊಳಗಾದ ಜನ‌ ಬಹಳಷ್ಟು ಮಂದಿ ಇದ್ದಾರೆ. ಅವರಿಗೆ ಮೊದಲು ಮೀಸಲಾತಿ ದೊರಕಬೇಕು, ಅಂತಹದರಲ್ಲಿ ಬಲಿಷ್ಠ ಸಮುದಾಯಗಳು ಮೀಸಲಾತಿಗಾಗಿ ಹೋರಾಟ ಮಾಡುತ್ತಿರುವುದು, ಶಕ್ತಿ ಪ್ರದರ್ಶನಕ್ಕೆ ಮುಂದಾಗಿರುವುದಕ್ಕೆ ನನ್ನ ವೈಯಕ್ತಿಕ ವಿರೋಧ ಇದೆ ಎಂದು ಹೇಳಿದರು.

ಜೆಡಿಎಸ್ ಪಕ್ಷ  ದಿನೇ ದಿನೇ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿದೆ. ಹಾಗಾಗಿ  ಕುಮಾರಸ್ವಾಮಿಯವರಿಗೆ ಭಯ ಕಾಡುತ್ತಿರಬೇಕು. ಅದಕ್ಕೆ ಅವರು ಏನೇನೊ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.

ಕುಮಾರಸ್ವಾಮಿ ನನ್ನ ತೇಜೊವದೆ ಮಾಡಬೇಕು ಎಂದು ಏನೇನೊ ಹೇಳಿಕೆ ಕೊಡುತ್ತಿದ್ದಾರೆ. ಅವರಿಗೆ ಎಲ್ಲೊ ಒಂದು ಕಡೆ ಭಯ ಕಾಡುತ್ತಿದೆ. ತಮ್ಮ ಅಸ್ಥಿತ್ವವನ್ನು ಉಳಿಸಿಕೊಳ್ಳಲಿಕ್ಕೆಹೋರಾಟ ಮಾಡುತ್ತಿದ್ದಾರೆ. ನಾನು ಐದು ಬಾರಿ ಚನ್ನಪಟ್ಟಣದಿಂದ ಆಯ್ಕೆಯಾಗಿದ್ದೇನೆ, ನನಗೂ ಅಲ್ಲಿ ಕಾರ್ಯಕರ್ತರು ಇದ್ದಾರೆ. ಅವರ ಹೋರಾಟ ಅವರಿಗೆ ನನ್ನ ಹೋರಾಟ ನನಗೆ ಕುಮಾರಸ್ವಾಮಿ ಅವರ ವೈಯಕ್ತಿಕ ಹೇಳಿಕೆಗಳಿಗೆ ಪ್ರತಿಕ್ರಿಯೆ ನೀಡುವುದಿಲ್ಲ ಎಂದು  ಹೇಳಿದರು.

ರಾಜಕೀಯವಾಗಿ ನಾನು ಕುಮಾರಸ್ವಾಮಿ ಅವರ ಸಿದ್ದಾಂತವನ್ನು ವಿರೋಧಿಸುತ್ತೇನೆ. ಯಾಕೆಂದರೆ ಪರಿಷತ್ ನಲ್ಲಿ ಬಿಜೆಪಿ ಜೊತೆಗೆ ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಮೈಸೂರಿನಲ್ಲಿ ಮೇಯರ್ ಆಯ್ಕೆಯಲ್ಲಿ ಕಾಂಗ್ರಸ್ ಜೊತೆ ಕೈಜೋಡಿಸುತ್ತಾರೆ. ಜೆಡಿಎಸ್ ನವರ ಇಬ್ಬಂದಿ ತನವನ್ನು ನಾನು ನನ್ನದೇ ಸಾಟಿಯಲ್ಲಿ ವಿಶ್ಲೇಷಣೆ ಮಾಡಿದ್ದೇನೆ. ಇದನ್ನು ಅವರು ತಪ್ಪು ಎನ್ನುವುದಾದರೆ ನಾನೇನು ಮಾಡಲು ಸಾಧ್ಯವಿಲ್ಲ ಎಂದರು.

ಜೆಡಿಎಸ್ ಹಳೆ ಮೈಸೂರು ಭಾಗದಲ್ಲಿ ಜನಾಭಿಪ್ರಾಯ ಕಳೆದುಕೊಳ್ಳುತ್ತಿದೆ. ಈ ಹಿಂದೆ ನಡೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ತುಮಕೂರಿನಲ್ಲಿ ಸೋತಿರುವುದೇ ಸಾಕ್ಷಿ. ನಮ್ಮ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದ ಮೇಲೆ ನಮ್ಮ ಮಂತ್ರಿಗಳ ಮನೆ ಬಾಗಿಲಿಗೆ ಅಲೆದಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಅವರಿಗೆ ಸಹಾಯ ಮಾಡುತ್ತಿರುವುದು ಗೊತ್ತು ಎಂದು ಹೇಳಿದರು.

ನಾನು ನಮ್ಮ ಪಕ್ಷದ ವರಿಷ್ಠರಿಗೆ ಹೇಳುವುದೇನೆಂದರೆ ಹಳೆ ಮೈಸೂರು ಭಾಗದಲ್ಲಿ ಬಿಜೆಪಿಗೆ ಹಿನ್ನಡೆ ಇದೆ. ಹಾಗಾಗಿ ಪಕ್ಷ ಕಟ್ಟಲು ಪ್ರಯತ್ನಿಸಿ ಅದು ಬಿಟ್ಟು ಕುಮಾರಸ್ವಾಮಿ ಜೊತೆಗೆ ಏಕೆ ಕೈಜೋಡಿಸಬೇಕು ಎಂದರು.

ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಬಗ್ಗೆ ನನಗೆ ವೈಯಕ್ತಿಕ ದ್ವೇಷ ಏನೂ ಇಲ್ಲ, ರಾಜಕೀಯ ತಕ್ಕಂತೆ ಸಂಧರ್ಭಕ್ಕೆ ತಕ್ಕಂತೆ ಕೆಲವು ವೈಯಕ್ತಿಕ ಟೀಕೆಗಳನ್ನು ಮಾಡಿರಬಹುದು, ನಾನು ಯಾವುದನ್ನು ಮನಸ್ಸಿನಲ್ಲಿ ಇಟ್ಟುಕೊಂಡಿಲ್ಲ, ಅವರನ್ನು ಭೇಟಿಯಾಗುವ ಸಂದರ್ಭ ಬಂದರೆ ಭೇಟಿಯಾಗುತ್ತೇನೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕೇಂದ್ರ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಇಬ್ಭಾಗವಾಗಿದ್ದು ಇದರ ಲಾಭವನ್ನು ಬಿಜೆಪಿ ಪಡೆದುಕೊಳ್ಳಬೇಕು ಎಂದು ಕಾರ್ಯಕರ್ತರಿಗೆ  ಹೇಳಿದ್ದೇನೆ. ರಾಜ್ಯದಲ್ಲಿ ಡಿ.ಕೆ.ಶಿವಕುಮಾರ್ ಬಣ ಸಿದ್ದರಾಮಯ್ಯ ಬಣ ಎಂಬಂತಾಗಿದ್ದು, ಬಿಜೆಪಿ ಎಲ್ಲಾ ಕಡೆ ಒಗ್ಗಟ್ಟಾಗಿ ಕೆಲಸ ಮಾಡಿದರೆ ಮುಂಬರುವ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಪಡೆಯಬಹುದು ಎಂದು ಹೆಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News