ಎಫ್‍ಡಿಎ ಪರೀಕ್ಷೆಯಲ್ಲಿ ಕೆಲವರಿಗೆ ಅನುಕೂಲ: ಕಸಂಸ ಆರೋಪ
ಬೆಂಗಳೂರು, ಮಾ.2: ಇತ್ತೀಚಿಗೆ ನಡೆದ ಪ್ರಥಮದರ್ಜೆ ಸಹಾಯಕ (ಎಫ್‍ಡಿಎ) ನೇಮಕಾತಿ ಪರೀಕ್ಷೆಯ ಪ್ರಶ್ನೆಯಲ್ಲಿ ವಿಜ್ಞಾನ ವಿದ್ಯಾರ್ಥಿಗಳಿಗೆ ಮಾತ್ರ ಅನುಕೂಲಕರವಾಗಿತ್ತು ಎಂದು ಕನ್ನಡ ಸಂಘರ್ಷ ಸಮಿತಿ ಆರೋಪಿಸಿದೆ ತಿಳಿಸಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಮಿತಿ ಅಧ್ಯಕ್ಷ ಡಾ.ಕೋ.ವೆಂ.ರಾಮಕೃಷ್ಣೇಗೌಡ, ಕೆಪಿಎಸ್ಸಿ ಫೆ.28ರಂದು ನಡೆಸಿದ ಪ್ರಥಮದರ್ಜೆ ಸಹಾಯಕ (ಎಫ್‍ಡಿಎ) ಪರೀಕ್ಷೆಯಲ್ಲಿ ವಿಜ್ಞಾನ ವಿಷಯಕ್ಕೆ ಸಂಬಂಧಿಸಿದ ಐವತ್ತಕ್ಕೂ ಅಧಿಕ ಪ್ರಶ್ನೆಗಳನ್ನು ಸಾಮಾನ್ಯಜ್ಞಾನ ಪತ್ರಿಕೆಯಲ್ಲಿ ಕೇಳಲಾಗಿತ್ತು ಎಂದು ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಹೇಳಿದ್ದು, ಇದು ನಿಜವಾಗಿದ್ದರೆ, ಇದೊಂದು ಸಂವಿಧಾನ ವಿರೋಧಿ ನಡೆ ಎಂದು ಟೀಕಿಸಿದ್ದಾರೆ.
ಅಲ್ಲದೆ, ಪರೀಕ್ಷೆಯು ವಿಜ್ಞಾನದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂದೇ ಪ್ರಶ್ನೆಪತ್ರಿಕೆಯನ್ನು ಸಿದ್ಧಪಡಿಸಿ ಮಾನವಿಕ ವಿಷಯಗಳನ್ನು ಓದಿರುವ ಕನ್ನಡ ಮಾಧ್ಯಮ, ಗ್ರಾಮೀಣ, ದಲಿತ, ಹಿಂದುಳಿದ ಅಭ್ಯರ್ಥಿಗಳ ಉದ್ಯೋಗದ ಕನಸಿನ ಬಾಗಿಲುಗಳನ್ನು ಮುಚ್ಚುವ ಹುನ್ನಾರವಾಗಿದೆ.
ಬಿಇಡಿ ಪ್ರವೇಶಕ್ಕೆ ಬಿಇ ಓದಿದವರಿಗೆ ಅನುಕೂಲ ಮಾಡಿಕೊಡುವ ಏಕಪಕ್ಷೀಯ ತೀರ್ಮಾನ ತೆಗೆದುಕೊಂಡ ಸರಕಾರ, ಪ್ರಥಮದರ್ಜೆ ಸಹಾಯಕರ ನೇಮಕಾತಿ ಪರೀಕ್ಷೆಯಲ್ಲೂ ಅದೇ ಮಾರ್ಗ ಹಿಡಿದಿರುವುದು ಸ್ಪಷ್ಟವಾಗುತ್ತದೆ. ಇದು ಕನ್ನಡ ಮಾಧ್ಯಮದಲ್ಲಿ ಓದಿದ, ಸರಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡಿರುವ ಅಭ್ಯರ್ಥಿಗಳಿಗೆ ಮಾಡಿರುವ ತಾರತಮ್ಯವಾಗಿದ್ದು, ರಾಜ್ಯ ಸರಕಾರ ಇದನ್ನು ಗಂಭೀರವಾಗಿ ಪರಿಗಣಿಸಿ, ಸಮಸ್ಯೆ ದೂರಗೊಳಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.