×
Ad

ಪರಮವೀರ-ಅಶೋಕ ಚಕ್ರ ಪ್ರಶಸ್ತಿ ಪುರಸ್ಕೃತರ ಗೌರವಧನ ಒಂದು ಕೋಟಿ ರೂ.ಗೆ ಹೆಚ್ಚಳ: ಸಿಎಂ ಯಡಿಯೂರಪ್ಪ

Update: 2021-03-02 23:44 IST

ಬೆಂಗಳೂರು, ಮಾ.2: ಪರಮವೀರ ಹಾಗೂ ಅಶೋಕ ಚಕ್ರ ಪ್ರಶಸ್ತಿಯನ್ನು ಪಡೆಯುವ ರಾಜ್ಯದ ಯೋಧರಿಗೆ ನೀಡುವ ಗೌರವ ಧನದ ಮೊತ್ತವನ್ನು 25 ಲಕ್ಷ ರೂ.ಗಳಿಂದ ಒಂದು ಕೋಟಿ ರೂ.ಗಳಿಗೆ ಹೆಚ್ಚಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಘೋಷಿಸಿದ್ದಾರೆ.

1971ರಲ್ಲಿ ನಡೆದ ಭಾರತ-ಪಾಕಿಸ್ತಾನದ ನಡುವಿನ ಯುದ್ಧದ 50ನೆ ವರ್ಷಾಚರಣೆಯ ಅಂಗವಾಗಿ ಆಚರಿಸಲಾಗುತ್ತಿರುವ ಸ್ವರ್ಣ ವಿಜಯ ದಿವಸ್ ಪ್ರಯುಕ್ತ ದೇಶದೆಲ್ಲೆಡೆ ಸಂಚರಿಸುತ್ತಿರುವ ವಿಜಯ ಜ್ಯೋತಿಯನ್ನು ಮಂಗಳವಾರ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಬಳಿ ಆಯೋಜಿಸಲಾಗಿದ್ದ ಸಮಾರಂಭದಲ್ಲಿ ಬರಮಾಡಿಕೊಂಡು, ಈ ಯುದ್ಧದಲ್ಲಿ ಪಾಲ್ಗೊಂಡಿದ್ದ ಹಿರಿಯ ಸೇನಾನಿಗಳಿಗೆ ಗೌರವ ಸಮರ್ಪಿಸಿ ಅವರು ಮಾತನಾಡಿದರು.

ಮಹಾವೀರ ಚಕ್ರ ಪ್ರಶಸ್ತಿ ಪುರಸ್ಕತರಿಗೆ 12 ಲಕ್ಷ ರೂ.ಗಳಿಂದ 50 ಲಕ್ಷ ರೂ.ಗಳಿಗೆ, ಕೀರ್ತಿ ಚಕ್ರ ಪ್ರಶಸ್ತಿ ಪುರಸ್ಕತರಿಗೆ ನೀಡಲಾಗುವ ಗೌರವದ ಧನದ ಮೊತ್ತವನ್ನು 15 ಲಕ್ಷ ರೂ.ಗಳಿಗೆ 50 ಲಕ್ಷ ರೂ.ಗಳಿಗೆ, ವೀರಚಕ್ರದ ಮೊತ್ತವನ್ನು 8 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹಾಗೂ ಶೌರ್ಯಚಕ್ರ ಪ್ರಶಸ್ತಿ ಮೊತ್ತವನ್ನು 8 ಲಕ್ಷ ರೂ.ಗಳಿಂದ 25 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಮ್ಮ ದೇಶದ ಸೇನೆ, ನೌಕಾಪಡೆ ಹಾಗೂ ವಾಯುಪಡೆಗಳು ಜನರ ಪ್ರಾಣ ರಕ್ಷಣೆ ಮಾಡಲು ಸದಾ ಸನ್ನದವಾಗಿವೆ. ಸೇನೆಯ ತ್ಯಾಗ, ಬಲಿದಾನವನ್ನು ಗೌರವಿಸುವುದು ದೇಶದ ಪ್ರತಿಯೊಬ್ಬ ನಾಗರಿಕ ಕರ್ತವ್ಯವಾಗಿದೆ. 1971ರಲ್ಲಿ ಭಾರತ-ಪಾಕ್ ನಡುವೆ ನಡೆದ ಯುದ್ಧದಲ್ಲಿ ಹೋರಾಡಿ ದೇಶಕ್ಕೆ ಕೀರ್ತಿ ತಂದ ಹೆಮ್ಮೆಯ ಸೇನಾನಿಗಳಿಗೆ ನನ್ನ ಅಭಿನಂದನೆಗಳು ಎಂದು ಮುಖ್ಯಮಂತ್ರಿ ತಿಳಿಸಿದರು.

