ಶೀಘ್ರದಲ್ಲಿ ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ಕಡೆ ಹೆಲಿ ಟೂರಿಸಂ ಆರಂಭ: ಸಚಿವ ಸಿ.ಪಿ.ಯೋಗೇಶ್ವರ್

Update: 2021-03-02 17:59 GMT

ಮೈಸೂರು,ಮಾ.2: ಅತೀ ಶೀಘ್ರದಲ್ಲಿ ಮೈಸೂರು ಸೇರಿದಂತೆ ರಾಜ್ಯದ ನಾಲ್ಕು ಕಡೆಗಳಲ್ಲಿ  ಹೆಲಿ ಟೂರಿಸಂ ಆರಂಭ ಮಾಡಲಾಗುವುದು ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ತಿಳಿಸಿದರು.

ನಗರದ ಖಾಸಗಿ ಹೋಟೆಲ್‍ನಲ್ಲಿ ಮಂಗಳವಾರ ಮೈಸೂರು ಪ್ರವಾಸಿಗರ ಅನುಕೂಲಕ್ಕಾಗಿ ನೂತನ ಲಂಡನ್ ಮಾದರಿಯ ಡಬ್ಬಲ್ ಡೆಕ್ಕರ್ ಬಸ್‍ಗೆ ಚಾಲನೆ ನೀಡಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.

ಮೈಸೂರಿನ ಘತ ವೈಭವವನ್ನು ಮತ್ತಷ್ಟು ಹೆಚ್ಚಿಸಿ ದೇಶ ವಿದೇಶದಿಂದ ಬರುವ ಪ್ರವಾಸಿಗರ ಅನುಕೂಲಕ್ಕೆ ಇನ್ನೂ ಮೂರು ತಿಂಗಳಲ್ಲಿ ಹೆಲಿಟೂರಿಸಂ ಅನ್ನು ಲಲಿತ್ ಮಹಲ್ ಹೋಟೆಲ್ ಮುಂಭಾಗದಲ್ಲಿರುವ ಪ್ರವಾಸೋಧ್ಯಮ ಇಲಾಖೆಗೆ ಸೇರಿದ ಜಾಗದಲ್ಲಿ ಹೆಲಿಕ್ಯಾಪ್ಟರ್ ಟರ್ಮಿನಲ್ ಪ್ರಾರಂಭ ಮಾಡಲಾಗುವುದು. ಇಲ್ಲಿಂದ ಅನೇಕ ಸ್ಥಳಗಳಿಗೆ ಸುರಕ್ಷಿತವಾಗಿ ಕರೆದುಕೊಂಡು ಹೋಗಿ ಆನಂದಿಸಿ ಮತ್ತೆ ವಾಪಸ್ ಮೈಸೂರಿಗೆ ಕರೆತರಲಾಗುವುದು ಎಂದು ಹೇಳಿದರು.

ಹೆಲಿಕ್ಯಾಪ್ಟರ್ ಟರ್ಮಿನಲ್ ನಲ್ಲಿ ನಾಲ್ಕು ಹೆಲಿಕ್ಯಾಪ್ಟರ್‍ಗಳು ಪ್ರವಾಸಿಗರಿಗೆ ದೊರಕಲಿದ್ದು, ರಾಜ್ಯದ ಮೈಸೂರು, ಮಂಗಳೂರು, ಹಂಪಿ ಮತ್ತು ಜೋಗ್ ಜಲಪಾತ ಸೇರಿದಂತೆ ಮೊದಲಿಗೆ ನಾಲ್ಕು ಕಡೆಗಳಲ್ಲಿ ಹೆಲಿಟೂರಿಸಂ ಆರಂಭ ಮಾಡಲಾಗುವುದು.

ಪ್ರವಾಸಿಗರನ್ನು ಹೆಚ್ಚು ಸೆಳೆಯುವ ಹಿನ್ನಲೆಯಲ್ಲಿ ಮೈಸೂರಿನ ವಸ್ತುಪ್ರದರ್ಶನದ ಆವರಣದಲ್ಲಿ 165 ಕೋಟಿ ವೆಚ್ಚದಲ್ಲಿ  365 ದಿನವೂ ವಸ್ತುಪ್ರದರ್ಶನ ಏರ್ಪಡಿಸಲಾಗುವುದು. ಮೈಸೂರನ್ನು ಕೇಂದ್ರವಾಗಿಟ್ಟುಕೊಂಡು ಹತ್ತು ಹಲವು ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಹೇಳಿದರು.

ಮೈಸೂರು ಸೇರಿದಂತೆ ಜಿಲ್ಲೆಯ ಅನೇಕ ಸ್ಥಳಗಳನ್ನು ಪ್ರವಾಸಿ ಕೇಂದ್ರಗಳಾಗಿ ಅಭಿವೃದ್ಧಿಪಡಿಸಲು ಚಿಂತಿಸಲಾಗಿದ್ದು, ಈ ಸಂಬಂಧ ಅಧಿಕಾರಿಗಳ ಸಭೆಯಲ್ಲಿ ಚರ್ಚೆ ಮಾಡಲಾಗುವುದು ಎಂದು ಹೇಳಿದರು.

ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ರೂಪ್‍ವೇ ನಿರ್ಮಾಣ ಮಾಡಲಾಗುವುದು. ಇದಕ್ಕೆ ವಿರೋಧ ಮಾಡುತ್ತಿರುವ ಪರಿಸರವಾದಿಗಳನ್ನು ಮನವೊಲಿಸಿ ಹೊಸ ತಂತ್ರಜ್ಞಾನದೊಂದಿಗೆ ಈ ಯೋಜನೆ ಜಾರಿ ಮಾಡಲಾಗುವುದು. ಚಾಮುಂಡಿ ಬೆಟ್ಟದಲ್ಲಿ ರೂಪ್ ವೇ ಆಗಬೇಕು ಎಂದು ಹಲವು ವರ್ಷಗಳಿಂದ ಬೇಡಿಕೆ ಇತ್ತು ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News