ಬಿಜೆಪಿ ಆಡಳಿತದಲ್ಲಿ ಕೇವಲ ಶ್ರೀಮಂತರ ಅಭಿವೃದ್ಧಿ: ಸಿದ್ದರಾಮಯ್ಯ

Update: 2021-03-04 16:42 GMT

ಚಿಕ್ಕಬಳ್ಳಾಪುರ: ಬಡವರು ಹಸಿದು ಮಲಗಬಾರದೆಂದು ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ 7 ಕೆಜಿ ಅಕ್ಕಿ ನೀಡಲಾಗುತ್ತಿದ್ದು, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಬಡಕುಟುಂಬದ ಪ್ರತಿ ವ್ಯಕ್ತಿಗೆ 10 ಕೆಜಿ ಅಕ್ಕಿ ನೀಡಲಾಗುವುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನುಡಿದರು. 

ನಗರದಲ್ಲಿ ಹಮ್ಮಿಕೊಂಡಿದ್ದ ಜನಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರೈತರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರನ್ನು ಶೋಷಿಸುತ್ತಿದ್ದು, ಇವರ ಆಡಳಿತದಲ್ಲಿ ಕೇವಲ ಶ್ರೀಮಂತರು ಅಭಿವೃದ್ಧಿ ಹೊಂದುತ್ತಿದ್ದಾರೆ. ಇದರಿಂದ ಜನಸಾಮಾನ್ಯರ ಸಮಸ್ಯೆಗಳಿಗೆ ಪರಿಹಾರ ಕೊಡಿಸಲು ಪಕ್ಷವು ಬೀದಿಗಿಳಿದು ಹೋರಾಟ ಮಾಡುತ್ತಿದೆ ಎಂದು ನುಡಿದರು.

ಸದಾ ಬರಕ್ಕೆ ತುತ್ತಾಗುವ ಚಿಕ್ಕಬಳ್ಳಾಪುರ, ಕೋಲಾರ ಜಿಲ್ಲೆಗಳಿಗೆ ತಮ್ಮ ಅವಧಿಯಲ್ಲಿ 13 ಸಾವಿರ ಕೋಟಿ ವೆಚ್ಚದ ಎತ್ತಿನಹೊಳೆ ಯೋಜನೆಯಡಿ ಕುಡಿಯುವ ನೀರೊದಗಿಸುವ ಕಾಮಗಾರಿ, ಅಂತರ್ಜಲ ವೃದ್ಧಿಗಾಗಿ ಎಚ್‍ಎನ್ ವ್ಯಾಲಿ, ಕೆಸಿ ವ್ಯಾಲಿ ಯೋಜನೆಗಳನ್ನು ಜಾರಿಗೊಳಿಸಲಾಗಿದೆ. ಇಂತಹ ಜನಪರ ಯೋಜನೆಗಳನ್ನು ಬಿಜೆಪಿಯವರಾಗಲೀ, ಜೆಡಿಎಸ್‍ನವರಾಗಲೀ ಮಾಡಿದ್ದರಾ?, ಇದನ್ನು ವಿರೋಧಿಸಿದ ಜೆಡಿಎಸ್‍ನವರು ಮಣ್ಣಿನ ಮಕ್ಕಳಾ ಎಂದು ಪ್ರಶ್ನಿಸಿದರು.

ಚಿಕ್ಕಬಳ್ಳಾಪುರಕ್ಕೆ ಮೆಡಿಕಲ್ ಕಾಲೇಜು, ಎತ್ತಿನಹೊಳೆ, ಎಚ್‍ಎನ್ ವ್ಯಾಲಿ ಸೇರಿದಂತೆ ಹಲವು ಯೋಜನೆಗಳನ್ನು ನೀಡಿದ್ದರೂ ಕ್ಷೇತ್ರದ ಜನತೆ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸಿದ್ದಿರಿ, ಇದು ಮತ್ತೊಮ್ಮೆ ಮರುಕಳುಹಿಸಬಾರದು. ಬಡವರ, ದಲಿತರ, ರೈತರ, ಮಹಿಳೆಯರ ಪರವಾಗಿರುವ ಪಕ್ಷವಾಗಿರುವ ಕಾಂಗ್ರೆಸ್ಸನ್ನು ಬೆಂಬಲಿಸಬೇಕೆಂದು ಕೋರಿದರು.

