ಮಾ.4 ರಿಂದ ವಿಧಾನ ಪರಿಷತ್ ಅಧಿವೇಶನ: ಬಸವರಾಜ ಹೊರಟ್ಟಿ

Update: 2021-03-02 14:50 GMT

ಬೆಂಗಳೂರು, ಮಾ.2: ಪ್ರಸಕ್ತ ಸಾಲಿನ ಬಜೆಟ್ ಅಧಿವೇಶನವು ಮಾ.4 ರಿಂದ 31ರವರೆಗೆ ನಡೆಯಲಿದ್ದು, ಮಾ.8ರಂದು ಮುಖ್ಯಮಂತ್ರಿ 2021-22ನೆ ಸಾಲಿನ ಬಜೆಟ್ ಮಂಡನೆ ಮಾಡಲಿದ್ದಾರೆ ಎಂದು ವಿಧಾನಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದರು.

ಮಂಗಳವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಜಾ ದಿನಗಳನ್ನು ಹೊರತುಪಡಿಸಿ ಒಟ್ಟಾರೆ 19 ದಿನಗಳು ಅಧಿವೇಶನ ನಡೆಯಲಿದೆ. ಅಧಿವೇಶನದಲ್ಲಿ ಮಂಡಿಸುವ ಸಲುವಾಗಿ ಒಟ್ಟು 496 ಪ್ರಶ್ನೆಗಳು ಬಂದಿವೆ. 45 ಚುಕ್ಕೆ ಗುರುತಿನ ಪ್ರಶ್ನೆಗಳು, 265 ಚುಕ್ಕೆ ರಹಿತ ಪ್ರಶ್ನೆಗಳು ಹಾಗೂ ನಿಯಮ 72ರಡಿ 5 ಸೂಚನೆಗಳು ಸ್ವೀಕೃತಗೊಂಡಿವೆ ಎಂದು ಮಾಹಿತಿ ನೀಡಿದರು.

ಕರ್ನಾಟಕ ವಿಧಾನ ಪರಿಷತ್ತಿನ ಕಾರ್ಯವಿಧಾನ ಮತ್ತು ನಡವಳಿಕೆಯ ನಿಯಮಗಳಿಗನ್ವಯ ಅಧಿವೇಶನ ನಡುವಿನ ಅವಧಿಯಲ್ಲಿ ಸೂಚನಾ ಪತ್ರಗಳನ್ನು ಪಡೆದು ಹಾಗೂ ಸದಸ್ಯರು ನೀಡಿರುವ ಪ್ರಶ್ನೆಗಳನ್ನು ಉಪವೇಶನಕ್ಕೆ ಪರಿಗಣಿಸಲಾಗುವುದು. ದಿನವೊಂದಕ್ಕೆ ಗರಿಷ್ಠ ಐದು ಪ್ರಶ್ನೆಗಳನ್ನು ನೀಡಲು ಸದಸ್ಯರಿಗೆ ಅವಕಾಶವಿರುತ್ತದೆ. ಸೂಚನಾ ಪತ್ರಗಳಿಗೆ ಬೇಕಾಗುವ ಕಾಲಾವಧಿ ಹಾಗೂ ಅದರ ಕಾರ್ಯವಿಧಾನಗಳಿಗೆ ಅನುಸಾರ ನಡೆಸಲಾಗುವುದು ಎಂದು ಅವರು ಹೇಳಿದರು.

ಹೊಸದಿಲ್ಲಿಯ ಪಿ.ಆರ್.ಎಸ್ ಶಾಸನ ಸಂಶೋಧನಾ ಸಂಸ್ಥೆ ವತಿಯಿಂದ ಮಾ.3ರಂದು ಬೆಳಗ್ಗೆ 10.30ಕ್ಕೆ ವಿಕಾಸಸೌಧದ ನಾಲ್ಕನೇ ಮಹಡಿಯಲ್ಲಿ ವಿಧಾನಮಂಡಲದ ಎಲ್ಲ್ಲ ಶಾಸಕರಿಗೆ ಆಯವ್ಯಯ ಮತ್ತು ರಾಜ್ಯ ಹಣಕಾಸು (Budget and State Finances) ವಿಷಯ ಕುರಿತು ಒಂದು ದಿನದ ತರಬೇತಿ ಕಾರ್ಯಗಾರವನ್ನು ಆಯೋಜಿಸಲಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

