ಮೋದಿ ಸರಕಾರದ ‘ಖಾಸಗೀಕರಣ ನೀತಿ’ ವಿರೋಧಿಸಿ ಮಾ.15ರಿಂದ ಎರಡು ದಿನ ಬ್ಯಾಂಕ್ ಮುಷ್ಕರ

Update: 2021-03-04 12:20 GMT
ಸಾಂದರ್ಭಿಕ ಚಿತ್ರ (PTI)

ಬೆಂಗಳೂರು, ಮಾ.4: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‍ಗಳ ಖಾಸಗೀಕರಣ ಮಾಡುವುದನ್ನು ಕೈಬಿಡಬೇಕೆಂದು ಆಗ್ರಹಿಸಿ ಮಾ.15ರಿಂದ ಎರಡು ದಿನಗಳ ಕಾಲ ಮುಷ್ಕರ ನಡೆಸಲಾಗುವುದೆಂದು ಬ್ಯಾಂಕ್ ಯೂನಿಯನ್‍ಗಳ ಸಂಯುಕ್ತ ವೇದಿಕೆ-ಕರ್ನಾಟಕ ತಿಳಿಸಿದೆ.

ಗುರುವಾರ ನಗರದ ಪ್ರೆಸ್‍ಕ್ಲಬ್‍ನಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ವೇದಿಕೆಯ ರಾಜ್ಯ ಸಂಚಾಲಕ ಎಸ್.ಕೆ.ಶ್ರೀನಿವಾಸ್, ಮಾ.15 ಮತ್ತು 16ರಂದು ಅಖಿಲ ಭಾರತ ಬ್ಯಾಂಕ್ ನೌಕರರ ಒಕ್ಕೂಟ(ಎಐಬಿಇಎ) ಸೇರಿದಂತೆ 9 ಬ್ಯಾಂಕ್ ಯೂನಿಯನ್‍ಗಳ ಒಕ್ಕೂಟ (ಯುಎಫ್‍ಬಿಯು) ಈ ಮುಷ್ಕರಕ್ಕೆ ಕರೆ ನೀಡಿದ್ದು, ಎರಡು ದಿನಗಳ ಕಾಲ ರಾಜಧಾನಿ ಬೆಂಗಳೂರು ಸೇರಿದಂತೆ ಗ್ರಾಮೀಣ ಭಾಗದ ಬ್ಯಾಂಕುಗಳ ಸೇವೆಗಳಲ್ಲಿ ವ್ಯತ್ಯಯ ಆಗಲಿದೆ ಎಂದು ತಿಳಿಸಿದರು.

ಅಂದು ಬೆಂಗಳೂರಿನ ಮೈಸೂರು ಬ್ಯಾಂಕ್ ವೃತ್ತದಲ್ಲಿ ಕರ್ತವ್ಯಕ್ಕೆ ಹಾಜರಾಗದೆ, ಸಾವಿರಾರು ಬ್ಯಾಂಕ್ ನೌಕರರು ಧರಣಿ ನಡೆಸಲಿದ್ದಾರೆ ಎಂದು ಮಾಹಿತಿ ನೀಡಿದ ಅವರು, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಕೇಂದ್ರ ಬಜೆಟ್‍ನಲ್ಲಿ ಸರಕಾರದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಭಾಗವಾಗಿ ಸಾರ್ವಜನಿಕ ರಂಗದ ಎರಡು ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಿಸಿರುವುದು ಸೂಕ್ತವಾದ ಕ್ರಮವಲ್ಲ ಎಂದು ವಾಗ್ದಾಳಿ ನಡೆಸಿದರು.

ಇತ್ತೀಚಿಗೆ ಕೇಂದ್ರ ಬಜೆಟ್‍ನಲ್ಲಿ ನಿರ್ಮಲಾ ಸೀತಾರಾಮನ್, ಸರಕಾರದ ಬಂಡವಾಳ ಹಿಂತೆಗೆತ ಪ್ರಕ್ರಿಯೆ ಭಾಗವಾಗಿ ಸಾರ್ವಜನಿಕ ರಂಗದ ಎರಡು ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುವುದಾಗಿ ಘೋಷಿಸಿದ್ದರು. ಅಲ್ಲದೆ, ಈಗಾಗಲೇ ಸರಕಾರ ಐಡಿಬಿಐ ಬ್ಯಾಂಕ್‍ನಲ್ಲಿದ್ದ ತನ್ನ ಷೇರನ್ನು ಎಲ್‍ಐಸಿಗೆ 2019ರಲ್ಲಿ ಮಾರಾಟ ಮಾಡಿದೆ. ಜತೆಗೆ 14 ಸಾರ್ವಜನಿಕ ರಂಗದ ಬ್ಯಾಂಕ್‍ಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಇತರ ಬ್ಯಾಂಕ್‍ಗಳೊಂದಿಗೆ ವಿಲೀನಗೊಳಿಸಿದೆ. ಆದರೂ, ಈಗ ಬ್ಯಾಂಕ್‍ಗಳನ್ನು ಖಾಸಗೀಕರಣ ಮಾಡುವ ಸರಕಾರದ ತೀರ್ಮಾನ ಖಂಡನೀಯ ಎಂದರು.

ಐಡಿಬಿಐ ಹಾಗೂ ಇನ್ನೆರಡು ಬ್ಯಾಂಕ್‍ಗಳ ಖಾಸಗೀಕರಣ, ಬ್ಯಾಡ್ ಬ್ಯಾಂಕ್ ಸ್ಥಾಪನೆ, ಎಲ್‍ಐಸಿಯಿಂದ ಹೂಡಿಕೆ ಹಿಂತೆಗೆದುಕೊಳ್ಳುವಿಕೆ, ಇನ್ಶೂರೆನ್ಸ್ ಕಂಪನಿಯೊಂದರ ಖಾಸಗೀಕರಣ, ವಿಮಾ ವಲಯದಲ್ಲಿ ಎಫ್‍ಡಿಐ ಶೇ.74ಕ್ಕೆ ಏರಿಕೆ, ಆಕ್ರಮಣಕಾರಿ ಬಂಡವಾಳ ಹಿಂತೆಗೆತ, ಸಾರ್ವಜನಿಕ ರಂಗದ ಸಂಸ್ಥೆಗಳ ಮಾರಾಟ. ಹೀಗೆ, ಈ ಎಲ್ಲ ನಿರ್ಧಾರಗಳನ್ನು ವಿರೋಧಿಸಲು ಸಂಘಟನೆಗಳು ನಿರ್ಧರಿಸಿದ್ದು, ಈ ಹಿನ್ನೆಲೆಯಲ್ಲಿ ಹೋರಾಟ ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News