ಸತತ ಸೋಲಿನಿಂದ ರಾಹುಲ್ ಗಾಂಧಿಗೆ ಬುದ್ಧಿ ಭ್ರಮಣೆಯಾಗಿದೆ: ಸಂಸದೆ ಶೋಭಾ

Update: 2021-03-02 14:42 GMT

ಚಿಕ್ಕಮಗಳೂರು, ಮಾ.2: ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಸತತ ಸೋಲಿನಿಂದಾಗಿ ಬುದ್ಧಿ ಭ್ರಮಣೆಯಾಗಿದ್ದು, ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ಬ್ರಿಟಿಷರ ವಿರುದ್ಧ ಹೋರಾಟ ಮಾಡಿ ಓಡಿಸಿದ್ದೇವೆ, ಬಿಜೆಪಿ ಯಾವ ಲೆಕ್ಕ ಎಂದು ಹೇಳಿಕೆ ನೀಡಿರುವ ರಾಹುಲ್ ಗಾಂಧಿ ಅವರಿಗೂ ಚಿಕಿತ್ಸೆಯ ಅಗತ್ಯವಿದೆ ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ.

ಮಂಗಳವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬ್ರಿಟಿಷರನ್ನು ಹೋರಾಟ ಮಾಡಿ ಓಡಿಸಿದ್ದೀವಿ, ಬಿಜೆಪಿ ಯಾವ ಲೆಕ್ಕ ಎಂದಿರುವ ರಾಹುಲ್ ಗಾಂಧಿಯವರ ಇಂತಹ ಧೋರಣೆಯಿಂದಾಗಿ ಕಾಂಗ್ರೆಸ್ ದೇಶಾದ್ಯಂತ ಪ್ರಸಕ್ತ ನೆಲಸಮವಾಗಿದೆ. ರಾಹುಲ್ ಗಾಂಧಿ ಚುನಾವಣೆ ಸಂದರ್ಭದಲ್ಲಿ ನಾನಾ ನಾಟಕವಾಡುತ್ತಾರೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಅಮಿತ್‍ಶಾ ಕಾಂಗ್ರೆಸ್ ಪಕ್ಷವನ್ನು ನೆಲಕಚ್ಚುವಂತೆ ಮಾಡಿದ್ದಾರೆ. ಕಾಂಗ್ರೆಸ್ ಲೋಕಸಭೆಯಲ್ಲಿ ಅಧಿಕೃತ ವಿರೋಧ ಪಕ್ಷವಾಗಿಯು ಉಳಿದುಕೊಂಡಿಲ್ಲ. ದುರಾಡಳಿತ, ಭ್ರಷ್ಟಚಾರ, ಸ್ವಜನಪಕ್ಷಪಾತ ವಂಶ ಆಡಳಿತಕ್ಕೆ ಬೇಸತ್ತ ಜನರು ಕಾಂಗ್ರೆಸ್‍ ಅನ್ನು ಸರ್ವನಾಶ ಮಾಡಿದ್ದಾರೆ. ಸತತ ಸೋಲಿನ ಹತಾಶೆಯಿಂದ ಬುದ್ಧಿ ಭ್ರಮಣೆಯಾದಂತೆ ರಾಹುಲ್ ಗಾಂಧಿ ಮಾತನಾಡುತ್ತಿದ್ದಾರೆ. ಅವರಿಗೆ ಚಿಕಿತ್ಸೆಯ ಅಗತ್ಯವಿದೆ. ರಾಹುಲ್‍ಗಾಂಧಿ ಎಲ್ಲೆಲ್ಲಿ ಹೋಗುತ್ತಾರೋ ಅಲ್ಲಿನ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲುತ್ತದೆ ಎಂದರು.

ಕಾಂಗ್ರೆಸ್‍ಗೆ ದಿಲ್ಲಿ ಮತ್ತು ರಾಜ್ಯದಲ್ಲಿ ನಾಯಕರಿಲ್ಲ. ಇರುವ ಚಿಕ್ಕಪುಟ್ಟ ನಾಯಕರು ಕುರ್ಚಿಗಾಗಿ ಕಾದಾಡುತ್ತಿದ್ದಾರೆ. ದೊಡ್ಡವರು ಪಟ್ಟ ಮತ್ತು ನಾಯಕತ್ವಕ್ಕಾಗಿ ಕಾದಾಡುತ್ತಿರುವುದಕ್ಕೆ ಮೈಸೂರು ಪಾಲಿಕೆ ಚುನಾವಣೆ ಸ್ಪಷ್ಟ ಉದಾಹರಣೆ. ಸಿದ್ದರಾಮಯ್ಯ ಅವರ ಆಡಳಿತದಿಂದ ಬೇಸತ್ತ ಜನರು ಅವರನ್ನು ತಿರಸ್ಕರಿಸಿದ್ದಾರೆ. ಮುಂದಿನ ದಿನಗಳಲ್ಲಿ ದೇಶ ಮತ್ತು ರಾಜ್ಯದಲ್ಲಿ ಬಿಜೆಪಿಯೇ ಅಧಿಕಾರ ಹಿಡಿಯಲಿದೆ. ಕಾಂಗ್ರೆಸ್‍ನವರು ಆಗಲೂ ಕಿತ್ತಾಡುತ್ತಲೇ ಇರುತ್ತಾರೆ ಎಂದು ವ್ಯಂಗ್ಯವಾಡಿದರು.

ಶೃಂಗೇರಿ ಬಾಲಕಿ ಅತ್ಯಾಚಾರ ಪ್ರಕರಣ ಬೆಳಕಿಗೆ ಬಂದಾಗ ನಾನು  ತಪ್ಪಿತಸ್ಥರನ್ನು ತಕ್ಷಣ ಬಂಧಿಸುವಂತೆ ಜಿಲ್ಲಾಡಳಿತಕ್ಕೆ ಮತ್ತು ಪೊಲೀಸ್ ಇಲಾಖೆಗೆ ತಿಳಿಸಿದ್ದೆ. ಅದರಂತೆ ಹಲವರ ಬಂಧನವಾಗಿದೆ. ಅವರಿಗೆ ಉಗ್ರ ಶಿಕ್ಷೆಯಾಗಬೇಕು ಎಂಬುದು ನನ್ನ ಆಗ್ರಹವಾಗಿದೆ. ಈ ಘಟನೆ ಸಂಬಂಧ ನನ್ನ ವಿರುದ್ಧ ಆರೋಪ ಮಾಡುವರು ಮಾಡುತ್ತಲೇ ಇರುತ್ತಾರೆ. ಏನೂ ಮಾಡಕ್ಕಾಗಲ್ಲ. ಈ ಘಟನೆ ಬಗ್ಗೆ ನಾನು ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇನೆ.
- ಶೋಭಾ ಕರಂದ್ಲಾಜೆ, ಸಂಸದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News