"ಅಚ್ಚೇದಿನ್ ಕಬ್ ಆಯೇಗಾ!": 'ಅಚ್ಚೇ ದಿನ್ ಆಯೇಗಾ' ಎಂದು ಅಧಿಕಾರಕ್ಕೆ ಬಂದ ಮೋದೀಜಿ ಅವರೇ 'ಅಚ್ಚೇದಿನ್ ಕಬ್ ಆಯೇಗಾ' ಎಂದು ಕುಟಿಕಿದ ಸಿದ್ದರಾಮಯ್ಯ, ಡೀಸೆಲ್, ಪೆಟ್ರೋಲ್, ಅಡುಗೆ ಅನಿಲ ದರ ಏರಿಕೆಯಿಂದಾಗಿ ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯಲ್ಲಿ ಭಾರಿ ಏರಿಕೆ ಕಂಡು ಬರುತ್ತಿದ್ದು ಇದರಿಂದ ಜನಸಾಮಾನ್ಯರು, ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ. ಜನರು ನೆಮ್ಮದಿಯ ಜೀವನ ನಡೆಸಲು ಬಿಜೆಪಿ ಸರ್ಕಾರಗಳನ್ನು ಕಿತ್ತೊಗೆಯುವುದು ಒಂದೇ ಪರಿಹಾರವಾಗಿದೆ ಎಂದು ನುಡಿದರು.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮಾತನಾಡಿ, ಅಂತರ್ಜಲ ಕುಸಿತದ ನಡುವೆಯೂ ಕೃಷಿಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಿರುವ ಹಾಗೂ ಪುಣ್ಯಭೂಮಿಯಾಗಿರುವ ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಂದಲೇ ಬಿಜೆಪಿ ಸರ್ಕಾರದ ದುರಾಡಳಿತ ಕುರಿತು ಇಡೀ ದೇಶಕ್ಕೆ ಸಂದೇಶ ಸಾರಲಾಗುತ್ತಿದೆ ಎಂದು ನುಡಿದರು.

ಯಾವುದೇ ಶಾಶ್ವತ ಯೋಜನೆಗಳನ್ನು ನೀಡದೇ ಜನರನ್ನು ಮೋಸದ ಮಾತುಗಳಿಂದ ಮರಳು ಮಾಡುತ್ತಿರುವ ಬಿಜೆಪಿಗೆ ಮುಂದಿನ ಚುನಾವಣೆಯಲ್ಲಿ ತಕ್ಕ ಶಾಸ್ತಿಯಾಗಲಿದ್ದು, ಜಿಲ್ಲೆಯ ಐದೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂಬ ವಿಶ್ವಾಸವಿದೆ. ಬಿಜೆಪಿ ಅಧಿಕಾರಾವಧಿಯಲ್ಲಿ ಲಂಚಾವತಾರ ಜಾಸ್ತಿಯಾಗುತ್ತಿದ್ದು, ಕೈ ಕಾರ್ಯಕರ್ತರ ಮೇಲೆ ಕಿರುಕುಳ ನೀಡುವುದು ಕಂಡುಬರುತ್ತಿದೆ. ಇದು ಹೀಗೆ ಮುಂದುವರೆದಲ್ಲಿ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ. ನಿನ್ನೆ ಮಂತ್ರಿಯಾಗಿದ್ದವರು ಇಂದು ಮಂತ್ರಿಯಾಗಿಲ್ಲ. ಅಧಿಕಾರ ಶಾಶ್ವತವಲ್ಲ ಎಂಬುದನ್ನು ಅರಿಯಬೇಕೆಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಪಕ್ಷವು ಸೋತ ಸುಮಾರು 100 ವಿಧಾನಸಭಾ ಕ್ಷೇತ್ರಗಳಲ್ಲಿ ಪ್ರವಾಸ ಮಾಡುವ ಮೂಲಕ ಬಿಜೆಪಿಯ ಜನವಿರೋಧಿ ಆಡಳಿತದ ಕುರಿತು ಜಾಗೃತಿ ಮೂಡಿಸುವುದು ಈ ಯಾತ್ರೆ ಉದ್ದೇಶವಾಗಿದೆ ಎಂದು ಮಾಜಿ ಸಂಸದ ಎಂ.ವೀರಪ್ಪ ಮೊಯ್ಲಿ ಹೇಳಿದರು. ನರೇಂದ್ರ ಮೋದಿ ಬ್ರಿಟೀಷರ ಮನಸ್ಥಿತಿಯುಳ್ಳವರು, ದೇಶದ ರೈತರು ಅನ್ನ ನೀರು ಬಿಟ್ಟು ಹೋರಾಟ ಮಾಡುತ್ತಿದ್ದರೂ ಪ್ರಧಾನಿಗೆ ಕೇಳುವ ವ್ಯವಧಾನ ಇಲ್ಲ. ಗೌರಿಬಿದನೂರಿನ ವಿಧುರಾಶ್ವತ್ಥದಲ್ಲಿ ಬ್ರಿಟೀಷರ ಗುಂಡಿಗೆ 32 ರೈತರು ಬಲಿಯಾದರು. ಈಗ ಪ್ರತಿಭಟನೆಯಲ್ಲಿ ತೊಡಗಿದ್ದ 100 ರೈತರು ಮೃತರಾಗಿದ್ದಾರೆ. ಬ್ರಿಟೀಷರಿಗೂ ಪ್ರಧಾನಿ ಮೋದಿಗೂ ವ್ಯತ್ಯಾಸವಿಲ್ಲ ಎಂದು ಟೀಕಿಸಿದರು.