ದೇಶದ ಮಣ್ಣಿನ ವೀರಸೇನಾನಿಗಳಿಗೆ ಗೌರವ ಅರ್ಪಿಸುವ ಸುಸಂದರ್ಭ ಬಂದಿದೆ. 1971ರ ಭಾರತ-ಪಾಕ್ ಯುದ್ದದಲ್ಲಿ ಭಾರತ ಜಯಗೊಂಡ 50 ವರ್ಷದ ಸ್ಮರಣೆಯ ಆಚರಣೆಗೆ ಪ್ರಧಾನಿ ನರೇಂದ್ರ ಮೋದಿ ಕಳೆದ ಸಾಲಿನ ಡಿಸೆಂಬರ್ 16ರಂದು ದಿಲ್ಲಿಯಲ್ಲಿರುವ ಯುದ್ಧ ಸ್ಮಾರಕದ ಬಳಿ ಚಾಲನೆ ನೀಡಿದರು. ಈಗ ಈ ದೀಪವು ನಮ್ಮ ರಾಜ್ಯಕ್ಕೆ ಆಗಮಿಸಿದ್ದು, ಮಾರ್ಚ್ 5ರ ವರೆಗೆ ಇಲ್ಲಿರುತ್ತದೆ. ದೇಶವು ಈ ಸ್ವರ್ಣ ವಿಜಯ ವರ್ಷವನ್ನು ಇಡೀ ವರ್ಷ ಆಚರಿಸಲಿದೆ ಎಂದು ಯಡಿಯೂರಪ್ಪ ಹೇಳಿದರು.

1971 ಇಂಡೋ ಪಾಕ್ ಯುದ್ಧದಲ್ಲಿ ಹುತಾತ್ಮರಾದ ಲೆಫ್ಟಿನೆಂಟ್ ಕಮಾಂಡರ್ ಜೆಪಿಎ ನರೋನ್ಹ ಅವರ ಬದಲಿಗೆ ಅವರ ಪತ್ನಿ ತೆರೆಸಾ ನರೋನ್ಹ ಅವರಿಗೆ ಮಹಾವೀರ ಚಕ್ರ, ಯುದ್ಧದಲ್ಲಿ ಹೋರಾಡಿದ ನೌಕಾಪಡೆ ಅಡ್ಮಿರಲ್ ಸಂತೋಷ್ ಕುಮಾರ್ ಗುಪ್ತ ಅವರಿಗೆ ಮಹಾವೀರ ಚಕ್ರ, ಮೇಜರ್ ಜನರಲ್ ಕುಪ್ಪಂದ ಪೊನ್ನಪ್ಪ ನಂಜಪ್ಪ ಅವರಿಗೆ ವೀರಚಕ್ರ, ಬ್ರಿಗೇಡ್ ಪಿ.ವಿ.ಸಹದೇವನ್ ಅವರಿಗೆ ವೀರಚಕ್ರ, ಅಡ್ಮಿರಲ್ ರಿಷಿರಾಜ್ ಸೂದ್ ಅವರಿಗೆ ವೀರಚಕ್ರ, ಲೆಪ್ಟಿನೆಂಟ್ ಕೇಶವ್ ಸಿಂಗ್ ಪನ್ವರ್ ಅವರಿಗೆ ವೀರಚಕ್ರ ವಿಮಾನ ಲೆಫ್ಟಿನೆಂಟ್ ಅಸ್ಪಾರಿ ರಘುನಾಥನ್ ಅವರಿಗೆ ವೀರಚಕ್ರ ಪ್ರಶಸ್ತಿ ಸಂದಿದ್ದು, ಇವರುಗಳಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಸನ್ಮಾನಿಸಿದರು.  

ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಕಂದಾಯ ಸಚಿವ ಆರ್.ಅಶೋಕ್, ಸರಕಾರದ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಅಪರ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಿಲ್, ವಿವಿಧ ಸೇನಾ ಮುಖ್ಯಸ್ಥರು ಹಾಗೂ ಅವರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News