ಈ ಕಾರ್ಯಾಗಾರದಲ್ಲಿ, ಬಜೆಟ್ ಪರಿಕಲ್ಪನೆಯನ್ನು ಅರ್ಥಮಾಡಿಕೊಳ್ಳುವ ಕುರಿತು, ರಾಜ್ಯದ ಹಣಕಾಸಿನ ವ್ಯವಸ್ಥೆ ಹಾಗೂ ಕರ್ನಾಟಕ ಹಣಕಾಸು ಕೇಂದ್ರ ಬಜೆಟ್ ಮತ್ತು 15ನೇ ಹಣಕಾಸು ಆಯೋಗದ ಶಿಫಾರಸ್ಸುಗಳ ಮೇಲೆ ಪರಿಣಾಮ ಬೀರುವ ಕುರಿತು ಎಲ್ಲ ಶಾಸಕರಿಗೆ ತರಬೇತಿ ನೀಡಲಾಗುವುದು ಎಂದು ಅವರು ಹೇಳಿದರು.

ಕೋವಿಡ್–19ಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಹುತೇಕ ಎಲ್ಲ ಸದಸ್ಯರು ಲಸಿಕೆಯನ್ನು ಪಡೆದಿದ್ದಾರೆ, ಅದಾಗ್ಯೂ ಕೋವಿಡ್-19 ಪರೀಕ್ಷೆ ಮಾಡಿಸಿಕೊಳ್ಳಬಯಸುವವರಿಗಾಗಿ ವಿಧಾನಸೌಧದ ಬ್ಯಾಂಕ್ವೆಟ್ ಸಭಾಂಗಣದಲ್ಲಿ ಒಂದು ಘಟಕವನ್ನು ತೆರೆಯಲಾಗುವುದು ಎಂದು ಅವರು ತಿಳಿಸಿದರು.

ಸದನದ ಒಳಗೆ ಮೊಬೈಲ್ ಬಳಸಲು ಅವಕಾಶವಿಲ್ಲ. ಸದನಕ್ಕೆ ಆಗಮಿಸುವ ಎಲ್ಲರೂ ತಮ್ಮ ಮೊಬೈಲ್‍ಗಳನ್ನು ಸದನದ ಹೊರ ಭಾಗದಲ್ಲಿ ಇಡಲು ವ್ಯವಸ್ಥೆ ಮಾಡಲಾಗಿದೆ. ಸದನದ ಕಾರ್ಯಕಲಾಪಗಳು ಸುಗಮವಾಗಿ ನಡೆಸುವ ಹಿತದೃಷ್ಟಿಯಿಂದ ಇಂದು ಹಿಂದಿನ 8 ಮಂದಿ ಮಾಜಿ ಸಭಾಪತಿಗಳನ್ನು ಸಭೆಗೆ ಆಹ್ವಾನಿಸಿದ್ದು, ಅವರು ನೀಡುವ ಸಲಹೆ, ಸೂಚನೆ, ಮಾರ್ಗದರ್ಶನಗಳನ್ನು ಪರಿಗಣಿಸಲಾಗುವುದು. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡಲಾಗುವುದಿಲ್ಲ ಎಂದು ಸಭಾಪತಿ ತಿಳಿಸಿದರು.

ಸಚಿವಾಲಯದ ಅಧಿಕಾರಿ, ಸಿಬ್ಬಂದಿಗಳ ಸಕಾಲದ ಹಾಜರಾತಿಗಾಗಿ ಸಚಿವಾಲಯದಲ್ಲಿ ಬಯೋಮೆಟ್ರಿಕ್ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಯಾವುದೇ ಅಧಿಕಾರಿ, ಸಿಬ್ಬಂದಿ ಹೊರಗಡೆ ಹೋಗಬೇಕಾದಲ್ಲಿ ಚಲನವಲನ ವಹಿಯಲ್ಲಿ ನಮೂದಿಸಿ ತೆರಳಬೇಕು. ಅದಕ್ಕಾಗಿ ಎಲ್ಲ ಶಾಖೆಗಳಲ್ಲಿ ಚಲನವಲನ ವಹಿಗಳನ್ನು ಇಡಲು ಸೂಚಿಸಲಾಗಿದೆ. ಹಾಗೂ ಸಿ.ಸಿ.ಟಿವಿ ಕ್ಯಾಮರಗಳನ್ನು ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ಬಸವರಾಜ ಹೊರಟ್ಟಿ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News