ಕೋಲಾರ: ನಗರಸಭೆ ಸಾಮಾನ್ಯ ಸಭೆಯಲ್ಲಿ ಗದ್ದಲ

Update: 2021-03-04 17:21 GMT

ಕೋಲಾರ: ಇಲ್ಲಿನ ನಗರಸಭೆ ಕಚೇರಿಯಲ್ಲಿ ನಗರಸಭೆ ಅಧ್ಯಕ್ಷೆ ಶ್ವೇತಾ ಶಬರೀಶ್ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ತುರ್ತು ಸಾಮಾನ್ಯ ಸಭೆ ಗೊಂದಲದ ಗೂಡಾಗಿತ್ತು. 15ನೇ ಹಣಕಾಸು ಯೋಜನೆಯಡಿ ಎಸ್.ಸಿ.ಪಿ./ಟಿ.ಎಸ್.ಪಿ.ಗೆ ಮೀಸಲಾದ ಅನುದಾನವನ್ನು ನಗರದ ಅಂಬೇಡ್ಕರ್ ಭವನಕ್ಕೆ ರಸ್ತೆ ಅಭಿವೃದ್ಧಿ, ಸುಣ್ಣ, ಬಣ್ಣ ಹಾಗೂ ಅಂಬೇಡ್ಕರ್ ಭವನಕ್ಕೆ ಮೂಲಭೂತ ಸೌಕರ್ಯ ಕಲ್ಪಿಸುವ ಕ್ರಿಯಾ ಯೋಜನೆಗೆ ಅನುಮೋದನೆ ಪಡೆಯುವ ವಿಚಾರವಾಗಿ ಸಭೆಯಲ್ಲಿ ವಿಷಯ ಪ್ರಸ್ತಾಪವಾಗುತ್ತಿದ್ದಂತೆ, ಸದಸ್ಯರಾದ ಅಂಬರೀಶ್, ಸುರೇಶ್ ಹಾಗೂ ಇತರೆ ಸದಸ್ಯರು ಒಪ್ಪಿಗೆ ನೀಡಿದರು. ಇದಕ್ಕೆ ಅಕ್ಷೇಪ ವ್ಯಕ್ತಪಡಿಸಿದ ಸದಸ್ಯ ಬಿ.ಎಂ.ಮುಬಾರಕ್, ಅಂಬೇಡ್ಕರ್ ಭವನ ಪುನಶ್ಚೇತನಕ್ಕೆ ಮೀಸಲಿರಿಸಿರುವ ಅನುದಾನ ವಾಪಸ್ ಪಡೆದು, ಸರ್ಕಾರಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ಅಥವಾ ಟ್ಯಾಬ್ ಕೊಡಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಇದಕ್ಕೆ ವಿರೋಧ ವ್ಯಕ್ತಪಡಿಸಿದ ಸದಸ್ಯ ಅಂಬರೀಶ್, ಅಂಬೇಡ್ಕರ್ ಭವನವೇನು ನಗರಸಭೆ ವ್ಯಾಪ್ತಿಗೆ ಒಳಪಡುವುದಿಲ್ಲವೇ. ಅದರ ನವೀಕರಣಕ್ಕೆ ಯಾಕೆ ವಿರೋಧ ಮಾಡುತ್ತೀದೀರ ಎಂದು ವಾಗ್ವಾದಕ್ಕೆ ಇಳಿಯುತ್ತಾರೆ. ಇದಕ್ಕೆ ಪ್ರತಿಕ್ರಿಯಿಸಿದ ಸದಸ್ಯ ಮುಬಾರಕ್ ಅಂಬೇಡ್ಕರ್ ಭವನ ಅಭಿವೃದ್ಧಿಗೆ ಜಿಲ್ಲಾ ಪಂಚಾಯ್ತಿ. ಸಮಾಜ ಕಲ್ಯಾಣಾ ಇಲಾಖೆ ಹಾಗೂ ಅಂಬೇಡ್ಕರ್ ಅಭಿವೃದ್ಧಿ ನಿಗಮದಲ್ಲಿ ಅವಕಾಶ ಇದೆ. ಹಾಗಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ಧಿಗೆ ಅನುದಾನ ಬಳಕೆ ಮಾಡೋನ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

