​ಭಾರತೀಯರು ಪ್ರತಿ ವರ್ಷ ವ್ಯರ್ಥ ಮಾಡುತ್ತಿರುವ ಆಹಾರ ಎಷ್ಟು ಗೊತ್ತೇ ?

Update: 2021-03-05 04:02 GMT

ಹೊಸದಿಲ್ಲಿ: ಜಾಗತಿಕ ಮಟ್ಟದಲ್ಲಿ ವರ್ಷಕ್ಕೆ 931 ದಶಲಕ್ಷ ಟನ್ ಆಹಾರ ಕಸದ ಬುಟ್ಟಿ ಸೇರುತ್ತಿದ್ದು, ಜಾಗತಿಕವಾಗಿ ಲಭ್ಯವಿರುವ ಒಟ್ಟು ಆಹಾರದ ಶೇಕಡ 17ರಷ್ಟು ಆಹಾರ ಮನೆಗಳಿಂದ, ಚಿಲ್ಲರೆ ಮಳಿಗೆಗಳು, ರೆಸ್ಟೋರೆಂಟ್ ಮತ್ತು ಇತರ ಆಹಾರ ಸೇವಾ ಸಂಸ್ಥೆಗಳಿಂದ ವ್ಯರ್ಥವಾಗುತ್ತಿವೆ ಎಂಬ ಆತಂಕಕಾರಿ ಅಂಶವನ್ನು 2021ರ ಫುಡ್ ವೇಸ್ಟ್ ಇಂಟ್ಸ್ ರಿಪೋರ್ಟ್-2021 ಬಹಿರಂಗಪಡಿಸಿದೆ.

ಯುನೈಟೆಡ್ ನೇಷನ್ಸ್ ಎನ್ವಿರಾನ್‌ಮೆಂಟ್ ಪ್ರೋಗ್ರಾಂ ಈ ಸೂಚ್ಯಂಕವನ್ನು ಬಿಡುಗಡೆ ಮಾಡಿದೆ.

ವಿಶ್ವದಲ್ಲಿ ಒಟ್ಟು ವ್ಯರ್ಥವಾಗುತ್ತಿರುವ ಆಹಾರ ಪ್ರಮಾಣ, ಭಾರತ ಪ್ರತಿ ವರ್ಷ ಉತ್ಪಾದಿಸುವ ಒಟ್ಟು ಆಹಾರಧಾನ್ಯ, ಎಣ್ಣೆಬೀಜ, ಕಬ್ಬು ಮತ್ತು ತೋಟಗಾರಿಕಾ ಬೆಳೆಗಳ ತೂಕಕ್ಕೆ ಸಮ. ಅತ್ಯಧಿಕ ಆಹಾರ ವ್ಯರ್ಥವಾಗುತ್ತಿರುವುದು ಮನೆಗಳಲ್ಲಿ. ಉಳಿದಂತೆ ಆಹಾರ ಸೇವಾ ಸಂಸ್ಥೆಗಳು ಹಾಗೂ ಚಿಲ್ಲರೆ ಮಳಿಗೆಗಳು ಅಧಿಕ ಪ್ರಮಾಣದ ಆಹಾರ ವ್ಯರ್ಥಮಾಡುತ್ತಿವೆ.

ಗ್ರಾಹಕಮಟ್ಟದಲ್ಲಿ ಜಾಗತಿಕವಾಗಿ ತಲಾ 121 ಕೆಜಿ ಆಹಾರ ವ್ಯರ್ಥವಾಗುತ್ತಿದೆ. ಈ ಪೈಕಿ 74 ಕೆಜಿ ಮನೆಗಳಲ್ಲಿ ವ್ಯರ್ಥವಾಗುತ್ತಿದೆ. ದಕ್ಷಿಣ ಏಷ್ಯಾದ ವಿಚಾರಕ್ಕೆ ಬಂದರೆ ಭಾರತದಲ್ಲಿ ವಾರ್ಷಿಕ ತಲಾ 50 ಕೆಜಿ ಆಹಾರ ವ್ಯರ್ಥವಾಗುತ್ತಿದೆ. ಅಪ್ಘಾನಿಸ್ತಾನ (82 ಕೆಜಿ), ನೇಪಾಳ (79 ಕೆಜಿ), ಶ್ರೀಲಂಕಾ (76 ಕೆಜಿ), ಪಾಕಿಸ್ತಾನ (74 ಕೆಜಿ) ಹಾಗೂ ಬಾಂಗ್ಲಾದೇಶ (65 ಕೆಜಿ)ಕ್ಕೆ ಹೋಲಿಸಿದರೆ ಭಾರತದಲ್ಲಿ ವ್ಯರ್ಥವಾಗುತ್ತಿರುವ ಪ್ರಮಾಣ ಕಡಿಮೆ.

ಪಶ್ಚಿಮ ಏಷ್ಯಾ ಮತ್ತು ಸಹರಾ ಉಪಖಂಡದ ಆಫ್ರಿಕನ್ ದೇಶಗಳಲ್ಲಿ ಮತ್ತು ಯೂರೋಪಿಯನ್ ಹಾಗೂ ಉತ್ತರ ಅಮೆರಿಕ ದೇಶಗಳಲ್ಲಿ ವ್ಯರ್ಥವಾಗುವ ಆಹಾರ ಅತ್ಯಧಿಕ.

ಫುಡ್ ಆ್ಯಂಡ್ ಅಗ್ರಿಕಲ್ಚರ್ ಆರ್ಗನೈಸೇಷನ್‌ನ ಅಂದಾಜಿನಂತೆ 2019ರಲ್ಲಿ ವಿಶ್ವದಲ್ಲಿ 690 ದಶಲಕ್ಷ ಮಂದಿ ಹಸಿವಿನ ಸಮಸ್ಯೆಯಿಂದ ಬಳಲುತ್ತಿದ್ದು, ಕೋವಿಡ್-19 ಕಾರಣದಿಂದ 2020ರಲ್ಲಿ ಈ ಪ್ರಮಾಣ ಹೆಚ್ಚುವ ಸಾಧ್ಯತೆ ಇದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News