ಸಾಮಾಜಿಕ-ಆರ್ಥಿಕ ಸಮೀಕ್ಷೆ ವರದಿ ಬಹಿರಂಗಕ್ಕೆ ಪರಿಷತ್ ಸದಸ್ಯರಿಂದ ಒಕ್ಕೊರಲಿನ ಒತ್ತಾಯ

Update: 2021-03-04 18:01 GMT

ಬೆಂಗಳೂರು, ಮಾ.4: ಕರ್ನಾಟಕ ರಾಜ್ಯದಲ್ಲಿ 162 ಕೋಟಿ ರೂ.ಗಳಷ್ಟು ವೆಚ್ಚದಲ್ಲಿ ಸಿದ್ಧಪಡಿಸಿರುವ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ) ವರದಿಯನ್ನು ಈ ಕೂಡಲೇ ಬಹಿರಂಗಪಡಿಸಬೇಕೆಂದು ಪರಿಷತ್‍ನಲ್ಲಿ ಆಡಳಿತ-ಪ್ರತಿಪಕ್ಷಗಳ ಸದಸ್ಯರು ಒಕ್ಕೊರಲಿನಿಂದ ಒತ್ತಾಯಿಸಿದರು. ಈ ಒತ್ತಾಯಕ್ಕೆ ಮಣಿದು ಪ್ರತಿಕ್ರಿಯಿಸಿದ ಮುಜರಾಯಿ ಸಚಿವ ಕೋಟಾ ಶ್ರೀನಿವಾಸ ಪೂಜಾರಿ ಅವರು ಸರಕಾರದ ಜೊತೆಗೆ ಚರ್ಚೆ ನಡೆಸಿ ಬಳಿಕ  ಬಹಿರಂಗಪಡಿಸಲಾಗುವುದು ಎಂದು ಹೇಳಿದರು. 

ಗುರುವಾರ ವಿಧಾನ ಪರಿಷತ್‍ನಲ್ಲಿ ಗಮನ ಸೆಳೆಯುವ ಸೂಚನೆ ಅಡಿಯಲ್ಲಿ ಸದಸ್ಯರಾದ ಕೆ.ಪಿ.ನಂಜುಂಡಿ, ಎಸ್.ಆರ್.ಪಾಟೀಲ್, ಎಚ್.ವಿಶ್ವನಾಥ್, ಮರಿತಿಬ್ಬೇಗೌಡ ಅವರು ಮಾತನಾಡಿ,  ಈ ಕೂಡಲೇ ರಾಜ್ಯ ಸರಕಾರ ಎಲ್ಲ ಸಮುದಾಯಗಳ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ(ಜಾತಿ ಗಣತಿ)ಯ ವರದಿಯನ್ನು ಬಹಿರಂಗಪಡಿಸಿ ಚರ್ಚೆಗೆ ಅನುವು ಮಾಡಿಕೊಡಬೇಕೆಂದು ಹೇಳಿದರು.

ಬಿಜೆಪಿ ಸದಸ್ಯ ಎಚ್.ವಿಶ್ವನಾಥ್ ಮಾತನಾಡಿ, ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗಿದ್ದಾಗ  ಜಾತಿಗಣತಿ ಸಮೀಕ್ಷೆಗೆ ಸೂಚನೆ ನೀಡಿದರು. ಆದರೆ, ಆ ವರದಿಯನ್ನು ಜಾರಿಗೊಳಿಸಲಿಲ್ಲ. ಆದರೆ, ದೇವರಾಜ ಅರಸು ಅವರು ಧ್ವನಿ ಇಲ್ಲದ ಸಮುದಾಯಗಳಿಗೆ ಶಕ್ತಿ ತುಂಬುವ ದೃಷ್ಟಿಯಿಂದ ಹಾವನೂರು ಆಯೋಗದ ವರದಿಯನ್ನು ಬಹಿರಂಗಪಡಿಸಿ ಕೆಳ ಸಮುದಾಯಕ್ಕೆ ಶಕ್ತಿ ತುಂಬಿದರು. ಅದೇ ರೀತಿಯಾಗಿ ಈಗಿನ ಸರಕಾರ ಕೂಡ ಕಾಂತರಾಜ್ ಆಯೋಗದ ವರದಿಯನ್ನು ಬಹಿರಂಗಪಡಿಸಬೇಕೆಂದು ಒತ್ತಾಯಿಸಿದರು.

ಪರಿಷತ್‍ನ ವಿರೋಧ ಪಕ್ಷದ ನಾಯಕ ಎಸ್.ಆರ್.ಪಾಟೀಲ್ ಮಾತನಾಡಿ, ಮೀಸಲಾತಿಗಾಗಿ ಪಂಚಮಸಾಲಿ ಸಮುದಾಯ, ಎಸ್ಟಿ ಸಮುದಾಯ, ಕುರುಬ ಸಮುದಾಯ ಪಾದಯಾತ್ರೆ ಮಾಡಿ ಸಮಾವೇಶಗಳನ್ನು ಆಯೋಜಿಸಿ ಯಶಸ್ವಿಯಾಗಿವೆ. ಹೀಗಾಗಿ, ಸರಕಾರ ವೈಜ್ಞಾನಿಕ ಕ್ರಮ ಕೈಗೊಳ್ಳಲು ಮುಂದಾಗಬೇಕು ಹಾಗೂ ಜಾತಿಗಣತಿ ವರದಿಯನ್ನು ಬಹಿರಂಗಪಡಿಸಬೇಕೆಂದು ಆಗ್ರಹಿಸಿದರು. 

ಜೆಡಿಎಸ್ ಸದಸ್ಯ ಮರಿತಿಬ್ಬೇಗೌಡ ಮಾತನಾಡಿ, ಸರಕಾರಗಳ ಕೆಟ್ಟ ನಿರ್ಧಾರಗಳಿಂದಾಗಿ ಸ್ವಾಮೀಜಿಗಳು ಮೀಸಲಾತಿಗೆ ಸಂಬಂಧಪಟ್ಟಂತೆ ಸರಕಾರಕ್ಕೆ ಧಮ್ಕಿ ಹಾಕುವ ಮಟ್ಟಕ್ಕೆ ಬೆಳೆದಿದ್ದಾರೆ. ಸ್ವಾಮೀಜಿಗಳು ಹೋರಾಟ ಮಾಡುವ ಉದ್ದೇಶ ಏನಾದರೂ ಇದ್ದರೆ ಖಾವಿಯನ್ನು ತೆಗೆದು ಹೋರಾಟಕ್ಕೆ ಬರಬೇಕು ಎಂದು ಆಗ್ರಹಿಸಿದರು. ಸ್ವಾಮೀಜಿಗಳ ಕುರಿತು ಮಾತನಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿದ ಆಡಳಿತ-ವಿರೋಧ ಪಕ್ಷದ ಸದಸ್ಯರುಗಳು ಮರಿತಿಬ್ಬೇಗೌಡ ಅವರಿಗೆ ಸ್ವಾಮೀಜಿಗಳ ಖಾವಿಯ ಬಗ್ಗೆ ಎಲ್ಲ ಮಾತನಾಡಬಾರದು ಎಂದು ಸುಮ್ಮನಾಗಿಸಿದರು. ಬಿಜೆಪಿ ಸದಸ್ಯ ಕೆ.ಪಿ.ನಂಜುಂಡಿ ಕೂಡ ಮಾತನಾಡಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News