ಇದರಿಂದ ಆಕ್ರೋಶಗೊಂಡ ಸದಸ್ಯರಾದ ಸುರೇಶ್, ರಾಕೇಶ್, ಅಂಬರೀಶ್, ಅಂಬೇಡ್ಕರ್ ಭವನ ಅಭಿವೃದ್ಧಿಗಾಗಿ ಅನುದಾನ ಬಿಡುಗಡೆಗೆ ಮಂಜೂರಾತಿ ಕೊಟ್ಟು ಹೇಗೆ ರದ್ದು ಮಾಡಿದ್ದೀರ. ಈ ಬಗ್ಗೆ ಕೂಡಲೇ ಸ್ಪಷ್ಟೀಕರಣ ಕೊಡಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ನಗಸಭೆಯ ಪ್ರತಿ ಸದಸ್ಯರೂ ಅಂಬೇಡ್ಕರ್ ರಚನೆ ಮಾಡಿರುವ ಸಂವಿಧಾನದ ಅಡಿಯಲ್ಲಿ ಆಯ್ಕೆಯಾಗಿ ಬಂದಿದ್ದಾರೆ. ಆದರೆ ಉದ್ದೇಶ ಪೂರ್ವಕವಾಗಿಯೇ ಷಡ್ಯಂತರ ರೂಪಿಸಿ ಅಂಬೇಡ್ಕರ್ ಭವನ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದ್ದಾರೆ. ಪರಿಶಿಷ್ಟ ಸಮುದಾಯದ ಸದಸ್ಯರಿಗೆ ಬೆದರಿಕೆ ಹಾಕುವ ಕೆಲಸ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿದರು.

ಈ ವಿಚಾರವಾಗಿ ಪರಿಸ್ಥಿತಿ ತೀವ್ರಗೊಂಡ ಹಿನ್ನಲೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಮಂಜುನಾಥ್, ಸಮಜಾಯಿಷಿ ನೀಡಲು ಮುಂದಾದಾಗ ಉಭಯ ಸದಸ್ಯರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸುವ ಹಂತಕ್ಕೆ ತಲುಪಿತು. ನಂತರ ಉಪಾಧ್ಯಕ್ಷ ಪ್ರವೀಣ್ ಗೌಡ, ಪೌರಾಯುಕ್ತ ಮಧ್ಯ ಪ್ರವೇಶ ಮಾಡಿ ಪತಿಸ್ಥಿತಿಯನ್ನು ತಿಳಿಗೊಳಿಸಿದರು. ಅಂಬೇಡ್ಕರ್ ಭವನ ಅಭಿವೃದ್ಧಿಗೆ ಸಂಬಂಧಿಸಿದ ಅನುಮೋದನೆ ನೀಡಬೇಕಾದ ಸದಸ್ಯರು ಅಂತಿಮವಾಗಿ ತೀರ್ಮಾನವನ್ನು ಅಧ್ಯಕ್ಷರಿಗೆ ಬಿಟ್ಟಿದ್ದು ಈ ವಿಚಾರ  ಮುಂದಿನ ದಿನಗಳಲ್ಲೂ ಚರ್ಚೆಗೆ ಗ್ರಾಸವಾಗುವ ಸಾಧ್ಯತೆ ಇದೆ. 

ನಂತರ ಸದಸ್ಯ ರಾಕೇಶ್ ಮಾತನಾಡಿ, ನಗರದ ಪ್ರತಿ ವಾರ್ಡ್‍ಗೂ ಅನುದಾನ ನೀಡಲಾಗಿದೆ. ಆದರೆ ನನ್ನ ವ್ಯಾಪ್ತಿಯ ವಾರ್ಡ್‍ಗೆ ಹಣ ಕೊಟ್ಟಿಲ್ಲ. ಯಾರ ಅನುಮತಿ ಪಡೆದು 12 ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ ಎಂದು ಪ್ರಶ್ನಿಸಿದರು. ನಗರಕ್ಕೆ ಅಮೃತ್ ಸಿಟಿ ಕೆಲಸ ಮಾಡಲು ಬಂದವರು ಹಾಳು ಮಾಡಿ ಹೋಗಿದ್ದಾರೆ. ಬೀದಿ ದೀಪಗಳು ಸಮರ್ಪಕವಾಗಿಲ್ಲ. ಕನಿಷ್ಠ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಲು ನಗರಸಭೆಗೆ ಯೋಗ್ಯತೆಯಿಲ್ಲವೇ ಎಂದು ತರಾಟೆಗೆ ತೆಗೆದುಕೊಂಡರು.

ಇದಕ್ಕೆ ಪ್ರತಿಕ್ರಿಯಿಸಿದ ಪೌರಾಯುಕ್ತ ಶ್ರೀಕಾಂತ್, ಇಂಜನಿಯರ್ ತಯಾರಿಸಿಕೊಟ್ಟಿರುವ ಕ್ರಿಯಾಯೋಜನೆ ಪ್ರಕಾರ ಕಾಮಗಾರಿಗಳಿಗೆ ಟೆಂಡರ್ ಕರೆಯಲಾಗಿದೆ. ಮತ್ತೊಮ್ಮೆ ಪರಿಶೀಲಿಸಿ ಟೆಂಡರ್‍ನಲ್ಲಿ ಲೋಪದೋಷಗಳು ಇದ್ದರೆ ಸರಿಪಡಿಸಿ ಮರು ಟೆಂಡರ್ ಕರೆಯಲು ಕ್ರಮಕೈಗೊಳ್ಳುತ್ತೆವೆ ಎಂದು ಭರವಸೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News