ಪೆಟ್ರೋಲ್ ಡಿಸೇಲ್ ಅಡುಗೆ ಅನಿಲದ ಬೆಲೆ ಈಗ ಗಣನೀಯವಾಗಿ ಹೆಚ್ಚುತ್ತಿದೆ. ಅಡುಗೆ ಅನಿಲಕ್ಕೆ ನಮ್ಮ ಸರ್ಕಾರ ಕೇಂದ್ರದಲ್ಲಿ ಅಧಿಕಾರದಲ್ಲಿ ಇದ್ದಾಗ ಐದು ಲಕ್ಷ ಕೋಟಿ ಸಬ್ಸಿಡಿ ಕೊಡುತ್ತಿದ್ದೆವು. ಆದರೆ ಈಗ ಎಲ್ಲವನ್ನೂ ಜನರ ಮೇಲೆ ಹೊರಿಸಲಾಗುತ್ತಿದೆ ಎಂದು ಟೀಕಿಸಿದರು.

ಜನಧ್ವನಿ ಯಾತ್ರೆಯ ಹಿನ್ನೆಲೆಯಲ್ಲಿ ಜಿಲ್ಲಾಕೇಂದ್ರಕ್ಕೆ ಆಗಮಿಸಿದ್ದ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಇತರೆ ಮುಖಂಡರನ್ನು ಕಾಂಗ್ರೆಸ್ ಕಾರ್ಯಕರ್ತರು ಅದ್ಧೂರಿಯಾಗಿ ಸ್ವಾಗತಿಸಿದರು. ಜಿಲ್ಲೆಯ ಮೂಲೆ ಮೂಲೆಗಳಿಂದ ಎತ್ತಿನ ಬಂಡಿ, ಟ್ರಾಕ್ಟರ್ ಸೇರಿದಂತೆ ವಿವಿಧ ವಾಹನಗಳಲ್ಲಿ ಜನರ ದಂಡು ಜಿಲ್ಲಾ ಕೇಂದ್ರಕ್ಕೆ ಲಗೆಯಿಟ್ಟ ಪರಿಣಾಮ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಾಗಿತ್ತು. ಅಲ್ಲದೆ ಕೈ ನಾಯಕರು ಜನಧ್ವನಿ ಯಾತ್ರೆಯನ್ನು ತಮ್ಮ ಶಕ್ತಿ ಪ್ರದರ್ಶನದ ವೇದಿಕೆಯನ್ನಾಗಿ ಮಾರ್ಪಡಿಸಿಕೊಂಡಿದ್ದು ವಿಶೇಷವಾಗಿತ್ತು.

ಕಂದವಾರ ಕೆರೆಗೆ ಬಾಗೀನ: ಚಿಕ್ಕಬಳ್ಳಾಪುರ ನಗರದ ಕಂದವಾರ ಕೆರೆಗೆ ಮಾಜಿ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಬಾಗಿನ ಅರ್ಪಿಸಿದರು. ಈ ವೇಳೆ ಮಾತನಾಡಿದ ಸಿದ್ದರಾಮಯ್ಯ ತಮ್ಮ ಅವಧಿಯಲ್ಲಿ ಜಿಲ್ಲೆಯ ಅಂತರ್ಜಲ ವೃದ್ಧಿಗಾಗಿ ಜಾರಿಗೊಂಡಿರುವ ಎಚ್‍ಎನ್ ವ್ಯಾಲಿಯಿಂದ ಈ ಭಾಗದ ಕೆರೆಗಳು ತುಂಬಿ ಹರಿಯುತ್ತಿರುವುದು ಸಂತಸ ತಂದಿದೆ ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News